ಛಿವೀರಾಜಪೇಟೆ, ಸೆ.9: ವೀರಾಜಪೇಟೆ ಪಟ್ಣಣ ಪಂಚಾಯಿತಿ ಆರ್ಜಿ ಗ್ರಾಮದಲ್ಲಿ ಅವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿರುವದನ್ನು ಖಂಡಿಸಿ ಗ್ರಾಮಸ್ಥರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಪಂಚಾಯಿತಿಯಿಂದ ಭರವಸೆಯ ಲಿಖಿತ ಪತ್ರ ನೀಡಿದ ನಂತರ ತಾತ್ಕಾಲಿಕವಾಗಿ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಗ್ರಾಮಸ್ಥರ ಪರವಾಗಿ ಚುಪ್ಪಾ ನಾಗರಾಜ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗರಾಜ್ ಅವರು ತಹಶೀಲ್ದಾರ್ ಗೋವಿಂದರಾಜ್ ಸಮ್ಮುಖದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಮಾಹಿತಿ ನೀಡಿ 15 ದಿನಗಳಲ್ಲಿ ಸಿ.ಸಿ ಕ್ಯಾಮರಾ ಅಳವಡಿಸಲಾಗುವದು. ಇಂದಿ ನಿಂದಲೇ ನಾಯಿಗಳನ್ನು ಹಿಡಿಯ ಲಾಗುವದು. ಕಸವನ್ನು ತರುವಾಗ ವಾಹನಗಳಿಗೆ ಪ್ಲಾಸ್ಟಿಕ್ ಹೊದಿಕೆಗಳನ್ನು ಹೊದಿಸಿ ತರಲಾಗುವದು. ದಿನದ 24 ಗಂಟೆ ಕಾವಲುಗಾರರನ್ನು ನೇಮಿಸ ಲಾಗುವದು. ತ್ಯಾಜ್ಯ ವಿಲೇವಾರಿ ಸ್ಥಳಗಳಿಗೆ ಅಗತ್ಯ ಔಷಧಿಯನ್ನು ನಿರಂತರವಾಗಿ ಸಿಂಪಡಿಸಲಾಗುವದು. ಕಸ ವಿಲೇವಾರಿಯ ಘಟಕದಲ್ಲಿ ದುರ್ವಾಸನೆ ತಡೆಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವದು. 6 ತಿಂಗಳಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಈಗಿನಿಂದಲೇ ಸಂಬಂಧಪಟ್ಟ ಕಾಮಗಾರಿಗೆ ಚಾಲನೆ ನೀಡಲಾಗುವದು ಎಂದು ಲಿಖಿತ ಪತ್ರದಲ್ಲಿ ತಿಳಿಸಿರುವದರಿಂದ ಲಿಖಿತ ಭರವಸೆಯಂತೆ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ. ಈ ಎಲ್ಲಾ ನಿಯಮಗಳನ್ನು ಪಾಲಿಸದಿದ್ದರೆ ಪ್ರತಿಭಟನೆ ಮುಂದುವರೆಯಲಿದೆ ಎಂದು ಹೇಳಿದರು.

ಗ್ರಾಮಸ್ಥ ಉಪೇಂದ್ರ ಮಾತನಾಡಿ 2001ರಿಂದಲೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಇಂತಹ ಪೊಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದಾರೆ. ನಮಗೆ ಪಟ್ಟಣ ಪಂಚಾಯಿತಿಯ ಮೇಲೆ ನಂಬಿಕೆ ಇಲ್ಲ. ಗ್ರಾಮಸ್ಥರು ಪ್ರತಿಭಟನೆಗೆ ಮುಂದಾದಾಗ ಮಾತ್ರ ಎಲ್ಲಾ ಭರವಸೆಗಳನ್ನು ನೀಡಿ ಗ್ರಾಮಸ್ಥರ ಮನ ಒಲಿಸುತ್ತಾರೆ. ನಂತರ ನುಣುಚಿಕೊಳ್ಳುತ್ತಾರೆ. ತ್ಯಾಜ್ಯ ವಿಲೇವಾರಿ ಘಟಕದ ಒತ್ತಾಗಿಯೇ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ 28ರಿಂದ 40 ಮನೆಗಳಿದ್ದು, ಇವರುಗಳು (ಮೊದಲ ಪುಟದಿಂದ) ತ್ಯಾಜ್ಯದ ವಿಷಾನಿಲ ಸೇವಿಸಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಬಂದು ಸ್ಥಳ ಪರೀಶಿಲನೆ ನಡೆಸಿದರೆ ಅವರಿಗೆ ನೈಜಾಂಶದ ಅರಿವಾಗುತ್ತದೆ ಎಂದು ಹೇಳಿದರು.

ಗ್ರಾಮಸ್ಥ ಕೆ.ಕೆ ಅನಿಲ್ ಮಾತನಾಡಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಜೆಸಿಬಿ ಮೂಲಕ ಗುಂಡಿ ತೆಗೆದು ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿದೆ ಎಂಬ ಹೇಳಿಕೆಯನ್ನು ಪತ್ರಿಕೆಗೆ ನೀಡಿದ್ದಾರೆ. ನಮಗೆ 6 ತಿಂಗಳಲ್ಲಿ ಯಂತ್ರೋಪ ಕರಣಗಳ ಮೂಲಕ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿ ಮಾಡಲಾಗುವದು ಎಂದು ಲಿಖಿತವಾಗಿ ನೀಡಿದ್ದಾರೆ. ಇವರ ದ್ವಂದ್ವ ಹೇಳಿಕೆಗಳಿಗೆ ಕಾರಣ ಏನು ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಸಿ.ಆರ್ ವೇಣು, ಎಂ.ಹೆಚ್ ನಾಸಿರ್, ಅನೀಲ್ ಕುಮಾರ್ ಜನಾರ್ದನ್ ಉಪಸ್ಥಿತರಿದ್ದರು.