ಶನಿವಾರಸಂತೆ, ಸೆ. 9: ಆರು ತಿಂಗಳಿಂದ ಸಾರ್ವಜನಿಕ ನಲ್ಲಿಯಲ್ಲಿ ನೀರು ಬರುತ್ತಿಲ್ಲ 2 ಕೊಳವೆ ಬಾವಿ ಹಾಳಾಗಿದೆ ಮತ್ತೊಂದು ಕೊಳವೆ ಬಾವಿಯ ನೀರು ಕಲುಷಿತವಾಗಿದೆ ಯಾವ ನೀರು ಕುಡಿಯಬೇಕು ಎಂದು ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಕೇಳಿ ಬಂದ ಎಡೆಹಳ್ಳಿ ಗ್ರಾಮಸ್ಥರ ಆಕ್ರೋಶದ ಮಾತುಗಳು ಬಾಟಲಿಯೊಂದರಲ್ಲಿ ಕೊಳವೆ ಬಾವಿಯ ಕಲುಷಿತ ನೀರನ್ನು ತುಂಬಿಸಿಕೊಂಡು ಬಂದು ವೇದಿಕೆಯ ಮುಂದಿಟ್ಟು ಪಂಚಾಯಿತಿ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡರು ಕೆಲವು ಕಾಲ ಸಭೆಯಲ್ಲಿ ಗೊಂದಲದ ವಾತಾವರಣ ಉಂಟಾಯಿತು

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ ತಾ.ಪಂ. ಸದಸ್ಯ ಬಿ.ಎಸ್. ಅನಂತಕುಮಾರ್ ಮಾತನಾಡಿ, ವಿದ್ಯುತ್ ವೊಲ್ಟೇಜ್ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆ ತಲೆದೊರಿದೆ ರೂ. 1.5 ಲಕ್ಷ ವೆಚ್ಚದಲ್ಲಿ ಪೈಪ್ ಲೈನ್ ಅಳವಡಿಸಲು ಒಂದೂವರೆ ತಿಂಗಳು ಬೇಕಾಗುತ್ತದೆ. ಅದಕ್ಕೆ ಯಸಳೂರು ಲೈನ್ ಬದಲಾಯಿಸಿ ಶನಿವಾರಸಂತೆ ಲೈನ್ ಅಳವಡಿಸಿದರೆ 15 ದಿನಗಳೊಳಗೆ ನೀರು ಸರಬರಾಜಿನ ಪ್ರಯತ್ನ ಮಾಡಬಹುದು ಎಂದು ಹೇಳಿ ಗ್ರಾಮಸ್ಥರನ್ನು ಸಮಾಧಾನ ಗೊಳಿಸಿದರು

ಕಾಜೂರು ಸೇತುವೆ ಹೊಳೆಯ ಬಳಿ ಶನಿವಾರಸಂತೆ ಕೋಳಿಮಾಂಸದ ಅಂಗಡಿಯವರು ತ್ಯಾಜ್ಯ ಹಾಕುತ್ತಿರುವ ಬಗ್ಗೆ ಬಿಪಿಎಲ್ ಕಾರ್ಡ್ ಸಮಸ್ಯೆ ಬಗ್ಗೆ ಗ್ರಾಮಸಭೆಗೆ ಗೈರು ಹಾಜರಾದ ಕೆಲವು ಇಲಾಖಾಧಿಕಾರಿಗಳ ಬಗ್ಗೆ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ.ಪಿ. ಬೋಜಪ್ಪ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಾಚಾರಕಿ ಕೆ. ಶೀಲಾ ಮಾತನಾಡಿ ಸರಕಾರದ ನೂತನ ‘ಮಾತೃಪೂರ್ಣ ಯೋಜನೆ’ ಯಡಿ ಗರ್ಭಿಣಿ ಹಾಗೂ ಬಾಣಂತಿ ಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕಾಂಶವುಳ್ಳ ಬಿಸಿಯೂಟ ವ್ಯವಸ್ಥೆ ಮಾಡಿರುವ ಬಗ್ಗೆ ಮಾಹಿತಿ ನೀಡಿದರು

ಜಿ.ಪಂ. ಸದಸ್ಯೆ ಸರೋಜಮ್ಮ ಮಾತನಾಡಿ, ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದು ಕೊಳವೆ ಬಾವಿಗಳ ದುರಸ್ತಿ, ಪೈಪ್ ಲೈನ್ ಅಳವಡಿಕೆ ಬಗ್ಗೆ ಪ್ರಯತ್ನ ನಡೆದಿದೆ. ಮುಂಬರುವ ತಮ್ಮ ಅನುದಾನದಲ್ಲಿ ಕೆಲಸ ಮಾಡಲಾಗುವದು ಎಂದು ಭರವಸೆ ನೀಡಿದರು.

ನೋಡಲ್ ಅಧಿಕಾರಿ ಡಾ. ನಾಗರಾಜ್ ಮಾತನಾಡಿ, ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಇರುವ ಸಂಪನ್ಮೂಲಗಳ ಸದ್ಬಳಕೆಯಾಗಿ ಅಭಿವೃದ್ಧಿಯಾಗಬೇಕು ಎಂದರು.

ಅಧÀ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಸಿ. ಜೆ. ಗಿರೀಶ್ ಮಾತನಾಡಿ 14 ಕೊಳವೆ ಬಾವಿಗಳು ದುರಸ್ಥಿಗೊಳಪಟ್ಟು ನೀರಿನ ಸಮಸ್ಯೆ ಉಂಟಾಗಿದೆ. ಅನುದಾನದ ಮಿತಿಯೊಳಗೆ ಕೆಲಸ ಮಾಡಲು ಸಾಧ್ಯ. ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಶೇ. 90 ರಷ್ಟು ಪ್ರಯತ್ನ ನಡೆದಿದೆ ಎಂದರು.

ಪಂಚಾಯಿತಿ ಉಪಾಧ್ಯಕ್ಷೆ ರೂಪಾ, ಸದಸ್ಯರಾದ ಎನ್.ಕೆ. ಸುಮತಿ, ನೇತ್ರಾವತಿ, ಬಿ.ಎಂ. ಪಾರ್ವತಿ, ಕಮಲಮ್ಮ, ಮನು ಹರೀಶ್, ಬಿಂದಮ್ಮ, ಯೋಗೇಂದ್ರ, ಸಂತೋಷ್, ಹೂವಣ್ಣ, ಸಂದೇಶ್, ರಕ್ಷಿತ, ಲೆಕ್ಕಾಧಿಕಾರಿ ದೇವರಾಜ್, ಕಂಪ್ಯೂಟರ್ ನಿರ್ವಾಹಕಿ ಪೂರ್ಣಿಮ ಮುತ್ತಪ್ಪ, ಡಿ.ಟಿ. ರಾಜು ಇಲಾಖಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣು ಗೋಪಾಲ್ ಸ್ವಾಗತಿಸಿ, ವಂದಿಸಿದರು.