ಸೋಮವಾರಪೇಟೆ, ಸೆ. 9: ಕೊಲೆ ಪ್ರಕರಣದ ಪ್ರಮುಖ ಆರೋಪಿ ಯಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಜಿಲ್ಲಾ ಅಧ್ಯಕ್ಷ ಜಾಮೀನಿನ ಮೇಲೆ ಹೊರಬಂದು ಇದೀಗ ಕೋಮು ಪ್ರಚೋದಕ ಹೇಳಿಕೆಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಭಾರತೀಯ ಜನತಾ ಪಾರ್ಟಿಯ ಪ್ರಮುಖರು, ತಕ್ಷಣ ಪಿಎಫ್‍ಐ ಜಿಲ್ಲಾ ಜಿಲ್ಲಾಧ್ಯಕ್ಷರನ್ನು ಕೊಡಗಿನಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಎಸ್.ಆರ್. ಸೋಮೇಶ್, (ಮೊದಲ ಪುಟದಿಂದ) ಕಳೆದ ವರ್ಷ ಕುಶಾಲನಗರದ ಗುಡ್ಡೆಹೊಸೂರಿನಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿ ಪೊಲೀಸರಿಂದ ಬಂಧಿಸಲ್ಪಟ್ಟು, ಇದೀಗ ಜಾಮೀನಿನ ಮೇಲೆ ಹೊರಬಂದಿರುವ ಪಿಎಫ್‍ಐ ಜಿಲ್ಲಾ ಅಧ್ಯಕ್ಷ ಹ್ಯಾರೀಸ್, ಕೊಡಗಿನಲ್ಲಿ ಅಶಾಂತಿ ಸೃಷ್ಟಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಮೊದಲು ಈತನಿಗೆ ನೀಡಿರುವ ಜಾಮೀನನ್ನು ವಾಪಸ್ ಪಡೆದು ಬಂಧಿಸಬೇಕು ಜತೆಗೆ ಕೊಡಗಿನಿಂದಲೇ ಗಡೀಪಾರು ಮಾಡಬೇಕು. ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ, ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡಬೇಕು. ಪಿಎಫ್‍ಐ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಸೋಮೇಶ್ ಆಗ್ರಹಿಸಿದರು.

ಹಿಂದೂ ಸಮಾಜದ ಮೇಲಾಗುತ್ತಿರುವ ದೌರ್ಜನ್ಯಗಳಿಂದ ಮನನೊಂದು ಸಿದ್ದಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯ ಕಂಠಿ ಕಾರ್ಯಪ್ಪ ಅವರು ಹೇಳಿಕೆ ನೀಡಿದ್ದಾರೆ. ಇದನ್ನೇ ದೊಡ್ಡದಾಗಿ ಬಿಂಬಿಸುವ ಮೂಲಕ ಅವರ ಬಂಧನಕ್ಕೆ ಕೆಲ ಸಂಘಟನೆಗಳು ಹಾಗೂ ಕಾಂಗ್ರೆಸ್ ಪ್ರಮುಖರು ಆಗ್ರಹಿಸುತ್ತಿರುವದು ಖಂಡನೀಯ. ಹಾಗಾದರೆ ಹಿಂದೂ ಸಂಘಟಕರ ಜೀವಕ್ಕೆ ಬೆಲೆಯಿಲ್ಲವೇ? ಎಂದು ಪ್ರಶ್ನಿಸಿದರು.

ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಾಕ್ಷಿ ನಾಶದ ಆರೋಪವಿದ್ದು, ಜಿಲ್ಲೆಯ ಮೂಲದ ಸಚಿವರ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಏಕೆ ಒತ್ತಾಯಿಸುತ್ತಿಲ್ಲ ಎಂದು ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನು ಕುಮಾರ್ ರೈ ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಭಾರತೀಯ ಜನತಾ ಪಾರ್ಟಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಿಬ್ಬೆಟ್ಟ ಮಧು, ಸದಸ್ಯ ಮಸಗೋಡು ಸತೀಶ್ ಉಪಸ್ಥಿತರಿದ್ದರು.