ಮಡಿಕೇರಿ, ಸೆ. 8: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಪ್ರಗತಿಪರ ಒಕ್ಕೂಟದ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿರುವ ಗಾಂಧಿ ಪ್ರತಿಮೆಯಡಿ ಧರಣಿ ನಡೆಸಿ ಆರೋಪಿಗಳ ಬಂಧನಕ್ಕೆ ಆಗ್ರಹಿಸಲಾಯಿತು.

ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಧರಣಿ ನೇತೃತ್ವವನ್ನು ವಹಿಸಿ ಮಾತನಾಡಿ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಗೌರಿ ಲಂಕೇಶ್ ಕಾರ್ಯನಿರ್ವಹಿಸುತ್ತಿದ್ದರು. ಅಂತಹವರ ಹತ್ಯೆ ತೀವ್ರ ಖಂಡನೀಯ. ಗೌರಿ ಲಂಕೇಶ್ ಅವರ ಹತ್ಯೆಯನ್ನು ಯಾರೋ ಬಾಡಿಗೆ ಹಂತಕರು ಮಾಡಿರುವ ಸಾಧ್ಯತೆಯಿದ್ದು, ಇವರ ಹಿಂದೆ ಯಾವದೋ ಶಕ್ತಿಯ ಕೈವಾಡವಿದೆ, ಆ ಶಕ್ತಿಯನ್ನು ದಮನ ಮಾಡುವ ಕೆಲಸವನ್ನು ಜನತೆ ಮಾಡಬೇಕಾಗಿದೆ ಎಂದರು.

ಪಟ್ಟಭದ್ರ ಹಿತಾಸಕ್ತಿಗಳು ಆರೋಪಿಗಳನ್ನು ರಕ್ಷಿಸುವ ಉದ್ದೇಶದಿಂದ ಹತ್ಯೆಯನ್ನು ನಕ್ಸಲೈಟರು ಮಾಡಿದ್ದಾರೆ ಎಂಬದನ್ನು ಬಿಂಬಿಸುತ್ತಿದ್ದಾರೆ. ಸರ್ಕಾರ ಮತ್ತು ಪೊಲೀಸ್ ಇಲಾಖೆಯಿಂದ ಆರೋಪಿಗಳ ಬಂಧನ ಸಾಧ್ಯವಿಲ್ಲ. ಜನಜಾಗೃತಿಯಿಂದ ಮಾತ್ರ ಆರೋಪಿಗಳಿಗೆ ಶಿಕ್ಷೆ ಸಾಧ್ಯವೆಂದು ಹೇಳಿದರು.

ಕಾಂಗ್ರೆಸ್ ಪ್ರಮುಖ ವಿ.ಪಿ. ಶಶಿಧರ್ ಮಾತನಾಡಿ, ವಿಚಾರವಾದಿಗಳ ಬಾಯಿ ಮುಚ್ಚಿಸುವ ಷಡ್ಯಂತ್ರ ಹತ್ಯೆ ಹಿಂದೆ ಇದೆ ಎಂಬ ಸಂದೇಶವಿದೆ. ವಿಚಾರವಾದಿಗಳನ್ನು ಹತ್ಯೆ ಮಾಡಿದ ಕೂಡಲೇ ಅವರ ವಿಚಾರ ಸಾಯುವದಿಲ್ಲ. ಶಕ್ತಿಗಳ ವಿರುದ್ಧ ಸೆಟೆದೇಳುವದು ಗೌರಿ ಲಂಕೇಶ್ ಅವರಿಗೆ ಸಲ್ಲಿಸುವ ಗೌರವ ಮತ್ತು ಶ್ರದ್ಧಾಂಜಲಿಯಾಗಿದೆ ಎಂದರು.

ಡಿ.ಸಿ. ನಿರ್ವಾಣಪ್ಪ ಮಾತನಾಡಿ, ಜನಪರ ಧ್ವನಿಗಳು ಒಗ್ಗಟ್ಟಾಗಿ ಪ್ರತಿಭಟನೆ ಮಾಡಬೇಕು. ಆಗ ಪ್ಯಾಸಿಸ್ಟ್ ಶಕ್ತಿಗಳಿಗೆ ಉಳಿಗಾಲವಿಲ್ಲ ಎಂದರು.

ವೇದಿಕೆಯ ಪ್ರಮುಖರಾದ ಅಮೀನ್ ಮೊಹಿಸಿನ್, ಪಿ.ಎಂ. ಖಾಸಿಂ, ಮನುಶೆಣೈ, ಅಲ್ಲಾರಂಡ ವಿಠಲ ನಂಜಪ್ಪ, ಪಿ.ಆರ್. ಭರತ್, ದುರ್ಗಾಪ್ರಸಾದ್, ಕೆ.ಜೆ. ಪೀಟರ್, ಮನ್ಸೂರ್, ಹೆಚ್.ಎಂ. ಕಾವೇರಿ ಹಾಗೂ ಇನ್ನಿತರರು ಇದ್ದರು.

