ಮಡಿಕೇರಿ, ಸೆ. 7: ಕೊಡಗು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲು ಮಾರ್ಗಗಳ ಸಾಧಕ ಬಾಧಕಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ಧವಿರುವದಾಗಿ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷರಾದ ನಿವೃತ್ತ ಕರ್ನಲ್ ಸಿ.ಪಿ. ಮುತ್ತಣ್ಣ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಎರಡೂ ಯೋಜನೆಗಳ ಕುರಿತು ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಚರ್ಚಿಸಿ ಕೊಡಗು ಜಿಲ್ಲೆಗೆ ಆಗಬಹುದಾದ ನಷ್ಟದ ಬಗ್ಗೆ ಮನವರಿಕೆ ಮಾಡಿಕೊಡುವದಾಗಿ ತಿಳಿಸಿದರು.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಹಾಗೂ ಮಾಜಿ ಸಚಿವ ಎಂ.ಸಿ. ನಾಣಯ್ಯ ಅವರು ರೈಲ್ವೆ ಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಕೊಡಗಿನ ಮೂಲಕ ಹಾದು ಹೋಗುವದನ್ನು ತಡೆಗಟ್ಟುವ ಕಾರ್ಯಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿಗಳ ಬಳಿಗೆ ನಿಯೋಗವನ್ನು ಕರೆದೊಯ್ಯುವ ಮೂಲಕ ಕೊಡಗಿನ ಹಿತವನ್ನು ಕಾಯುವದಾಗಿ ನಾಣಯ್ಯ ಅವರು ತಿಳಿಸಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು “ಕೊಡಗು ಉಳಿಸಿ ಹಾಗೂ ಕಾವೇರಿ ಉಳಿಸಿ” ಆಂದೋಲನಕ್ಕೆ ಕೈ ಜೋಡಿಸಬೇಕೆಂದು ಮುತ್ತಣ್ಣ ಮನವಿ ಮಾಡಿದರು.

ಶಾಸಕದ್ವಯರಾದ ಕೆ.ಜಿ. ಬೋಪಯ್ಯ ಹಾಗೂ ಎಂ.ಪಿ. ಅಪ್ಪಚ್ಚು ರಂಜನ್ ಅವರನ್ನು ಭೇಟಿ ಮಾಡುವದಾಗಿ ತಿಳಿಸಿದ ಅವರು, ಕೊಡಗಿನ ದಕ್ಷಿಣ ಭಾಗದ ಮೂಲಕ ರೈಲ್ವೆ ಸಂಪರ್ಕವನ್ನು ಕೇರಳಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಇಲ್ಲ ಎಂದು ಈಗಾಗಲೇ ಸಂಸದ ಪ್ರತಾಪ್‍ಸಿಂಹ ಭರವಸೆ ನೀಡಿದ್ದಾರೆ. ಆದರೆ ಕೇರಳ ಸರ್ಕಾರ ತಲಚೇರಿ, ಮೈಸೂರು ರೈಲ್ವೆ ಮಾರ್ಗದ ಸರ್ವೆಗಾಗಿ ರೂಪಾಯಿ ಐವತ್ತು ಲಕ್ಷ ಮಂಜೂರು ಮಾಡಿದ ಆದೇಶದ ಪ್ರತಿ ಲಭ್ಯವಾಗಿದೆ. ಆ ಮಾರ್ಗವು ದಕ್ಷಿಣ ಕೊಡಗಿನ ಮೂಲಕ ಹಾದು ಹೋಗಲಿದೆ. ಕುಶಾಲನಗರ ರೈಲ್ವೆ ಮಾರ್ಗಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದುಕೊಂಡ ಮಾಹಿತಿಯಂತೆ ಮಡಿಕೇರಿ ಸಮೀಪದ ಮಕ್ಕಂದೂರುವರೆಗೆ ಸರ್ವೆ ಕಾರ್ಯ ನಡೆಯಲಿದೆ. ಈ ವಿಚಾರ ಸಂಸದರ ಗಮನಕ್ಕೆ ಬಂದಿಲ್ಲದಿರಬಹುದು ಎಂದು ಅಭಿಪ್ರಾಯಪಟ್ಟ ಮುತ್ತಣ್ಣ, ಮಾಹಿತಿಯನ್ನು ಸಂಸದರಿಗೆ ಕಳುಹಿಸಲಾಗುತ್ತಿದೆ ಎಂದರು.

