ಕರಿಕೆ, ಸೆ. 8: ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕುಗ್ರಾಮದಂತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಕೂಲಿಕಾರ್ಮಿಕರೇ ಹೆಚ್ಚಾಗಿ ವಾಸವಿರುವ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ. ದೂರದಲ್ಲಿ ಪಶ್ಚಿಮಘಟ್ಟ ತಪ್ಪಲಿನ ತಲಕಾವೇರಿ ಅಭಯಾರಣ್ಯಕ್ಕೆ ಹೊಂದಿಕೊಂಡು ದೀಪದಂತಿರುವ ಗಡಿ ಭಾಗ ಕರಿಕೆ ಗ್ರಾಮವು ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಿದೆ. ಇದೀಗ ಆ ಸಮಸ್ಯೆಯ ಪಟ್ಟಿಗೆ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಆರಕ್ಷಕ ಉಪಠಾಣೆಯಲ್ಲಿ ಸಿಬ್ಬಂದಿಗಳ ಕೊರತೆ ಎದುರಿಸುತ್ತಿದೆ. ಹಲವು ವರ್ಷಗಳ ಹಿಂದೆ ಇಲ್ಲಿನ ಪೊಲೀಸ್ ಠಾಣೆ ಪೂರ್ಣಪ್ರಮಾಣದ ಸಿಬ್ಬಂದಿಗಳಿಂದ ಕೂಡಿ ಅಪರಾಧಿಗಳಿಗೆ ನಡುಕ ಹುಟ್ಟಿಸಿದ್ದ ಪೊಲೀಸ್ ಠಾಣೆ ಭಾಗಮಂಡಲಕ್ಕೆ ಸ್ಥಳಾಂತರಗೊಂಡ ಬಳಿಕ ಇಲ್ಲಿ ಉಪಠಾಣೆ ಪ್ರಾರಂಭಗೊಂಡಿತ್ತು.

ಆದರೆ, ಇದುವರೆಗೆ ಇಲಾಖೆ ಮಂಜೂರಾತಿಯಂತೆ 6 ಜನ ಪೇದೆಗಳು ಹಾಗೂ ಓರ್ವ ಮುಖ್ಯ ಪೇದೆ ಸೇರಿದಂತೆ ಒಟ್ಟು 7 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕಾಗಿದ್ದು, ಇಲ್ಲಿ ಓರ್ವ ಮುಖ್ಯ ಪೇದೆ ಹಾಗೂ 2 ಜನ ಪೇದೆಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಗ್ರಾಮವನ್ನು 9 ಬೀಟ್‍ಗಳಾಗಿ ವಿಂಗಡಿಸಿ ಬಂದೋಬಸ್ತ್ ಒದಗಿಸುವದು ಕಷ್ಟಕರವಾಗಿದೆ.

ಅಲ್ಲದೆ ಜಿಲ್ಲೆ ಹಾಗೂ ಹೊರ ಜಿಲ್ಲೆಯಲ್ಲಿ ನಡೆಯುವ ಗಲಭೆ ಹಾಗೂ ಇತರ ಸರಕಾರಿ ಕಾರ್ಯಕ್ರಮಗಳು ಮತ್ತು ಹಬ್ಬ ಹರಿದಿನಗಳಿಗೆ ಇಲ್ಲಿನ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸುವದರಿಂದ ಠಾಣೆಯಲ್ಲಿ ಓರ್ವ ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿರುತ್ತಾರೆ.

ಗ್ರಾಮದಲ್ಲಿ ಯಾವದೇ ಅಹಿತಕರ ಘಟನೆ ನಡೆದರೆ ಓರ್ವ ಸಿಬ್ಬಂದಿ ತೆರಳುವದು ಅಸಾಧ್ಯ. ಅಲ್ಲದೆ ಈ ರಸ್ತೆಗಾಗಿ ಕೇರಳದಿಂದ ಪಾನಮತ್ತರಾಗಿ ಹಲವು ಪ್ರಯಾಣಿಕರು ವಾಹನದಲ್ಲಿ ತೆರಳುವದು ಹಾಗೂ ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಅಸಭ್ಯವಾಗಿ ವರ್ತಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ಗ್ರಾಮಸ್ಥರೇ ನಿಭಾಯಿಸಬೇಕಾಗಿರುವದು ದುರಂತವೇ ಸರಿ.

ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಅಪಹರಿಸಿ ತಲಕಾವೇರಿ ಅಭಯಾರಣ್ಯ ವ್ಯಾಪ್ತಿಯ ರಸ್ತೆ ಪ್ರಪಾತಕ್ಕೆ ದುಷ್ಕರ್ಮಿಗಳು ತಳ್ಳಿದ್ದು, ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಇಂಜಿನಿಯರ್ ಒಬ್ಬರ ಸಹಾಯದಿಂದ ಬದುಕಿ ಉಳಿದಿದ್ದು, ಭಾಗಮಂಡಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಕೃತ್ಯವೆಸಗಿದ ದುಷ್ಕರ್ಮಿಗಳನ್ನು ಕರಿಕೆ ಗ್ರಾಮಸ್ಥರೇ ಪತ್ತೆ ಹಚ್ಚಿ ಹಿಡಿದಿರುವದು ಪೊಲೀಸ್ ಇಲಾಖೆ ತಲೆ ತಗ್ಗಿಸುವಂತೆ ಮಾಡಿದೆ.

ಕೇರಳ ರಾಜ್ಯದಲ್ಲಿ ನಾನಾ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡು ನಂತರ ಇಲ್ಲಿನ ರಬ್ಬರ್ ಎಸ್ಟೇಟ್‍ನಲ್ಲಿ ಟ್ಯಾಪಿಂಗ್ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದು, ಕೇರಳ ಪೊಲೀಸರು ಆರೋಪಿಗಳ ವಿಳಾಸ ಹುಡುಕಿಕೊಂಡು ಬರುತ್ತಿದ್ದಾರೆ. ಗಡಿಭಾಗವಾದ ಚೆಂಬೇರಿಯಲ್ಲಿ 3-4 ಮದ್ಯದಂಗಡಿಗಳು ತಲೆ ಎತ್ತಿದ್ದು, ರಸ್ತೆಯಲ್ಲಿ ಮಹಿಳೆಯರು, ಮಕ್ಕಳು, ಓಡಾಡುವದು ದುಸ್ತರವಾಗಿದೆ. ಇವರಿಗೆ ರಕ್ಷಣೆ ಒದಗಿಸಬೇಕಾದ ಆರಕ್ಷಕ ಇಲಾಖೆ ಇಲ್ಲಿ ಎಡವಿದ್ದು, ಸಿಬ್ಬಂದಿಗಳ ಕೊರತೆಯಿಂದಾಗಿ ಗ್ರಾಮಸ್ಥರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಉಪಠಾಣೆಯು ಭಾಗಮಂಡಲ ಪೊಲೀಸ್ ಠಾಣೆಯ ಸಂಪರ್ಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಭಾಗಮಂಡಲ-ಕರಿಕೆ ರಸ್ತೆಯ ಸುಮಾರು 22 ಕಿ.ಮೀ. ಕಾಡಿನ ಮಧ್ಯೆ ಕ್ರಮಿಸಬೇಕಾಗಿದೆ. ಮಳೆಗಾಲದಲ್ಲಿ ರಸ್ತೆ ಬದಿ ಜಲಪಾತಗಳು ತುಂಬಿ ಹರಿಯುತ್ತಿದ್ದು, ಕೇರಳದಿಂದ ಬರುವ ಯುವಕ-ಯುವತಿಯರು ಅಸಭ್ಯವಾಗಿ ವರ್ತಿಸುತ್ತಿರುವದು ಕಂಡು ಬಂದಿದೆ. ಇಲಾಖೆಯಲ್ಲಿ ಸುಮಾರು 10 ವರ್ಷ ಹಳೆಯದಾದ 1 ಮೋಟಾರು ಬೈಕಿದ್ದು, ಇದು ಅಪರಾಧಿಗಳ ನಿಯಂತ್ರಣಕ್ಕೆ ನಿರುಪಯುಕ್ತ ವಾಗಿದೆ. ಇಲಾಖೆ ಕೂಡಲೇ ಸುಸಜ್ಜಿತ ವಾಹನದಲ್ಲಿ ಗಸ್ತು ವ್ಯವಸ್ಥೆ ಮಾಡಬೇಕಾಗಿದೆ. ಆದುದರಿಂದ ಪೊಲೀಸ್ ಇಲಾಖೆ ಕೂಡಲೇ ಎಚ್ಚೆತ್ತು ಉಪಠಾಣೆಗೆ ಪೂರ್ಣ ಸಿಬ್ಬಂದಿ ನೇಮಿಸಿ ಉತ್ತಮ ವಾಹನ ನೀಡುವದು ಸೇರಿದಂತೆ ಒಂದು ಶಸಸ್ತ್ರ ಮೀಸಲು ಪಡೆಯ ತಂಡವನ್ನು ನೇಮಿಸಬೇಕೆಂಬದೇ ಗ್ರಾಮಸ್ಥರ ಆಗ್ರಹವಾಗಿದೆ.

? ಹೊದ್ದೆಟ್ಟಿ ಸುಧೀರ್