ಮಡಿಕೇರಿ, ಸೆ. 7: ಪ್ರತಿಯೋರ್ವನ ಜೀವನಕ್ಕೆ ಪೂರಕ ಮತ್ತು ಪ್ರೇರಕವಾಗಿರುವ ವಿಶ್ವಮಾನವತೆ ಸಾರಿದ ಜಾನಪದ ಸಂಸ್ಕøತಿಯ ಬೇರುಗಳನ್ನು ಮರೆತು ಆಧುನಿಕತೆಯ ಭರಾಟೆಯಲ್ಲಿ ಆಂಗ್ಲಭಾಷಾ ವ್ಯಾಮೋಹದಿಂದ ಆ ಭಾಷೆಯ ಅನುಕರಣೆಗೆ ಮುಂದಾದರೆ ದುರಂತ ತಪ್ಪಿದ್ದಲ್ಲ ಎಂದು ನಾಡಿನ ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಎಚ್ಚರಿಸಿದ್ದಾರೆ. ಜಾನಪದ ಚೆನ್ನಾಗಿದ್ದಲ್ಲಿ ಸಮಾಜದ ಚೆನ್ನಾಗಿರುತ್ತದೆ ಎಂದೂ ಕಣ್ಣನ್ ಅಭಿಪ್ರಾಯಪಟ್ಟರು.

ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮಡಿಕೇರಿ ತಾಲೂಕು ಜಾನಪದ ಪರಿಷತ್ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ತಾಲೂಕಿನ ಸರ್ಕಾರಿ ಶಾಲಾ ಕನ್ನಡ ಶಿಕ್ಷಕ-ಶಿಕ್ಷಕಿಯರಿಗೆ ಆಯೋಜಿತ ‘ಕನ್ನಡ ಭಾಷೆಯಲ್ಲಿ ಜಾನಪದ ಸೊಗಡು’ ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡು ಬದುಕಿನಲ್ಲಿ ಜಾನಪದ ಹಾಸು ಹೊಕ್ಕಾಗಿರುವದನ್ನು ಗಾದೆ ಮಾತುಗಳು, ಹಾಡುಗಳನ್ನು ಉದಾಹರಿಸಿ ಕಣ್ಣನ್ ಅತ್ಯಂತ ಸ್ವಾರಸ್ಯಕರವಾಗಿ ಮಾತನಾಡಿದರು.

ಭಾರತೀಯ ಸಂಸ್ಕೃತಿಯ ಮೂಲ ಸತ್ತ್ವವಾದ ‘ಜಾನಪದ’ದ ಬೇರುಗಳು ಎಂದಿಗೂ ಸಡಿಲವಾಗ ಕೂಡದು. ಜಾನಪದ ಸಂಸ್ಕೃತಿಯೆ ಬದುಕಿಗೆ ನೈಜ ಅರ್ಥವನ್ನು ಕಲ್ಪಿಸಿ ಕೊಡುವಂತದ್ದಾಗಿ ದೆಯೆಂದು ಅವರು ತಿಳಿಸಿದರು.

ಅಜ್ಞಾತ ವ್ಯಕ್ತಿಗಳಿಂದ ರೂಪು ಗೊಂಡ ಜಾನಪದ ಸಂಸ್ಕೃತಿ ಬದುಕಿನ ಸರ್ವಸ್ವವನ್ನು ಕಟ್ಟಿಕೊಡಬಲ್ಲದು, ಅಂತಹ ಜಾನಪದ ಸಂಸ್ಕೃತಿಯಿಂದ ನಾವು ದೂರವಾದರೆ ನಮ್ಮ ಭಾಷೆ ಮತ್ತು ಬದುಕಿನೊಂದಿಗೆ ನಾಡು ನುಡಿಯ

(ಮೊದಲ ಪುಟದಿಂದ) ಸಂಬಂಧಗಳನ್ನೇ ಕಳೆದುಕೊಳ್ಳುವ ಮೂಲಕ ನೆಲದ ಸಂಸ್ಕೃತಿಯಿಂದ ದೂರವಾಗ ಬೇಕಾಗುತ್ತದೆಂದು ಎಚ್ಚರಿಸಿದ ಕಣ್ಣನ್, ಲೌಕಿಕ ಬದುಕಿಗೆ ನಮ್ಮನ್ನು ನಾವು ಒಪ್ಪಿಸಿಕೊಳ್ಳುವ ಮೂಲಕ ಬದುಕಿನ ಸ್ವಾರಸ್ಯವನ್ನೇ ಕಳೆದುಕೊಳ್ಳುತ್ತಿರುವದಾಗಿ ವಿಷಾದಿಸಿದರು.