ಆರ್‍ಟಿಐ ಮೂಲಕ ಪಡೆದುಕೊಂಡ ದಾಖಲಾತಿಯ ಪ್ರಕಾರ ಕೊಡಗಿನ ಮೂಲಕ ಮೂರು ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಲಿವೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಕೇರಳ ಮುಖ್ಯಮಂತ್ರಿಗಳಿಗೆ ಮೈಸೂರು, ಬೆಂಗಳೂರು ರಾಷ್ಟೀಯ ಹೆದ್ದಾರಿಯಿಂದ ಕೇರಳದ ವಿಮಾನ ನಿಲ್ದಾಣವಿರುವ ಮಟ್ಟನ್ನೂರಿಗೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿಗೆ ಮಂಜೂರಾತಿ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಉದ್ದೇಶಿತ ಹೆದ್ದಾರಿ ನಿರ್ಮಾಣಕ್ಕಾಗಿ ರೂ. 1818 ಕೋಟಿ ಖರ್ಚು ಮಾಡುವ ಹಣವನ್ನು ಕೊಡಗಿಗೆ ಅವಶ್ಯವಿರುವ ಯೋಜನೆಗಳು ಹಾಗೂ ಕಾರ್ಯಕ್ರಮಗಳಿಗಾಗಿ ಬಳಸಲು ಸಂಸದ ಪ್ರತಾಪ್ ಸಿಂಹರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದು ಮುತ್ತಣ್ಣ ತಿಳಿಸಿದರು.

ಬೇಕಾಗಿರುವ ಯೋಜನೆಗಳು

ಕೊಡಗಿನಲ್ಲಿ ಪುಷ್ಪಕೃಷಿ ಮತ್ತು ತೋಟಗಾರಿಕೆಯಲ್ಲಿ ತೊಡಗಿರುವ ಸಣ್ಣ ಬೆಳೆಗಾರರು ಹಾಗೂ ಬೆಳೆಗಾರರಿಗೆ ಸಹಾಯಧನ ನೀಡುವದು ಸೂಕ್ತ. ಇದರಿಂದಾಗಿ ಕಾಫಿ ಬೆಳೆಗಾರರು ತಮ್ಮ ಬೆಳೆಯಲ್ಲಿ ನಷ್ಟ ಬರುವ ಸಂದರ್ಭ ಪುಷ್ಪ ಕೃಷಿ ಹಾಗೂ ತೋಟಗಾರಿಕೆಯನ್ನು ಬದಲಿ ಕೃಷಿಯನ್ನಾಗಿ ಕೈಗೊಳ್ಳಬಹುದಾಗಿದೆ. ಅಂಥೋರಿಯಂ ಹಾಗೂ ಬಟರ್‍ಫ್ರೂಟ್ ನಂತಹ ಕೃಷಿಯನ್ನು ಕೈಗೊಂಡು ತಮ್ಮ ಆದಾಯವನ್ನು ಸರಿದೂಗಿಸಲು ಸಾಧ್ಯವಾಗುತ್ತದೆ. ಅಲ್ಲದೆ ಭತ್ತ ಬೆಳೆಯುವ ರೈತರಿಗಾಗಿ ಉತ್ತಮವಾದ ಆರ್ಥಿಕ ಪ್ಯಾಕೇಜ್‍ನ್ನು ನೀಡಬಹುದು. ಈ ಬಗ್ಗೆ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು (ಯುನೈಟೇಡ್ ಕೊಡವ ಆರ್ಗನೈಝೇಸನ್) ಈಗಾಗಲೇ ಪ್ರಯತ್ನಿಸುತ್ತಿದ್ದಾರೆ. ರೈತರ ಭತ್ತದ ಕೃಷಿಗೆ ಶೇ. 90 ಸಹಾಯಧನ ನೀಡಿ ಸೌರ ಬೇಲಿಯನ್ನು ನಿರ್ಮಿಸುವ ಮೂಲಕ ಕಾಡಾನೆಗಳ ಉಪಟಳವನ್ನು ನಿಯಂತ್ರಿಸಬೇಕಾಗಿದೆ.

ಇದೀಗ ಕೊಡಗಿನಲ್ಲಿ ಅರಣ್ಯ ಇಲಾಖೆ ಶೇ. 40 ರಷ್ಟು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದು ಈ ಬಗ್ಗೆ ಹೊಸ ನೇಮಕಾತಿಗಾಗಿ ಕ್ರಮ ಕೈಗೊಳ್ಳಬೇಕಾಗಿದೆ. ಆನೆ ಧಾಳಿಗಳನ್ನು ನಿಯಂತ್ರಿಸಲು ಕೊಡಗು ವನ್ಯ ಜೀವಿ ಸಂಘ ಕೆಲವು ಕಾರ್ಯಕ್ರಮಗಳನ್ನು ಹೊಂದಿದೆ. ಈ ಕಾರ್ಯಕ್ರಮಗಳನ್ನು ಅನುಷ್ಠನಾಗೊಳಿಸಲು ಆರ್ಥಿಕ ಸಹಾಯದ ಅವಶ್ಯಕತೆ ಇದೆ ಎಂದರು.

