ಮಡಿಕೇರಿ, ಸೆ. 9: ಒಂದು ದಶಕ ಹಿಂದೆಯೇ 2006ರಲ್ಲಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸುಸಜ್ಜಿತ ಕನ್ನಡ ಸಾಂಸ್ಕøತಿಕ ಕಲಾಭವನ ನಿರ್ಮಾಣ ಯೋಜನೆ ರೂಪುಗೊಂಡಿದ್ದರೂ, ಸರಕಾರ ಹಾಗೂ ಜನಪ್ರತಿನಿಧಿಗಳ ಸಹಿತ ಸಂಬಂಧಪಟ್ಟ ಇಲಾಖೆಗಳ ಇಚ್ಛಾಶಕ್ತಿಯ ಕೊರತೆಯಿಂದ ಇಂದಿಗೂ ಕಾಮಗಾರಿ ಪೂರ್ಣ ಗೊಳ್ಳದೆ ಆಮೆಗತಿಯಲ್ಲಿ ಕೆಲಸ ನಡೆಯುವಂತಾಗಿದೆ.ಕಾರಣ 2006ರಲ್ಲಿ ಅಂದಿನ ಸರಕಾರ ರೂಪಿಸಿದ್ದ ರೂ. 4 ಕೋಟಿ ಯೋಜನೆಯ ಕಾಮಗಾರಿಗೆ, ಟೆಂಡರ್ ಪ್ರಕ್ರಿಯೆ ಮುಗಿದಿರುವದು 2015 ಅವಧಿಯಲ್ಲಾಗಿದೆ. ಆ ಬಳಿಕ ನಗರದ ಮೈಸೂರು ರಸ್ತೆಗೆ ಹೊಂದಿಕೊಂಡಂತೆ, ಹಿಂದಿನ ಸೌದೆ ಡಿಪೋದ ನಿವೇಶನದಲ್ಲಿ ಕೊನೆಗೂ ಕಾಮಗಾರಿಗೆ ಚಾಲನೆಯೊಂದಿಗೆ ಆರಂಭಿಕ ಹಣ ರೂ. 1.07 ಕೋಟಿ ಬಿಡುಗಡೆಯೂ ಮಾಡಲಾಗಿತ್ತು.

ಬೆಂಗಳೂರಿನ ಕೆ. ಬಾಲರಾಜ್ ಕನ್ಸ್ಟ್ರಕ್ಷನ್ಸ್‍ನಿಂದ ವರ್ಷದ ಹಿಂದೆ ಲಭಿಸಿರುವ ಇಲಾಖೆಯ ಮೂಲ ಹಣದಿಂದ ಸಂಬಂಧಿಸಿದ ನಿವೇಶನವನ್ನು ಸರಿಪಡಿಸಿ ಅಡಿಪಾಯದೊಂದಿಗೆ ಪಿಲ್ಲರ್‍ಗಳನ್ನು ನಿರ್ಮಿಸುವ ಕೆಲಸ ಪ್ರಾರಂಭಗೊಂಡಿತ್ತು. ಇಷ್ಟು ಹೊತ್ತಿಗೆ ಸರಕಾರದಿಂದ ರೂ. ನಾಲ್ಕು ಕೋಟಿ ಹಣದಲ್ಲಿ, ಮಿಕ್ಕ ರೂ. ಮೂರು ಕೋಟಿಯು ಲಭಿಸುವ ಆಶ್ವಾಸನೆ ಇತ್ತು. ಆದರೆ ಬಿಡುಗಡೆ ಗೊಂಡಿರುವ ಹಣಕ್ಕೆ ಪೂರಕ ವಾಗಿ ಕಾಮಗಾರಿ ಪ್ರಾರಂಭಗೊಂಡು ಒಂದು ವರ್ಷ ಕಳೆದು ಹೋಗಿದೆ. ಅಲ್ಲದೆ ಕಳೆದ ವರ್ಷ ಕಾಮಗಾರಿ ಆರಂಭ ಗೊಂಡಾಗ, ಜುಲೈ ವೇಳೆಗೆ ಸಾಂಸ್ಕøತಿಕ ಭವನ ಮುಗಿಸುವ ಇಂಗಿತವನ್ನು ಕೂಡ ಗುತ್ತಿಗೆದಾರರು ಹೊರಗೆಡ ವಿದ್ದರು. ಪ್ರಸಕ್ತ ಕೋಟಿ ವೆಚ್ಚದ ಕಾಮಗಾರಿ ಮುಗಿದಿರುವದಾಗಿ ತಿಳಿಸಿರುವ ಗುತ್ತಿಗೆದಾರರು, ನೆಲ ಹಂತದಲ್ಲಿ ವಾಹನ ನಿಲುಗಡೆ ಇತ್ಯಾದಿಗೆ ಪೂರಕ ಕಾಮಗಾರಿ ಮಾಡಲಾಗಿದೆ ಎಂದು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ಮರು ಚಾಲನೆ : ಸಂಬಂಧಿಸಿದ ಗುತ್ತಿಗೆ ಸಂಸ್ಥೆಯಿಂದ ಇಂದು ನಿಂತುಹೋಗಿದ್ದ ಕೆಲಸ ಮುಂದುವರಿಸುವ ಸಲುವಾಗಿ ನೆಲ ಅಂತಸ್ತು ಮೇಲು

