ಮಡಿಕೇರಿ, ಸೆ. 7: ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿರುವಂತೆ ಸೇನೆ ಸೇರ್ಪಡೆಯ ವಿಚಾರದಲ್ಲೂ ರಾಜಕಾರಣ- ಜಾತೀಯತೆ ನುಸುಳುತ್ತಿದ್ದು, ಈ ಬೆಳವಣಿಗೆ ವಿಷಾದನೀಯ ಎಂದು ಮಾಜಿ ಸಚಿವ ಯಂ.ಸಿ. ನಾಣಯ್ಯ ಹೇಳಿದರು.ಕೊಡವ ಮಕ್ಕಡ ಕೂಟ ಹಾಗೂ ಅಜ್ಜಮಾಡ ಕುಟುಂಬಸ್ಥರ ಆಶ್ರಯದಲ್ಲಿ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೀರ ಯೋಧರ ದೇಶಾಭಿಮಾನ ಹಾಗೂ ಕೆಚ್ಚೆದೆಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಒಂದು ಕಾಲದಲ್ಲಿ ಕೊಡಗಿನಿಂದ ಸೇನೆಗೆ ಸೇರುವವರ ಸಂಖ್ಯೆ ಹೆಚ್ಚಿತ್ತು. ಆದರೆ ಪ್ರಸ್ತುತ ಆ ಸಂಖ್ಯೆ ತೀರಾ ಇಳಿಮುಖಗೊಂಡಿದೆ. ಸೇನೆಗೆ ಯೋಧರನ್ನು ಸೇರ್ಪಡೆಗೊಳಿಸುವಲ್ಲಿ ನಡೆಯುವ ಪರೀಕ್ಷೆಗಳಲ್ಲಿ, ಸೈನಿಕ ಶಾಲೆಗಳಿಗೆ ನೇಮಕಾತಿ ಪ್ರಕ್ರಿಯೆಯಲ್ಲಿ ಉದ್ಭವಿಸುವ

(ಮೊದಲ ಪುಟದಿಂದ) ರಾಜಕೀಯ ಕರಾಮತ್ತು, ಜಾತೀಯತೆ ಯಿಂದ ಅದೆಷ್ಟೋ ಮಂದಿ ಸೇನೆಗೆ ಸೇರುವ ಅವಕಾಶ ಕಳೆದುಕೊಳ್ಳುತ್ತಿ ದ್ದಾರೆ ಎಂದರು. ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಯಾವದೇ ಪ್ರದೇಶ, ಜಾತಿ ಅಥವಾ ಜನಾಂಗಕ್ಕೆ ಸೀಮಿತವಾದ ವ್ಯಕ್ತಿ ಅಲ್ಲ. ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ್ದು, ನಮ್ಮ ರಾಷ್ಟ್ರದ ಆಸ್ತಿಯಾಗಿದ್ದಾರೆ ಎಂದರು. ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಕೊಡಗಿನವರು ಇತರೆಡೆಗೆ ತೆರಳುವಾಗ ಕೊಡಗಿನವರು ಎಂದು ಗುರುತಿಸಿಕೊಳ್ಳುವದೇ ಹೆಮ್ಮೆಯ ವಿಷಯ. ಈ ಗೌರವವನ್ನು ನಮ್ಮ ಹಿರಿಯರು ಸಂಪಾದಿಸಿದ್ದು, ಅದನ್ನು ನಾವು ಮುಂದೆ ಉಳಿಕೊಂಡು ಹೋಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗಿನ ಸೈನಿಕ ಶಾಲೆಯಲ್ಲಿ ಕೊಡಗಿನ ಮಕ್ಕಳಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಉದ್ದೇಶದೊಂದಿಗೆ ಹೋರಾಟ ರೂಪಿಸಲಾಗುವದು ಎಂದರು.

ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ದೇಶಪ್ರೇಮವನ್ನು ಯುವ ಪೀಳಿಗೆಗೆ ತಿಳಿಸುವ ಕಾರ್ಯವನ್ನು ಮಾಡಬೇಕು. ಕೊಡಗಿನವರು ತಮ್ಮ ಒಗ್ಗಟ್ಟನ್ನು ಕಾಪಾಡಿಕೊಂಡು ತಮ್ಮಲ್ಲಿನ ಸಮಸ್ಯೆಗಳನ್ನು ಬಗೆಹರಿಸಿ ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ಮುಂದೆ ಸೇನೆಗೆ ಸೇರಲು ಮಾರ್ಗದರ್ಶನವಾಗಲಿದೆ ಎಂದರು.

