ಗೋಣಿಕೊಪ್ಪಲು, ಸೆ. 7: ಕೋತೂರು ಶ್ರೀ ಕೃಷ್ಣ ಅಮ್ಮಕೊಡವ ಸಮಾಜ ಕಟ್ಟಡವನ್ನು ಸುಮಾರು ರೂ.5ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಸ್ಥಳದಾನಿ ಅಚ್ಚಿಯಂಡ ವೇಣುಗೋಪಾಲ್ ಉದ್ಘಾಟನೆ ನೆರವೇರಿಸಿದರು.

ಸುಮಾರು 10 ಸೆಂಟ್ ನಿವೇಶನವನ್ನು ಕಾನೂರು-ಕೋತೂರು ಮುಖ್ಯರಸ್ತೆ ಸರಹದ್ದಿನಲ್ಲಿ ಅಚ್ಚಿಯಂಡ ವೇಣು ಅವರು ಉದಾರವಾಗಿ ನೀಡಿದ್ದು, ಇದೇ ಸಂದರ್ಭ ಸಮಾಜದ ಪರವಾಗಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಜಿ.ಪಂ. ಸದಸ್ಯ ಹಾಗೂ ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಿ.ಎನ್. ಪ್ರಥ್ಯು ಅವರು, ಸಂಘದ ಕಾರ್ಯ ಚಟುವಟಿಕೆ ನಡೆಸಲು, ಅಮ್ಮಕೊಡವ ಜನಾಂಗ ಒಗ್ಗೂಡಲು ಕೋತೂರಿನ ನೂತನ ಕಟ್ಟಡ ವೇದಿಕೆಯಾಗಲಿ. ಉದ್ದೇಶಿತ ಸಮಾಜ ಕಟ್ಟಡಕ್ಕೆ ಜಿ.ಪಂ. ಅನುದಾನದಿಂದ ರೂ.2 ಲಕ್ಷ ಅನುದಾನ ಕಲ್ಪಿಸಲಾಗಿದೆ. ಬಾಳೆಲೆ ಕೊಡವ ಸಮಾಜ, ಮಾರಿಯಮ್ಮ ದೇವಸ್ಥಾನ ಅಭಿವೃದ್ಧಿಗೂ ಅನುದಾನ ಕಲ್ಪಿಸಿದ್ದೇನೆ. ಮುಂದೆಯೂ ಕೋತೂರು ಸಮಾಜ ಕಟ್ಟಡದ ಮೂಲಭೂತ ಸೌಕರ್ಯಕ್ಕಾಗಿ ರೂ.1.50 ಲಕ್ಷ ಅನುದಾನ ನೀಡುವದಾಗಿ ಅವರು ಭರವಸೆ ನೀಡಿದರು. ಜನಾಂಗವನ್ನು ಒಗ್ಗೂಡಿಸಿ ಸಮಾಜ ಕಟ್ಟುವದು ಕಷ್ಟಕರ ಕೆಲಸ. ಹೀಗಿದ್ದೂ ಕಳೆದ ಹಲವು ವರ್ಷಗಳಿಂದ ಅಮ್ಮಕೊಡವ ಕ್ರೀಡಾ ಕೂಟ ಹಾಗೂ ಸಮಾಜದ ಅಭ್ಯುದಯದ ಕೆಲಸಗಳು ಉತ್ತಮವಾಗಿ ನಡೆಯುತ್ತಿದೆ. ಸಮಾಜಮುಖಿ ಕೆಲಸಕ್ಕೆ ನಾವೆಲ್ಲಾ ಒತ್ತು ನೀಡಬೇಕು. ಎಲ್ಲರೂ ಅಭಿವೃದ್ಧಿಗೆ ಕೈಜೋಡಿಸುವಂತಾಗ ಬೇಕು ಎಂದು ಅಭಿಪ್ರಾಯಪಟ್ಟರು.

ಯಾವದೇ ಅಮ್ಮಕೊಡವ ಸಮಾಜಕ್ಕೆ ಸರ್ಕಾರದ ಸವಲತ್ತುಗಳು ಸಿಗಲು ನೋಂದಾವಣೆ ಅಗತ್ಯ. ಸ್ಥಳದಾನಿ ಅಚ್ಚಿಯಂಡ ವೇಣು ಅವರು 10 ಸೆಂಟ್ ನಿವೇಶನ ನೀಡಿರುವದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೇಶನ ದಾನಿ ವೇಣು, ಬಿ.ಎನ್. ಪ್ರಥ್ಯು, ನಿವೃತ್ತ ಪ್ರಾಧ್ಯಾಪಕರಾದ ಹೆಮ್ಮಚ್ಚಿಮನೆ ವಿಠಲ, ಮೀನಾಕ್ಷಿ, ಮನ್ನಕ್ಕಮನೆ ಅಪ್ಪಣ್ಣಮಯ್ಯ ಇವರುಗಳನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಇತ್ತೀಚೆಗೆ ನಿಧನರಾದ ಅಮ್ಮಕೊಡವ ಜನಾಂಗದ ಸದಸ್ಯರ ಪರವಾಗಿ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಯಿತು. ಕಾನೂರು ಗ್ರಾ.ಪಂ.ಅಧ್ಯಕ್ಷೆ ಲತಾಕುಮಾರಿ, ಹೆಮ್ಮಚ್ಚಿಮನೆ ವಿಠಲ, ನಾಣಮಯ್ಯ, ಹಾಗೂ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕೃಷ್ಣ ಅಮ್ಮಕೊಡವ ಸಮಾಜದ ಅಧ್ಯಕ್ಷ ಮನ್ನಕ್ಕಮನೆ ರಾಜು ಮಾತನಾಡಿದರು.

ವೇದಿಕೆಯಲ್ಲಿ ಅನ್ನಪೂರ್ಣೇಶ್ವರಿ ಸಂಘದ ಅಧ್ಯಕ್ಷೆ ಮನ್ನಕ್ಕಮನೆ ಶ್ವೇತಾ, ಹಿರಿಯರಾದ ಅಪ್ಪಣಮಯ್ಯ, ಅಚ್ಚಿಯಂಡ ಸುನೀಲ್, ಅಖಿಲ ಅಮ್ಮಕೊಡವ ಸಮಾಜದ ಕಾರ್ಯದರ್ಶಿ ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.

ಮನ್ನಕ್ಕಮನೆ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರೆ, ಎಂ.ಕೆ. ರವಿ ಸ್ವಾಗತಿಸಿದರು. ಅನ್ನಪೂರ್ಣೇಶ್ವರಿ ಸಂಘದ ಕಾರ್ಯದರ್ಶಿ ಅಶ್ವಿನಿ ವಂದನಾರ್ಪಣೆ ನಿರ್ವಹಿಸಿದರು.