ಸಿಬಿಐನಿಂದ ಸಿಎಜಿ ಅಧಿಕಾರಿಣಿ ವಿರುದ್ಧ ಮೊಕದ್ದಮೆ ಮಡಿಕೇರಿ, ಸೆ. 7: ಕಾಫಿ ಮಂಡಳಿಯ ಹಣವನ್ನು ಕಾನೂನು ಬಾಹಿರವಾಗಿ ಇತರ ವಿಭಾಗಕ್ಕೆ ವರ್ಗಾಯಿಸಿ ದುರುಪಯೋಗ ನಡೆಸಿರುವ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿರುವ ಸಿಬಿಐ ಅಧಿಕಾರಿಗಳು ಸಿಎಜಿಯ ಪ್ರಧಾನ ನಿರ್ದೇಶಕಿಯಾದ ಶಾರದ ಸುಬ್ರಮಣ್ಯಂ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ರೂ. 16.02 ಕೋಟಿ ಹದುರುಪಯೋಗವಾಗಿರುವದಾಗಿ ಆರೋಪಿಸಲಾಗಿದೆ.

ಭ್ರಷ್ಟಾಚಾರ, ಕ್ರಿಮಿನಲ್ ಸಂಚು ಹಾಗೂ ವಂಚನೆ ಆರೋಪದಡಿ ಸಿಬಿಐ ಅಧಿಕಾರಿಗಳು ಶಾರದಾ ಸುಬ್ರಮಣ್ಯಂ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಶಾರದಾ ಅವರೊಂದಿಗೆ ಕಾಫಿ ಮಂಡಳಿಯ ಇನ್ನಿತರ ಮಾಜಿ ಅಧಿಕಾರಿಗಳನ್ನು ಮೊಕದ್ದಮೆಯಲ್ಲಿ ಆರೋಪಿಗಳನ್ನಾಗಿ ಸಿಬಿಐ ಪರಿಗಣಿಸಿದೆ. ಕಾಫಿ ಮಂಡಳಿಯಲ್ಲಿ ಉಳಿಕೆ ಹಣವಾದ ರೂ. 16.02 ಕೋಟಿಯನ್ನು ಅನಧಿಕೃತವಾಗಿ ಖಾಸಗಿ ‘ಮ್ಯೂಚುವಲ್’ ನಿಧಿಗಳಿಗೆ ಬಳಸಿರುವದಾಗಿ ತನಿಖೆಯಿಂದ ತಿಳಿದು ಬಂದಿದೆ. ಇದರಿಂದಾಗಿ ಕಾಫಿ ಮಂಡಳಿಗೆ

ರೂ. 53 ಲಕ್ಷ ನಷ್ಟ ಉಂಟಾಗಿರುವದಾಗಿ ವಿವರಿಸಲಾಗಿದೆ.

(ಮೊದಲ ಪುಟದಿಂದ) ಶಾರದ ಅವರು ಈಗ ಸಿಎಜಿ ನಿರ್ದೇಶಕರಾಗಿದ್ದಾರೆ. ಅವರು ಕಾಫಿ ಮಂಡಳಿಯಲ್ಲಿ ಈ ಹಿಂದೆ ಆರ್ಥಿಕ ವಿಭಾಗದ ನಿರ್ದೇಶಕರಾಗಿದ್ದಾಗ ಈ ವಂಚನೆ ನಡೆಸಿದ್ದಾಗಿದೆ. ಇವರಿಗೆ ಇವರ ಪತಿ ಸಂದೀಪ್ ದಾಶ್ ಎಂಬವರು ಸಹಕರಿಸಿದ್ದಾರೆ. ಸಂದೀಪ್ ದಾಶ್ ಅವರು ಭಾರತೀಯ ಸಿವಿಲ್ ಅಕೌಂಟ್ಸ್ ಸರ್ವಿಸ್ ಆಫೀಸರ್ ಆಗಿದ್ದಾರೆ. ಈ ವಂಚನೆ ನಡೆದ ಸಂದರ್ಭ ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರ್ಥಿಕ ಸದಸ್ಯರಾಗಿದ್ದು, ತನ್ನ ಪತ್ನಿ ಶಾರದಾ ಅವರೊಂದಿಗೆ ಕಾಫಿ ಮಂಡಳಿ ಅವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ. ಇವರೊಂದಿಗೆ ಕಾಫಿ ಮಂಡಳಿಯಲ್ಲಿ ಆಗ ಲೆಕ್ಕಾಧಿಕಾರಿಗಳಾಗಿದ್ದ ನಾಗರಾಜನ್ ಮತ್ತು ಜಿ. ಆನಂದ ಹಾಗೂ ಗ್ರೀನ್ ಹೋಂಸ್ ಇಂಡಿಯಾದ ವ್ಯವಸ್ಥಾಪಕ ಪಾಲುದಾರ ಎಂ. ಗುರುರಾಜ್ ಕೂಡ ಅವ್ಯವಹಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಿಬಿಐ ತನ್ನ ವರದಿಯಲ್ಲಿ ವಿವರಿಸಿದೆ. ಮೂಲವೊಂದರ ಪ್ರಕಾರ ಸಿಬಿಐ ನಿರ್ದೇಶಕಿ ಶಾರದಾ ಅವರನ್ನು ಅಮಾನತುಗೊಳಿಸಿರುವದಾಗಿ ಹೇಳಲಾಗಿದೆ.