ಕೂಡಿಗೆ, ಸೆ. 7: ಕುಶಾಲನಗರ ಕಾವೇರಿ ತಾಲೂಕು ಹೋರಾಟ ಕೇಂದ್ರ ಸಮಿತಿಯು ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಥಾನೀಯ ಸಮಿತಿಯನ್ನು ರಚನೆ ಮಾಡುವ ಉದ್ದೇಶದ ಸಭೆಯನ್ನು ಹೆಬ್ಬಾಲೆ ಜಿ.ಪಂ. ಸದಸ್ಯ ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ತೊರೆನೂರು ಬಸವೇಶ್ವರ ದೇವಾಲಯ ಆವರಣದಲ್ಲಿ ನಡೆಯಿತು. ಕಾವೇರಿ ತಾಲೂಕು ರಚನಾ ಹೋರಾಟ ಕೇಂದ್ರೀಯ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಕಾವೇರಿ ತಾಲೂಕು ರಚನೆ ಮಾಡುವ ಬಗ್ಗೆ ಚರ್ಚೆ ನಡೆಸಲು ಸ್ಥಳೀಯ ಎಲ್ಲಾ ಪಕ್ಷಗಳ ಮುಖಂಡರುಗಳು, ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವಿವಿಧ ಹೋರಾಟ ಸಮಿತಿಗಳು ಸಹಕಾರ ನೀಡಬೇಕು ಎಂದರು. ಈ ಜವಾಬ್ದಾರಿಯನ್ನು ಒಬ್ಬೊಬ್ಬ ಬೂತ್ ಸಮಿತಿಯ ಸದಸ್ಯರಿಗೆ ನೀಡುವ ಮುಖೇನ ಹೋರಾಟಕ್ಕೆ ಬೆಂಬಲ ನೀಡಲು ಎಲ್ಲರೂ ಸನ್ನದ್ಧರಾಗುವಂತೆ ಕರೆ ನೀಡಿದರು.

ಈ ಸಂದರ್ಭ ಹೋರಾಟಕ್ಕೆ ಬೆಂಬಲವಾಗಿ ಹಾಗೂ ತಾಲೂಕು ರಚನೆಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲು ಸಭೆಯಲ್ಲಿದ್ದ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರುಗಳನ್ನು, ವಿವಿಧ ಸಂಘಟನೆಯ ಮುಖಂಡರುಗಳನ್ನು, ವಿವಿಧ ರಾಜಕೀಯ ಪಕ್ಷದ ಮುಖಂಡರು ಪಕ್ಷಾತೀತವಾಗಿ ಬೆಂಬಲ ನೀಡುವಂತೆ ಜಿ.ಪಂ. ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಆರ್. ಶ್ರೀನಿವಾಸ್ ಸಭೆಯನ್ನುದ್ದೇಶಿಸಿ ಮಾತನಾಡಿದರು.

ತೊರೆನೂರು ಸ್ಥಾನೀಯ ಹೋರಾಟ ರಚನಾ ಸ್ಥಾನೀತ ಸಮಿತಿಯ ಅಧ್ಯಕ್ಷರಾಗಿ ತೊರೆನೂರು ಸಹಕಾರ ಬ್ಯಾಂಕಿನ ನಿರ್ದೇಶಕ ಕೃಷ್ಣೇಗೌಡ ಆಯ್ಕೆಗೊಂಡರು. ಕಾರ್ಯದರ್ಶಿಯಾಗಿ ಗ್ರಾ.ಪಂ. ಸದಸ್ಯ ಮಹೇಶ್, ಗೌರವಾಧ್ಯಕ್ಷರಾಗಿ ಟಿ.ಪಿ. ಗಣೇಶ್, ಕಾರ್ಯಾಧ್ಯಕ್ಷರಾಗಿ ಚಂದ್ರಪ್ಪ ಆಯ್ಕೆಗೊಳ್ಳುವದರ ಜೊತೆಗೆ ಆಯಾಯ ಬೂತ್‍ನ ಸಮಿತಿಗೆ 50ಕ್ಕೂ ಹೆಚ್ಚು ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭ ಕುಶಾಲನಗರ ಕಾವೇರಿ ತಾಲೂಕು ಕೇಂದ್ರ ಹೋರಾಟ ಸಮಿತಿಯ ಪ್ರಮುಖರಾದ ನಾರಾಯಣ, ಖಾದರ್, ಜಿ.ಎಲ್. ನಾಗರಾಜ್, ಮೋಹನ್‍ಕುಮಾರ್, ದೇವರಾಜ್ ಇದ್ದರು. ಸಭೆಯಲ್ಲಿ ತೊರೆನೂರು ಗ್ರಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸೇರಿದಂತೆ ಗ್ರಾ.ಪಂ. ಸದಸ್ಯರು, ತೊರೆನೂರು ಮಣಜೂರು, ಅಳುವಾರ, ಶಿರಂಗಾಲ ನೂರಾರು ಗ್ರಾಮಸ್ಥರು ಇದ್ದರು.