ನೋಡುವ ಕಣ್ಣಿಗೆ ಕೇಳುವ ಸಾಮರ್ಥ್ಯವಿಲ್ಲವಾದರೆ, ಕೇಳುವ ಕಿವಿ ನೋಡುವ ಶಕ್ತಿಯನ್ನು ಹೊಂದಿಲ್ಲ. ಹೀಗಿದ್ದೂ ಮೂಗಿನ ಮೇಲೆ ಕೂರುವ ಕನ್ನಡಕದ ಕಾಲಿಗೆ ಕಿವಿ ಆಸರೆ ನೀಡುವ ಮೂಲಕ ಹೊಂದಾಣಿಕೆಯನ್ನು ಸಾಧಿಸುವ ರೀತಿ ಬದುಕಿನಲ್ಲಿ ಜಾನಪದ ಸಂಸ್ಕೃತಿಯನ್ನು ಮಿಳಿತಗೊಳಿಸಿ ಮುನ್ನಡೆಯುವದು ತೀರಾ ಅವಶ್ಯವೆಂದು ಹಾಸ್ಯಭರಿತವಾಗಿ ತಿಳಿಸಿದ ಕಣ್ಣನ್, ಜಾನಪದ ಎಂದರೆ ಜ್ಞಾನ, ವಿಜ್ಞಾನ ಸೇರಿದಂತೆ ಬದುಕಿನ ಎಲ್ಲ ವಿಚಾರಗಳನ್ನು ಒಳಗೊಂಡಿರುವಂತಹದ್ದು ಮತ್ತು ಯಾವತ್ತು ‘ಹದ’ವಾಗಿರುವಂತ್ತದ್ದೇ ಎಂದು ವಿಶ್ಲೇಷಿಸಿದರು.

ಜಾನಪದ ಸಂಸ್ಕೃತಿ ಪ್ರತಿಯೋರ್ವನ ಬದುಕಿಗೆ ಪೂರಕ ಮತ್ತು ಪ್ರೇರಕವಾಗಿದೆ. ಯಾವತ್ತು ನಮ್ಮ ಜಾನಪದ ಸಂಸ್ಕೃತಿಯ ಭಾಗವಾದ ನೆಲದ ಭಾಷೆಯನ್ನು ನಾವು ಹೊರ ಹಾಕಿ ಇತರ ಭಾಷೆಗಳನ್ನು ನಮ್ಮದ್ದನ್ನಾಗಿ ಮಾಡಿಕೊಳ್ಳಲು ಮುಂದಾಗುತ್ತೇವೋ ಅದು ಯಾವತ್ತೂ ಮಾರಕವಾಗುತ್ತದೆ. ವಿಶ್ವಮಾನವತೆಯ ಜಾನಪದ ಸಂಸ್ಕೃತಿಯ ಬೇರುಗಳು ಸಡಿಲವಾಗಿಲ್ಲ. ಆದರೆ, ಇಂತಹ ಜಾನಪದಕ್ಕೆ ಕಸಿ ಮಾಡಲು ಹೊರಟಾಗ ಕಸಿವಿಸಿಯಾಗುತ್ತದೆಂದು ಇಂದಿನ ಆಂಗ್ಲಭಾಷಾ ವ್ಯಾಮೋಹ ಮತ್ತು ಸಂಸ್ಕೃತಿಯ ಅನುಕರಣೆಯನ್ನು ತೀವ್ರವಾಗಿ ಟೀಕಿಸಿದರು.

ಅಂತರ್ ಪಿಶಾಚಿಗಳಾಗಿವೆ

ಇಂಗ್ಲಿಷ್ ವ್ಯಾಮೋಹದಿಂದ ಇಂಟರ್ನ್ಯಾಷನಲ್ ಸ್ಕೂಲ್‍ಗಳಿಗೆ ದಾಖಲಾಗುವ ಮಕ್ಕಳು ತಮ್ಮ ಮೂಲ ಸಂಸ್ಕೃತಿಯಿಂದ ದೂರವಾಗಿ ಅಂತರ್ ಪಿಶಾಚಿಗಳಂತಾಗುತ್ತಿರುವ ಬಗ್ಗೆ ಅತೀವ ಬೇಸರ ವ್ಯಕ್ತಪಡಿಸಿದ ಕಣ್ಣನ್, ನಮ್ಮೆಲ್ಲ ಭಾವನೆಗಳಿಗೆ ಹತ್ತಿರ ವಾದ ಭಾಷೆಯನ್ನು ದೂರಮಾಡಿ ಬದುಕು ಜಟಿಲವಾಗುತ್ತಿದೆ ಎಂದರು.

ಜಾನಪದ ಇನ್ನೂ ತನ್ನನ್ನು ತಾನು ರಕ್ಷಿಸಿಕೊಂಡಿರುವದೇ ತನ್ನ ಹಾಡುಗಳಿಂದಾಗಿ ಎಂದು ವಿಶ್ಲೇಷಿಸಿದ ಅವರು ಭಾಷೆಯ ಮಹತ್ವ ಅರ್ಥೈಸಿಕೊಳ್ಳದಿದ್ದಲ್ಲಿ ಅಂತಹÀ ಭಾಷೆ ನಾಶವಾಗುತ್ತದೆ. ಆ ಮೂಲಕ ಸಮಾಜ, ಜೀವನ ಎಲ್ಲವೂ ಅವನತಿಯತ್ತ ಸಾಗುತ್ತದೆ ಎಂದು ಎಚ್ಚರಿಸಿದರು.

