ಶನಿವಾರಸಂತೆ, ಸೆ. 7 : ಶನಿವಾರಸಂತೆ ಗ್ರಾ.ಪಂ.ಯ ಮಾಸಿಕ ಸಾಮಾನ್ಯ ಸಭೆ ಅಧ್ಯಕ್ಷ ಎಂ. ಹೆಚ್. ಮಹಮ್ಮದ್ ಗೌಸ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಉದ್ಯೋಗ ಖಾತ್ರಿ ಯೋಜನೆಗೆ ಸಂಬಂಧಿಸಿದಂತೆ ಸದಸ್ಯರುಗಳಾದ ಸರ್ದಾರ್ ಅಹಮ್ಮದ್ ಹಾಗೂ ಹರೀಶ್ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ತೆರಾಟೆಗೆ ತೆಗೆದುಕೊಂಡರು.

ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಹಾಗೂ ಅಗತ್ಯತೆಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಕಾರ್ಯದರ್ಶಿಯವರ ಕಾರ್ಯ ವೈಖರಿಯ ಬಗ್ಗೆ ಟೀಕಿಸಿದ ಸದಸ್ಯರುಗಳಾದ ಎಸ್.ಎಸ್. ಪಾಂಡು, ಹರೀಶ್, ಪ್ರತಿ ವಿಭಾಗದಲ್ಲಿರುವ ಕೊಳವೆ ಬಾವಿಗಳ ಸಂಖ್ಯೆ ಪರಿಶೀಲಿಸಿ ದುರಸ್ತಿ ಬಗ್ಗೆ ಗಮನ ಹರಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿದರು

ಮದ್ಯದ ಅಂಗಡಿ ಲೈಸನ್ಸ್‍ಗೆ ಅರ್ಜಿ ಬಂದ ಹಿನ್ನೆಲೆಯಲ್ಲಿ ವಿಷಯ ಪ್ರಸ್ತಾಪವಾಗಿ ಈಗಾಗಲೇ ಬೈಪಾಸ್ ರಸ್ತೆಯ (ಪ್ರವಾಸಿ ಮಂದಿರದ ಬಳಿ)ಲ್ಲಿ ತೆರೆಯಲಾಗಿರುವ ಮದ್ಯದಂಗಡಿಗಳಿಗೆ ಪಂಚಾಯಿತಿಯಿಂದ ಎನ್.ಒ.ಸಿ. ಕೊಡದಿದ್ದರೂ, ಎನ್.ಒ.ಸಿ. ಇಲ್ಲದೆಯೇ ತೆರೆದಿರುವ ಮದ್ಯದ ಅಂಗಡಿಗಳ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತ ಪಡಿಸಿದರು.

ಬೈಪಾಸ್ ರಸ್ತೆಯಲ್ಲಿ ತೆರೆದಿರುವ ಮದ್ಯದ ಅಂಗಡಿಗಳಿಂದಾಗಿ ರಸ್ತೆಯಲ್ಲಿ ವಾಹನಗಳ ಅಸಮರ್ಪಕ ನಿಲುಗಡೆಯಿಂದ ಸಾರ್ವಜನಿಕರು ಬವಣೆ ಪಡುವಂತಾಗಿದೆ ಎಂದು ಸದಸ್ಯರು ಹೇಳಿದರು.

ಕಿತ್ತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ತಾತ್ಕಾಲಿಕ ಪಂಚಾಯಿತಿ ವಾಣಿಜ್ಯ ಮಳಿಗೆಗಳ ಮುಂಭಾಗ ಬಸ್ಸುಗಳ ನಿಲುಗಡೆಗೆ ಅವಕಾಶ ಮಾಡಿಕೊಡಲು ತೀರ್ಮಾಸಲಾಯಿತು ಹಾಗೂ ವಿವಿಧ ಕಾಮಗಾರಿಗಳ ಬಗ್ಗೆ ಚರ್ಚಿಸಲಾಯಿತು. ಪಂಚಾಯಿತಿ ವ್ಯಾಪ್ತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ರೂ. 2.25 ಲಕ್ಷ ಮೀಸಲಿಡಲಾಗಿದೆ ಎಂದು ಸಭೆಗೆ ತಿಳಿಸಲಾಯಿತು.

ಉಪಾಧ್ಯಕ್ಷೆ ಗೀತಾ ಹರೀಶ್ ಉಪಸ್ಥಿತರಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹರೀಶ್ ಸ್ವಾಗತಿಸಿ, ಕಾರ್ಯದರ್ಶಿ ತಮ್ಮಯ್ಯಾಚಾರ್ ವಂದಿಸಿದರು