ಎಸ್ಪಿ ರಾಜೇಂದ್ರ ಪ್ರಸಾದ್ ಮಾತನಾಡಿ, ಮಕ್ಕಳು ಸಾಮಾಜಿಕ ಜಾಲತಾಣಗಳಿಂದ ಹೊರಬಂದು ವೀರಯೋಧರ ಬಗ್ಗೆ ತಿಳಿದುಕೊಳ್ಳಬೇಕು ಎಂದರು. 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ ಪುಸ್ತಕ ಸೈನಿಕರ ಬಗ್ಗೆ ತಿಳಿಸಿದ್ದು, ಇದು ವಿದ್ಯಾರ್ಥಿಗಳಿಗೆ ಅನುಕರಣೀಯವಾಗಬೇಕು ಎಂದು ಅವರು ಹೇಳಿದರು.

ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕೊಡವ ಮಕ್ಕಡ ಕೂಟದಿಂದ ದೇವಯ್ಯ ಅವರ ಪುತ್ಥಳಿ ನಿರ್ಮಾಣಕ್ಕೆ ಪ್ರಯತ್ನ ನಡೆಸಲಾಗು ತ್ತಿದೆ. ಎಲ್ಲರ ಸಹಕಾರದಿಂದ ಮಾತ್ರ ಈ ಕಾರ್ಯವನ್ನು ನಿರ್ವಹಿಸಲು ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜೀರ ಅಯ್ಯಪ್ಪ ಬಿಡದಿಯಲ್ಲಿ ಈಗಾಗಲೇ ದೇವಯ್ಯ ಅವರ ಪುತ್ಥಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಪುತ್ಥಳಿ ಸ್ಥಾಪಿಸಲು ನಗರಸಭೆಯಿಂದ ಅನುಮತಿ ದೊರೆತಿರುವದಾಗಿ ತಿಳಿಸಿದರು. ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ, ನಿವೃತ್ತ ಕರ್ನಲ್ ಕೆ.ಸಿ ಸುಬ್ಬಯ್ಯ, ಅಜ್ಜಮಾಡ ಗಣೇಶ್ ಕರುಂಬಯ್ಯ ಮಾತನಾಡಿದರು. ವೇದಿಕೆಯಲ್ಲಿ ಅಜ್ಜಮಾಡ ಕುಟುಂಬದ ಪಟ್ಟೆದಾರ, ಕುಟುಂಬಸ್ಥರಾದ ಲವ, ಕಾಶಿ ಬೋಪಯ್ಯ, ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟೀರ ಚಿಣ್ಣಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಹಾಜರಿದ್ದರು.

ಪುಸ್ತಕ ಬಿಡುಗಡೆ : ದೇಶ ಸೇವೆ ಸಂದರ್ಭ ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕುರಿತು ಯುವ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ರಚಿಸಿದ 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ ಎಂಬ ಕೃತಿಯನ್ನು ಅತಿಥಿಗಳು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ದೇವಯ್ಯ ಅವರ ಹೋರಾಟದ ಪರಿ, ಯುದ್ಧದಲ್ಲಿ ಅವರು ಏಕೆ ಬಲಿದಾನ ಮಾಡಬೇಕಾಯಿತು, ಹೇಗೆ ಭಾರತದ ಉಳಿದ ವಿಮಾನಗಳನ್ನು ರಕ್ಷಿಸಿದರು, ಹೇಗೆ ಪಾಕಿಸ್ತಾನದ ಸೂಪರ್ ಸಾನಿಕ್ ವಿಮಾನವನ್ನು ಹೊಡೆದುರುಳಿಸಿದರು ಎಂಬುದನ್ನು ಪಿಪಿಟಿ ಹಾಗೂ ವೀಡಿಯೋ ಪ್ರದರ್ಶನದ ಮೂಲಕ ಕೃತಿ ರಚನೆಕಾರ ಐತಿಚಂಡ ರಮೇಶ್ ಉತ್ತಪ್ಪ ವಿವರಿಸಿದರು.

ಇದೇ ಸಂದರ್ಭ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರನ್ನು ಕೊಡವ ಮಕ್ಕಡ ಕೂಟದಿಂದ ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿರುವ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದಲ್ಲಿ ದೇವಯ್ಯ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು. ನಂತರ ಕೊಡವ ಮಕ್ಕಡ ಕೂಟದ ಪದಾಧಿಕಾರಿಗಳು, ಅಜ್ಜಮಾಡ ಕುಟುಂಬಸ್ಥರು, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಜನರಲ್ ತಿಮ್ಮಯ್ಯ ಶಾಲೆ ವಿದ್ಯಾರ್ಥಿಗಳೊಂದಿಗೆ ಅತಿಥಿ ಗಣ್ಯರು ಕೊಡವ ಸಮಾಜಕ್ಕೆ ಮೆರವಣಿಗೆ ಮೂಲಕ ಆಗಮಿಸಿದರು.