ಮಡಿಕೇರಿ, ಸೆ. 7: ಕಳೆದ ಆರೆಂಟು ತಿಂಗಳಿನಿಂದ ನಗರದ ಪ್ರವಾಸಿ ತಾಣ ರಾಜಾಸೀಟ್‍ನ ಸಂಗೀತ ಕಾರಂಜಿಗೆ ಬೆಳಕು ಸೇರಿದಂತೆ ಚಿಮ್ಮುವ ಕಾರಂಜಿಗೆ ಅಗತ್ಯ ಗಮನ ಹರಿಸದೆ ನಿರ್ಲಕ್ಷಿಸಿರುವದು ಬೆಳಕಿಗೆ ಬಂದಿದೆ. ರಾಜಾಸೀಟ್ ವೀಕ್ಷಣೆಗೆ ಬರುವವರಿಂದ ದುಬಾರಿ ವಾಹನ ನಿಲುಗಡೆ ಶುಲ್ಕ ಸೇರಿದಂತೆ ಪ್ರವೇಶ ಶುಲ್ಕ ಕೂಡ ವಸೂಲಿ ಮಾಡುತ್ತಿದ್ದರೂ, ಕನಿಷ್ಟ ಮೂಲಭೂತ ಸೌಕರ್ಯ ಕಲ್ಪಿಸದಿರುವದು ಜನತೆಯಲ್ಲಿ ಅಸಮಾಧಾನಕ್ಕೂ ಕಾರಣವಾಗಿದೆ.ಅಲ್ಲಿ ನಿರ್ಮಿತಿ ಕೇಂದ್ರದಿಂದ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಕೊಠಡಿ ನಿರ್ಮಿಸಿರುವ ಬಗ್ಗೆಯೂ ತೋಟಗಾರಿಕೆ ಇಲಾಖೆ ಆಕ್ಷೇಪಣೆ ಸಲ್ಲಿಸಿರುವದು ಬಹಿರಂಗಗೊಂಡಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು, ಕಾರಂಜಿ ಸರಿಪಡಿಸಲು ಸಂಬಂಧಿಸಿದವರಿಗೆ ಆದೇಶಿಸಿದ್ದಾರೆ.

ಜಿಲ್ಲಾ ಕೇಂದ್ರದ ಪ್ರಮುಖ ಪ್ರವಾಸಿ ಸ್ಥಳವಾದ ರಾಜಾಸೀಟಿನಲ್ಲಿ ಸಂಗೀತ ಕಾರಂಜಿಯನ್ನು (ಮ್ಯೂಸಿಕಲ್ ಫೌಂಟೈನ್) ದಸರಾ ಆರಂಭಕ್ಕೂ ಮೊದಲೇ ಸರಿಪಡಿಸು ವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ

ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಾಸೀಟು ಉದ್ಯಾನವನ ಅಭಿವೃದ್ಧಿ ಸಂಬಂಧಿಸಿ ದಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಜಾಸೀಟಿನ ಸಂಗೀತ ಕಾರಂಜಿ ಸ್ಥಗಿತಗೊಂಡು

(ಮೊದಲ ಪುಟದಿಂದ) ಒಂದು ವರ್ಷ ಕಳೆದಿದೆ. ಆದರೂ ಸಹ ಸಂಗೀತ ಕಾರಂಜಿಯನ್ನು ಸರಿಪಡಿಸಲು ಮುಂದಾಗಿಲ್ಲ ಏಕೆ ಎಂದು ಜಿಲ್ಲಾಧಿಕಾರಿ ಅವರು ಖಾರವಾಗಿ ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಎಷ್ಟೊಂದು ಇಂಜಿನಿಯರ್‍ಗಳಿದ್ದಾರೆ. ಆದರೂ ಸಂಗೀತ ಕಾರಂಜಿಯನ್ನು ಸರಿಪಡಿಸಲು ಸಾಧ್ಯವಾಗಿಲ್ಲವೆಂದರೆ ಹೇಗೆ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಅವರು ಮಡಿಕೇರಿ ನಗರಕ್ಕೆ ಬರುವ ಪ್ರವಾಸಿಗರು ರಾಜಾಸೀಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇಂತಹ ಪ್ರವಾಸಿ ಸ್ಥಳದಲ್ಲಿ ಸರಿಯಾದ ನಿರ್ವಹಣೆ ಮಾಡಲಾಗದಿದ್ದರೆ ಹೇಗೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಸಂಗೀತ ಕಾರಂಜಿಯನ್ನು ಕಾಲಮಿತಿಯೊಳಗೆ ಸರಿಪಡಿಸಬೇಕು. ಈ ಸಂಬಂಧ ಲೋಕೋಪಯೋಗಿ ಇಲಾಖೆ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ರಾಜಾಸೀಟಿನಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜನದಟ್ಟಣೆÉ ಹೆಚ್ಚಾಗಿ ಕಂಡುಬರುತ್ತಿದೆ. ಹಾಗೆಯೇ ವಾಹನಗಳ ಪಾರ್ಕಿಂಗ್ ಮತ್ತಿತರ ಸಮಸ್ಯೆ ಉಂಟಾಗಲಿದೆ. ಆದ್ದರಿಂದ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.

ರಾಜಾಸೀಟು ಅಭಿವೃದ್ಧಿ ಸಂಬಂಧಿಸಿದಂತೆ ವಿಶೇಷ ಆಸಕ್ತಿ ವಹಿಸಬೇಕಿದೆ. ರಾಜಾಸೀಟು ಪ್ರವೇಶ ಶುಲ್ಕವನ್ನು ಹೆಚ್ಚಿಸಬಹುದೇ ಎಂಬ ಬಗ್ಗೆ ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್.ಗಿರೀಶ್ ಅವರು ಮಾಹಿತಿ ನೀಡಿ ತಾಂತ್ರಿಕ ತೊಂದರೆಯಿಂದ ಸಂಗೀತ ಕಾರಂಜಿಯನ್ನು ಸರಿಪಡಿಸಲು ಸಾಧ್ಯವಾಗಿಲ್ಲ. ಸಂಗೀತ ಕಾರಂಜಿ ಸರಿಪಡಿಸಲು ತುರ್ತಾಗಿ ಕ್ರಮ ಕೈಗೊಳ್ಳಲಾಗುವದು ಎಂದು ಅವರು ಮಾಹಿತಿ ನೀಡಿದರು. ರಾಜಾಸೀಟು ಅಭಿವೃದ್ಧಿ ಸಮಿತಿಯಲ್ಲಿ ಸುಮಾರು 76 ಲಕ್ಷ ರೂ. ಇದೆ ಎಂದು ಬಿ.ಆರ್. ಗಿರೀಶ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಪೌರಾಯುಕ್ತೆ ಬಿ.ಶುಭ ಅವರು ರಾಜಾಸೀಟಿನಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಅಗತ್ಯ ವ್ಯವಸ್ಥೆ ಮಾಡುವದು, ನಿಲುಗಡೆ, ಸ್ವಚ್ಛತೆ ಮತ್ತಿತರ ವಿಷಯ ಸಂಬಂಧಿಸಿದಂತೆ ಗುರುತಿನ ಚೀಟಿ ನೀಡಲಾಗಿರುವ ಸಂಬಂಧ ಮಾಹಿತಿ ನೀಡಿದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸಿ.ಜಗನ್ನಾಥ್, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಸಚಿನ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ದೇವಕಿ, ಸಹಾಯಕ ನಿರ್ದೇಶಕ ಪ್ರಮೋದ್ ಇತರರು ಇದ್ದರು.