ಪರಿಸರ ಪಡೆಯನ್ನು ಸ್ಥಾಪಿಸುವ ಅಗತ್ಯವಿದ್ದು, ಇದಕ್ಕಾಗಿ ಕೇವಲ ರೂ. 45 ಕೋಟಿ ಸಾಕಾಗುತ್ತದೆ. ಇದು ಹೆಚ್ಚಾಗಿ ನಿವೃತ್ತ ಸೈನ್ಯ ಅಧಿಕಾರಿಗಳಿಂದ ಕೂಡಿರುತ್ತದೆ. ಅರಣ್ಯದೊಳಗೆ ಕಾಡಿನ ವಿಸ್ತಾರವನ್ನು ಹೆಚ್ಚಿಸುವದು ಹಾಗೂ ಅರಣ್ಯ ಬೆಂಕಿಯನ್ನು ತಡೆಗಟ್ಟುವದು ಈ ವಿಭಾಗದ ಕಾರ್ಯವಾಗಿರುತ್ತದೆ. ಸರಕಾರದೊಡನೆ ಪ್ರಾದೇಶಿಕ ಪರಿಸರ ಪಡೆಯ ಬಗ್ಗೆ ವ್ಯವಹರಿಸಲಾಗುತ್ತದೆ. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸಲು ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿ ಮಾಡುತ್ತೇವೆ ಎಂದು ಮುತ್ತಣ್ಣ ತಿಳಿಸಿದರು.

ಸೂಕ್ಷ್ಮ ಪರಿಸರ ವಲಯ

ಅತೀ ಸೂಕ್ಷ್ಮ ಪರಿಸರ ವಲಯ ಎಂದು ಘೋಷಿತವಾಗಿರುವ ಗ್ರಾಮಗಳ ಜನಜೀವನಕ್ಕಾಗಲೀ, ವ್ಯವಸಾಯ ಕ್ಕಾಗಲೀ, ಬೆಳೆಗಾರರಿಗಾಗಲೀ ಯಾವದೇ ರೀತಿಯ ತೊಂದರೆ ಇಲ್ಲವೆಂದು ಇತ್ತೀಚೆಗೆ ಪ್ರತಾಪ್ ಸಿಂಹ ಅವರು ಹೇಳಿದ್ದು, ಈ ಬಗ್ಗೆ ಸೂಕ್ತ ವಿವರಣೆಯನ್ನು ಕೊಡಗಿನ ಜನತೆಗೆ ನೀಡಬೇಕೆಂದು ಅವರು ಆಗ್ರಹಿಸಿದರು.

ಕೂಟಿಯಾಲ ಸೇತುವೆ

ಕೊಡಗಿನ ಬಿರುನಾಣಿ ಪ್ರದೇಶದ ಬಹುವರ್ಷಗಳ ಬೇಡಿಕೆಯಾದ ಕೂಟಿಯಾಲ ಸೇತುವೆ ಇನ್ನೂ ಸಂದಿಗ್ಧ ಸ್ಥಿತಿಯಲ್ಲೇ ಇದೆ. 2000 ಇಸವಿಯಲ್ಲಿ ನಿರ್ಮಾಣವಾಗಿರುವ ಸೇತುವೆಯ ಇನ್ನೊಂದು ಪ್ರದೇಶ ಬ್ರಹ್ಮಗಿರಿ ವನ್ಯ ಜೀವಿ ಸಂರಕ್ಷಣಾ ಪ್ರದೇಶವಾಗಿದೆ. ಕೆಲವೇ ಮೀಟರುಗಳ ದೂರದ ಪ್ರದೇಶದ ಸಮಸ್ಯೆಯಿಂದಾಗಿ ಸೇತುವೆ ಪ್ರಯೋಜನಕ್ಕೆ ಬಂದಿಲ್ಲ. ರಾಷ್ಟ್ರೀಯ ಅರಣ್ಯ ಮಂಡಳಿಯ ಶಿಫಾರಸ್ಸಿನಿಂದ ಮಾತ್ರ ಸಮಸ್ಯೆ ಪರಿಹಾರ ವಾಗುವದರಿಂದ ಸಂಸದರು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಮೂಲಕ ಸೇತುವೆ ನಿರ್ಮಾಣಕ್ಕೆ ಅನುಮತಿ ಪಡೆಯಲಿ ಎಂದು ಮುತ್ತಣ್ಣ ಸಲಹೆ ನೀಡಿದರು.

ಗೋಷ್ಠಿಯಲ್ಲಿ ವೈಲ್ಡ್ ಲೈಫ್ ಸಂಸ್ಥೆಯ ಕಾರ್ಯದರ್ಶಿ ಕಾರ್ಯಪ್ಪ, ಕೊಡವ ಮಕ್ಕಡ ಕೂಟದ ಅಧ್ಯಕ್ಷರಾದ ಬೊಳ್ಳಜಿರ ಅಯ್ಯಪ್ಪ, ಪ್ರಮುಖರಾದ ರಾಯ್ ಬೋಪಣ್ಣ, ಡಾರ್ಲಿ ಬೆಳ್ಯಪ್ಪ ಹಾಗೂ ನವೀನ್ ಬೆಳ್ಯಪ್ಪ ಉಪಸ್ಥಿತರಿದ್ದರು.