ಮಡಿಕೇರಿ: ಗೌರಿ ಲಂಕೇಶ್ ಹತ್ಯೆ ಅತ್ಯಂತ ಖಂಡನೀಯವಾಗಿದ್ದು, ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಷಡ್ಯಂತ್ರ ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಅಸಮಾಧಾನ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಕೆ.ಎ. ಯಾಕೂಬ್, ಇದು ಸತ್ಯ ಶೋಧನೆಯನ್ನು ದಮನ ಮಾಡುವ ಹೇಯ ಕೃತ್ಯವಾಗಿದ್ದು, ದಿಟ್ಟ ಮಹಿಳೆಯ ಮೇಲಿನ ಧಾಳಿಯಿಂದಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ತಲೆ ತಗ್ಗಿಸುವಂತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೇಶದ ಸಂವಿಧಾನದ ಮೇಲೆ ಗೌರವ ಇಲ್ಲದವರು ಮಾಡಿದ ನೀಚ ಕೃತ್ಯ ಇದಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಖಾಲಿದ್ ಹಾಕತ್ತೂರು, ಸಂಘಟನಾ ಕಾರ್ಯದರ್ಶಿ ಎಂ.ಎ. ಮೊಯ್ದು, ನಾಪೆÀÇೀಕ್ಲು ಬ್ಲಾಕ್ ಅಧ್ಯಕ್ಷ ಕೆ.ಎ. ಬಷೀರ್, ಸದಸ್ಯರಾದ ಮೊಹಮ್ಮದ್ ಹನೀಫ್ ಹಾಗೂ ಹೊಸ್ಕೇರಿ ಗ್ರಾಪಂ ಉಪಾಧ್ಯಕ್ಷ ಯೂಸುಫ್ ಆಲಿ ಉಪಸ್ಥಿತರಿದ್ದರು.

ಎಸ್.ಡಿ.ಪಿ.ಐ. ಪ್ರತಿಭಟನೆ

ವೀರಾಜಪೇಟೆ: ಗೌರಿ ಲಂಕೇಶ್ ಹತ್ಯೆಯನ್ನು ಖಂಡಿಸಿ ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಅಫ್ ಇಂಡಿಯ ಪಕ್ಷದ ವೀರಾಜಪೇಟೆ ಶಾಖೆಯ ವತಿಯಿಂದ ನಗರದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿತು.

ಮಾತನಾಡಿದ ಎಸ್.ಡಿ.ಪಿ.ಐ ಪಕ್ಷದ ನಗರ ಶಾಖೆ ಅಧ್ಯಕ್ಷ ಅಬ್ದುಲ್ ಸಾಭಿತ್, ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಎಸ್.ಐ.ಟಿ ಸಂಸ್ಥೆಯಿಂದ ತನಿಖೆ ಮಾಡಿಸಬೇಕು ಎಂದರು.

ಜಿಲ್ಲಾ ಸಂಚಾಲಕ ಇಬ್ರಾಹಿಂ ಮಾತನಾಡಿ ಇತ್ತೀಚಿನ ಬೆಳವಣಿಗೆಯಲ್ಲಿ ದೇಶದ ಪ್ರಗತಿಪರ ಚಿಂತಕ ಹತ್ಯೆಯಾಗುತ್ತಿರುವದು ಪೊಲೀಸ್ ಇಲಾಖೆ ವೈಫಲ್ಯತೆಯನ್ನು ತೋರಿಸುತ್ತದೆ ಎಂದರು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಹತ್ಯೆ ಮಾಡಿದವರನ್ನು ಬಂಧಿಸುವಂತೆ ಘೋಷಣೆಗಳನ್ನು ಕೂಗಿದರು. ಕೆಲ ಕಾಲ ರಸ್ತೆ ತಡೆ ಮಾಡಿದರು. ಪಕ್ಷದ ಮುಖಂಡರುಗಳಾದ ಶರೀಫ್, ಅಬ್ದುಲ್ಲ, ಶಂಷಿರ್, ಯಾಶೀರ್ ಅರಫತ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಪೊಲೀಸ್ ಇಲಾಖೆಗೆ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.

ನೆಲ್ಯಹುದಿಕೇರಿಯಲ್ಲಿ ಪ್ರತಿಭಟನೆ

ಸಿದ್ದಾಪುರ: ನೆಲ್ಯಹುದಿಕೇರಿ ವಲಯ ಕಾಂಗ್ರೆಸ್ ವತಿಯಿಂದ ನೆಲ್ಯಹುದಿಕೇರಿ ಪಟ್ಟಣದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ಗೌರಿ ಲಂಕೇಶ್‍ರವರ ಹತ್ಯೆ ಹೇಯ ಕೃತ್ಯವಾಗಿದ್ದು, ನಾಗರಿಕ ಸಮಾಜ ಕೃತ್ಯವನ್ನು ಖಂಡಿಸಬೇಕು. ಹಂತಕರನ್ನು ಕೂಡಲೇ ಬಂಧಿಸಿ, ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದರು. ಕಾಂಗ್ರೆಸ್ ಮುಖಂಡ ಗಣೇಶ್ ಮಾತನಾಡಿದರು.

ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಜೋಸೆಫ್ ಶ್ಯಾಂ, ತಾ.ಪಂ ಸದಸ್ಯೆ ಸುಹದಾ ಅಶ್ರಫ್, ಗ್ರಾ.ಪಂ ಉಪಾಧ್ಯಕ್ಷೆ ಸಫಿಯಾ, ಸದಸ್ಯರಾದ ಅಫ್ಸಲ್, ಶುಕೂರ್, ಸಾಬು ವರ್ಗೀಸ್ ಮುಖಂಡ ಮುಸ್ತಫ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

ಶನಿವಾರಸಂತೆ: ಹೋರಾಟಗಾರ್ತಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಅವರಿಗೆ ಕೊಡ್ಲಿಪೇಟೆ ಬಸ್ ನಿಲ್ದಾಣದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೌನಾಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಲಾಯಿತು.

ಈ ಸಂದರ್ಭ ದ.ಸಂ.ಸ. ಜಿಲ್ಲಾ ಮುಖಂಡರಾದ ಡಿ.ವಿ. ಜಗದೀಶ್, ಟಿಪ್ಪು ಯುವಕ ಸಂಘದ ಅಧ್ಯಕ್ಷ ಔರಂಗಜೇಬ್, ಪ್ರಗತಿಪರರಾದ ಕುಡ್ಲೂರು ಮಲ್ಲೇಶ್, ಮುಹಮ್ಮದ್ ಹನೀಫ್, ಸಹೀಲ್ ಬಾಷ, ಸಿರಾಜ್, ಹಮೀದ್, ಇಸಾಕ್, ದಲಿತ ಮುಖಂಡರಾದ ವೀರಭದ್ರ, ವಸಂತ ಮತ್ತು ಮಹೇಶ ಇನ್ನಿತರರು ಹಾಜರಿದ್ದರು.

ಮೊಂಬತ್ತಿ ಮೆರವಣಿಗೆ

ಸೋಮವಾರಪೇಟೆ : ಗೌರಿ ಲಂಕೇಶ್ ಹತ್ಯೆಗೈದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಮೊಂಬತ್ತಿ ಮೆರವಣಿಗೆ ನಡೆಸಿ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಾಕಾರರು ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿದರು. ರಾಜ್ಯ ಮತ್ತು ರಾಷ್ಟ್ರದಲ್ಲಿ ಚಿಂತಕರು, ವಿಚಾರವಾದಿಗಳು ಹಾಗೂ ಹೋರಾಟಗಾರರ ಹತ್ಯೆಯೊಂದಿಗೆ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಯುತ್ತಿದೆ. ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಹೋರಾಟಗಾರರು ತಮ್ಮ ಸೈದ್ಧಾಂತಿಕ ನಿಲುವನ್ನು ವ್ಯಕ್ತಪಡಿಸಲು ಸಾಧ್ಯವಾಗದ ದುಸ್ಥಿತಿ ಇದೆ ಎಂದು ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್ ಆತಂಕ ವ್ಯಕ್ತಪಡಿಸಿದರು.

ತಹಶೀಲ್ದಾರ್ ಮಹೇಶ್ ಅವರು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಲಾಗುವದು ಎಂದರು. ನಂತರ ಪೊಲೀಸ್ ಠಾಣೆಗೆ ತೆರಳಿದ ಪ್ರತಿಭಟನಾಕಾರರು ರಾಜ್ಯದಲ್ಲಿ ನಡೆಯುವ ಹಿಂಸಾತ್ಮಕ ಕೃತ್ಯಗಳನ್ನು ತಡೆಯಬೇಕು ಎಂದು ಆಗ್ರಹಿಸಿ ಠಾಣಾಧಿಕಾರಿ ಶಿವಣ್ಣ ಅವರ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ರೂಪ ಸುರೇಶ್, ನಗರಾಧ್ಯಕ್ಷ ಬಿ.ಎಸ್. ಮಂಜುನಾಥ್, ಸವಿತ ಸಮಾಜದ ಅಧ್ಯಕ್ಷ ವೆಂಕಟೇಶ್, ಜಾನಪದ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಎಸ್.ಎ. ಮುರುಳೀಧರ್, ಭಗವತಿ ಯುವಕ ಸಂಘದ ಅಧ್ಯಕ್ಷ ನವೀನ್, ಮೊಗೇರ ಸಂಘದ ಅಧ್ಯಕ್ಷ ದಾಮೋದರ್, ದಲಿತ ಒಕ್ಕೂಟದ ತಾಲೂಕು ಅಧ್ಯಕ್ಷ ಟಿ.ಈ. ಸುರೇಶ್ ಮತ್ತಿತರರು ಭಾಗವಹಿಸಿದ್ದರು.