ಮಡಿಕೇರಿ, ಸೆ. 7: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಸುಣ್ಣದಕೆರೆ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಯಾವದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡಬಾರದೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ. ಸದಸ್ಯರಾದ ಎಂ.ಎನ್. ಕವಿತ, ಮದ್ಯದಂಗಡಿ ತೆರೆಯುವದಕ್ಕಾಗಿಯೇ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಪರವಾನಗಿ ನೀಡಬಾರದೆಂದು ಒತ್ತಾಯಿಸಿ ಗ್ರಾಮಸ್ಥರು ಮತ್ತು ಸಂಘ-ಸಂಸ್ಥೆಗಳು ಜಿಲ್ಲಾಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವದಾಗಿ ತಿಳಿಸಿದರು. ಹೆದ್ದಾರಿಯಲ್ಲಿದ್ದ ಮದ್ಯದಂಗಡಿ ಮುಚ್ಚಲ್ಪಟ್ಟ ಕಾರಣ ಅದನ್ನು ಸುಣ್ಣದಕೆರೆಯಲ್ಲಿ ಆರಂಭಿಸಲು ಪ್ರಯತ್ನಗಳು ನಡೆಯುತ್ತಿದೆ. ಗ್ರಾ.ಪಂ. ಕೆಲವು ಸದಸ್ಯರ ವಿರೋಧದ ನಡುವೆಯೂ ಗ್ರಾಮದ ಇಕ್ಕಟ್ಟಾದ ರಸ್ತೆಯ ಪಕ್ಕದಲ್ಲೇ ಕಟ್ಟಡ ನಿರ್ಮಾಣಕ್ಕೆ ಎನ್‍ಒಸಿ ನೀಡಿದೆ ಎಂದು ಆರೋಪಿಸಿದರು.

ಗ್ರಾಮಸ್ಥರ ವಿರೋಧದ ನಡುವೆಯೂ ಅಧಿಕಾರಿಗಳು ಪ್ರಭಾವಕ್ಕೆ ಮಣಿದು ಮದ್ಯದಂಗಡಿಗೆ ಅನುಮತಿ ನೀಡಿದರೆ ಮಹಿಳಾ ಸಂಘಟನೆಗಳು ಹಾಗೂ ಗ್ರಾಮಸ್ಥರ ಬೆಂಬಲದೊಂದಿಗೆ ಪ್ರತಿಭಟನೆ ನಡೆಸುವದಾಗಿ ಅವರು ಎಚ್ಚರಿಕೆ ನೀಡಿದರು.

ಗ್ರಾಮದ ರೈತ ಸಿ.ಬಿ. ಪಳಂಗಪ್ಪ ಮಾತನಾಡಿ, ಮದ್ಯದಂಗಡಿಗೆ ಕೆಲವು ಗ್ರಾ.ಪಂ. ಸದಸ್ಯರು ಕೂಡ ಬೆಂಬಲ ನೀಡುತ್ತಿದ್ದು, ಮುಂದೆ ಆಗಬಹುದಾದ ಅಶಾಂತಿಯ ವಾತಾವರಣಕ್ಕೆ ಆಡಳಿತ ವ್ಯವಸ್ಥೆಯೇ ಹೊಣೆಯಾಗ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗೋಷ್ಠಿಯಲ್ಲಿ ಗ್ರಾಮಸ್ಥ ಎಂ.ಎ. ರಾಜಪ್ಪ, ಸ್ತ್ರೀಶಕ್ತಿ ಸಂಘದ ಪ್ರಮುಖರಾದ ಎಸ್. ರಾಧಿಕ, ಕೆ.ಎಸ್. ರಾಗಿಣಿ ಹಾಗೂ ವಿ.ವಿ. ಪೂವಮ್ಮ ಉಪಸ್ಥಿತರಿದ್ದರು.