(ಮೊದಲ ಪುಟದಿಂದ) ಹಾಸು (ಸ್ಲ್ಯಾಬ್) ನಿರ್ಮಾಣದ ಪೂಜಾ ಕೈಂಕರ್ಯ ನೆರವೇರಿಸಲಾಗಿದೆ. ಆದರೆ ಸಂಬಂಧಿಸಿದ ಇಲಾಖೆಯಿಂದ ಇನ್ನು ಕೂಡ ಕಲಾಮಂದಿರಕ್ಕೆ ಪೂರಕ ನೀಲ ನಕಾಶೆ ಹಾಗೂ ಹಣ ಲಭಿಸಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಿಗಧಿತ ಸಮಯದೊಳಗೆ ಕಲಾಮಂದಿರ ಕಾಮಗಾರಿ ಮುಗಿಸಲು ಸಾಧ್ಯವಾಗದೆ ವಿಳಂಬವಾಗುವದು ಖಂಡಿತ. ಈ ಬಗ್ಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಚಿನ್ನಸ್ವಾಮಿ ಬಳಿ ಪ್ರತಿಕ್ರಿಯೆ ಬಯಸಿದಾಗ ಜಿಲ್ಲೆಯಿಂದ ನಿಯಮಾನುಸಾರ ಪತ್ರ ವ್ಯವಹಾರ ನಡೆದಿರುವದಾಗಿ ಖಚಿತ ಪಡಿಸಿದರು.

ಶಾಸಕರ ಪ್ರತಿಕ್ರಿಯೆ : ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಗಮನ ಸೆಳೆದಾಗ, ಹಿಂದೆ ತಮ್ಮ ಸರಕಾರವಿದ್ದಾಗ ಕಲಾಭವನದ ಕೆಲಸಕ್ಕೆ ಹಣ ಮಂಜೂರು ಮಾಡಲಾಗಿದ್ದು, ಪ್ರಸಕ್ತ ಸರಕಾರ ಬಿಡುಗಡೆಗೊಳಿಸದೆ ಕಾಮಗಾರಿ ವಿಳಂಬವಾಗಿದ್ದು, ಈ ಬಗ್ಗೆಯೂ ಇಲಾಖೆಯ ಗಮನ ಸೆಳೆದಿರುವದಾಗಿ ಪ್ರತಿಕ್ರಿಯಿಸಿದರು.

ಅಲ್ಲದೆ, ರೂ. 4 ಕೋಟಿ ವೆಚ್ಚದ ಯೋಜನೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಗೌಡ ಸಾಹಿತ್ಯ ಅಕಾಡೆಮಿ ಕಚೇರಿಗಳ ಸಹಿತ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಮುಚ್ಚಯದೊಂದಿಗೆ ಅಲ್ಲೊಂದು ಗ್ರಂಥಾಲಯ, ವಸ್ತು ಸಂಗ್ರಹಾಲಯ ಇತ್ಯಾದಿ ಯೋಜನೆ ರೂಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಒಟ್ಟಿನಲ್ಲಿ ಕಳೆದ ಒಂದು ದಶಕದಿಂದ ರೂಪುಗೊಂಡಿರುವ ಕನ್ನಡ ಕಲಾಮಂದಿರ ಸಹಿತ ಸಾಂಸ್ಕøತಿಕ ಸಮುಚ್ಚಯ ಸಂಕೀರ್ಣ ಕಾಮಗಾರಿಗೆ ಇನ್ನು ಕಾಲ ಕೂಡಿ ಬಂದಂತಿಲ್ಲ. ರೂ. ನಾಲ್ಕು ಕೋಟಿ ಮೊತ್ತದ ಯೋಜನೆಗೆ ಈಗಿನ ವೆಚ್ಚದಂತೆ ದುಪ್ಪಟ್ಟು ಅನುದಾನ ಬೇಕಾಗಬಹುದು ಎಂಬ ಸುಳಿವು ಲಭಿಸಿದೆ. ಇತ್ತ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳು ಕಾಳಜಿ ವಹಿಸಬೇಕಿದೆ.