ವಿಚಾರಗೋಷ್ಠಿಯನ್ನು ಸಸಿಗೆ ನೀರೆರೆದು ಉದ್ಘಾಟಿಸಿದ ರೋಟರಿ ಜೋನಲ್ ಲೆಫ್ಟಿನೆಂಟ್ ಅಂಬೆಕಲ್ ವಿನೋದ್ ಕುಶಾಲಪ್ಪ ಮಾತನಾಡಿ, ರೊಟರಿ ಸಂಸ್ಥೆ ತನ್ನ ಕ್ಲಬ್‍ಗಳ ಮೂಲಕ ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ. ಪ್ರಸ್ತುತ ಶಿಕ್ಷಣಕ್ಕೆ ಪೂರಕವಾದ ‘ಟೀಚ್’ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಿದ್ದು, 10 ಸಾವಿರ ‘ಇ-ಲರ್ನಿಂಗ್’ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಿದೆಯೆಂದು ತಿಳಿಸಿದರು.

ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಜೀವನ ಮೌಲ್ಯಗಳು ಅಳಿಸಿಹೋಗುತ್ತಿರುವ ಹಂತದಲ್ಲಿ ಗ್ರಾಮೀಣ ಜಾನಪದ ಸೊಗಡನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವದು ಅತ್ಯವಶ್ಯ. ವ್ಯಾವಹಾರಿಕವಾಗಿ ನಾವು ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳನ್ನು ಬಳಸುತ್ತೇವಾದರು ನೆಲದ ಭಾಷೆ ‘ಕನ್ನಡ’ದ ಬಳಕೆಯಿಂದ ಮಾತ್ರ ಇದು ನನ್ನದು ಎನ್ನುವ ಭಾವನೆ ಮೂಡುತ್ತದೆಂದು ಅಭಿಪ್ರಾಯಪಟ್ಟರು.

ರೋಟರಿ ಮಿಸ್ಟಿ ಹಿಲ್ಸ್ ಮತ್ತು ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಶಾಲಾ ಮಟ್ಟದಲ್ಲಿ ಆಯೋಜಿಸಲಾಗುತ್ತಿದ್ದು, ಶಿಕ್ಷಕರಿಗೆ ಭಾಷಾ ಮಹತ್ವದ ಬಗೆಗಿನ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಾಗ್ಮಿ ಕನ್ನಡ ಪೂಜಾರಿ ಎಂದೇ ಖ್ಯಾತರಾದ ಹಿರೇಮಗಳೂರು ಕಣ್ಣನ್ ಪಾಲ್ಗೊಂಡಿದ್ದು ಸಂತೋಷ ತಂದಿದೆ ಎಂದರು. ಆಸಕ್ತÀ ನಾಗರಿಕರಿಗಾಗಿ ಮುಂದಿನ ದಿನಗಳಲ್ಲಿ ಮಿಸ್ಟಿ ಹಿಲ್ಸ್ ವತಿಯಿಂದ ಮತ್ತಷ್ಟು ಕಾರ್ಯ ಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಅನಿಲ್ ಹೇಳಿದರು.

ಮಿಸ್ಟಿ ಹಿಲ್ಸ್ ಟೀಚ್ ಯೋಜನಾ ಸಮಿತಿ ಅಧ್ಯಕ್ಷ ಪಿ.ಆರ್. ರಾಜೇಶ್ ವೇದಿಕೆಯಲ್ಲಿದ್ದರು.

ಇದೇ ಸಂದರ್ಭ ಹಿರೇಮಗಳೂರು ಕಣ್ಣನ್ ಮತ್ತು ಚಿಕ್ಕಮಗಳೂರಿನಲ್ಲಿರುವ ಹಿರಿಯ ಪತ್ರಕರ್ತ ಕೊಡಗು ಮೂಲದ ಎಂ.ಎನ್. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಮಡಿಕೇರಿ ತಾಲೂಕಿನ ವಿವಿಧೆಡೆಗಳಿಂದ ಶಿಕ್ಷಕರು, ತಾಲೂಕು ಜಾನಪದ ಪರಿಷತ್, ರೋಟರಿ ಸದಸ್ಯರು ವಿಚಾರ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಮಮತಾಂಬಿಕ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಕೆ. ಜಯಲಕ್ಷ್ಮಿ ಅತಿಥಿ ಪರಿಚಯ ನೆರವೇರಿಸಿದರು.

ರೋಟರಿ ಮಿಸ್ಟಿ ಹಿಲ್ಸ್ ಗೌರವ ಕಾರ್ಯದರ್ಶಿ ಪಿ.ಎಂ. ಸಂದೀಪ್ ವಂದಿಸಿದರು.