ಮಡಿಕೇರಿ, ಸೆ. 7: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮೌಲ್ಯ ಶಿಕ್ಷಣ ನೀಡಲು ಶಿಕ್ಷಕರಿಗೆ ಅನುಕೂಲ ವಾಗುವಂತೆ ಸರಕಾರವು ಹೆಚ್ಚಿನ ಗಮನ ಹರಿಸುವದರೊಂದಿಗೆ, ಶಾಲಾ ಕೆಲಸಗಳನ್ನು ಬಿಟ್ಟು ಬೇರೆ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಬಾರದು ಎಂದು ರಾಜ್ಯ ಸರಕಾರವನ್ನು ಮೇಲ್ಮನೆ ವಿಪಕ್ಷ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಆಗ್ರಹಿಸಿದ್ದಾರೆ.

ವೀರಾಜಪೇಟೆ ಸಂತ ಅನ್ನಮ್ಮ ಶಾಲೆ ದ್ವಿ ಶತಮಾನೋತ್ಸವ ಸಭಾಂಗಣದಲ್ಲಿ ತಾ. 5 ರಂದು ಭಾರತರತ್ನ ಡಾ. ಎಸ್. ರಾಧಾಕೃಷ್ಣನ್ ಸಂಸ್ಮರಣೆ ಸಲುವಾಗಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡು ತ್ತಿದ್ದರು. ಶಾಲಾ ಚಟುವಟಿಕೆ ಹೊರತಾದ ಕೆಲಸಗಳು ಮತ್ತು ನಿರರ್ಥಕ ತರಬೇತಿ ಹೆಸರಿನಲ್ಲಿ ಶಿಕ್ಷಕರು ಒತ್ತಡ ಅನುಭವಿಸುವಂತಾಗಿದೆ ಎಂದು ಗಣೇಶ್ ಕಾರ್ಣಿಕ್ ವಿಷಾದ ವ್ಯಕ್ತಪಡಿಸಿದರು.

ಭಾರತೀಯ ಸಮಾಜ ವ್ಯವಸ್ಥೆಗೆ ಜೀವ ತುಂಬುವ ಮೂಲಕ ಯುವ ಜನಾಂಗವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವದು ಶಿಕ್ಷಕರಿಂದ ಮಾತ್ರ ಸಾಧ್ಯವೆಂದು ನೆನಪಿಸಿದ ಅವರು, ಈ ದಿಸೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ಆದರ್ಶಗಳನ್ನು ಮಕ್ಕಳಲ್ಲಿ ಜ್ಞಾನದ ಮೂಲಕ ಬಿತ್ತುವಂತೆ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ತ್ಯಾಗ, ಪರಿಶ್ರಮ ಎಲ್ಲ ಕಾಲಕ್ಕೂ ಶ್ಲಾಘನೀಯ ಎಂದು ನೆನಪಿಸುತ್ತಾ, ದಾರಿ ತಪ್ಪುತ್ತಿರುವ ಇಂದಿನ ಆಧುನಿಕ ಸಮಾಜದ ಯುವ ಜನಾಂಗವನ್ನು ಶಿಕ್ಷಕರಿಂದ ಮಾತ್ರ ತಿದ್ದುವದು ಸಾಧ್ಯವೆಂದು ತಿಳಿ ಹೇಳಿದರು.

ಸಂತ ಅನ್ನಮ್ಮ ಶಾಲೆಯ ಮುಖ್ಯಸ್ಥರಾದ ರೆ.ಫಾ. ಮಧುಲೈ ಮುತ್ತು ಕುಮಾರ್ ಮಾತನಾಡುತ್ತಾ, ಜಗತ್ತಿನಲ್ಲಿ ಎಲ್ಲರ ಒಳಿತು ಶಿಕ್ಷಣದಿಂದ ಮಾತ್ರ ಸಾಧ್ಯವಿದ್ದು, ಆ ದಿಸೆಯಲ್ಲಿ ಎಲ್ಲಾ ಕಾಲಕ್ಕೂ ಶಿಕ್ಷಕರು ಗೌರವ ವಂದನೀಯರು ನೆನಪಿಸಿದರು.

ಸಭೆಯಲ್ಲಿ ತಾಲೂಕಿನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಯ ಶಿಕ್ಷಕರ ಹೆಚ್ಚು ಅಂಕಗಳಿಸಿದ 10ನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ. ಮಕ್ಕಳನ್ನು ಗೌರವಿಸ ಲಾಯಿತು. ಇಲಾಖೆಯಲ್ಲಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಹಾಗೂ ಜಿ.ಎ. ಲೋಕೇಶ್ ಅವರನ್ನು ಸನ್ಮಾನಿಸಲಾಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ನಡೆಸಿದ ಕ್ರೀಡೆಗಳಾದ ಭಾವಗೀತೆ, ಭಕ್ತಿಗೀತೆ, ಆಶುಭಾಷಣ, ಹಗ್ಗಜಗ್ಗಾಟ, ವಾಲಿಬಾಲ್, ಕಬಡ್ಡಿ, ಥ್ರೋಬಾಲ್‍ಗಳ ವಿಜೇತರಿಗೆ ಬಹುಮಾನವನ್ನು ಸಂಘದ ವತಿಯಿಂದ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್ ವಹಿಸಿದ್ದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೀವನ್, ಉಪಾಧ್ಯಕ್ಷೆ ತಸ್ಲಿಮಾ ಅಖ್ತರ್, ತಾಲೂಕು ಪಂಚಾಯಿತಿ ಸದಸ್ಯರಾದ ಪಾಲತಂಡ ಸೀತಮ್ಮ, ಆಶಾ ಜೇಮ್ಸ್, ಕಾವೇರಮ್ಮ, ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಆರ್.ಪಡ್ನೇಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಕಲ್ಯಾಣ ಸಮಿತಿ ಅಧ್ಯಕ್ಷ ಕುಂಬೇರ ಎ. ಮನುಕುಮಾರ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಎಸ್.ಪಿ. ಮಹದೇವ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ. ಮಹದೇವಸ್ವಾಮಿ, ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಕೆ. ರೋಹಿತ್, ಜಿಲ್ಲಾ ಕಾರ್ಯದರ್ಶಿ ಟಿ.ಡಿ. ರಮಾನಂದ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎ. ಪ್ರವೀಣ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈ. ಸುರೇಂದ್ರ, ಕಾರ್ಯದರ್ಶಿ ಟಿ.ಕೆ. ವಾಮನ, ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷÀ ಕೆ.ಪಿ. ಮಹೇಶ್, ಕಾರ್ಯದರ್ಶಿ ಎಂ.ವಿ. ಚಂಗಪ್ಪ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್. ಸುಬ್ಬಯ್ಯ, ಕಾರ್ಯದರ್ಶಿ ಪ್ರಭುಕುಮಾರ್, ವಿಭಾಗ ಸಂಘಟನಾ ಕಾರ್ಯದರ್ಶಿ ಪಿ.ಜಿ. ಜಾನಕಿ, ಅನುದಾನಿತ ಶಾಲೆಗಳ ಸಂಘದ ಅಧ್ಯಕ್ಷ ಎಂ.ಕೆ. ಲೋಹಿತ್, ಕಾರ್ಯದರ್ಶಿ ಜಿ. ಗಿಡ್ಡಯ್ಯ, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಆಧ್ಯಕ್ಷ ಪಿ.ಎ. ಪ್ರವೀಣ್, ಕಾರ್ಯದರ್ಶಿ ಎಂ.ಕೆ. ನಳಿನಾಕ್ಷಿ, ಕಾರ್ಯಕ್ರಮದ ನಿರೂಪಣೆಯನ್ನು ಪಿ.ಜಿ. ಜಾನಕಿ, ಭಾಗ್ಯವತಿ, ಗೀತಾಂಜಲಿ ಮಾಡಿದರು. ಲಾಲ್‍ಕುಮಾರ್ ತಂಡ ನಾಡಗೀತೆ, ಸ್ವಾಗತವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ. ಲೋಕೇಶ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಸ್.ಪಿ. ಮಹದೇವ ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಶಿಕ್ಷಣ ಸಂಯೋಜಕರು, ಬಿ.ಆರ್.ಪಿ, ಸಿ.ಆರ್.ಪಿ. ಮತ್ತು ಐ.ಇ.ಆರ್.ಟಿ. ಶಿಕ್ಷಕರು, ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರು ಉಪಸ್ಥಿತರಿದ್ದರು.