ಶ್ರೀಮಂಗಲ, ಸೆ. 9: ಎರಡು ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಒಂದರ ಚಾಲಕ ಸ್ಥಳದಲ್ಲೇ ಮೃತ್ಯುವಿಗೀಡಾಗಿದ್ದು, ಮತ್ತೋರ್ವ ಚಾಲಕ ಗಾಯಗೊಂಡು ಆಸ್ಪತ್ರೆ ಸೇರಿದ ದುರ್ಘಟನೆ ಇಂದು ಮಧ್ಯಾಹ್ನ ಹುದಿಕೇರಿ ಬಳಿ ಸಂಭವಿಸಿದೆ. ತಾವಳಗೇರಿ ಗ್ರಾಮದ ನಿವಾಸಿ ಕೈಬುಲೀರ ಮಂಜುನಾಥ (ಸುಧಿ-52) ಎಂಬವರೇ ಮೃತ ದುರ್ದೈವಿ.ತಾವಳಗೇರಿ ಗ್ರಾಮದ ಬೆಳಗಾರ ಮಂಜುನಾಥ ಇಂದು ಪ್ರಕರಣವೊಂದರ ಸಂಬಂಧ ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರಾಗಿ ಮನೆಗೆ ವಾಪಾಸಾಗುತ್ತಿದ್ದ ವೇಳೆ ಬೆಳ್ಳೂರು ಗ್ರಾಮದ ಬಳಿ ತಾವು ಚಲಿಸುತ್ತಿದ್ದ ಮಾರುತಿ ವ್ಯಾನ್‍ಗೆ (ಕೆಎ12-ಝೆಡ್ 9601) ಎದುರಿನಿಂದ ಬರುತ್ತಿದ್ದ ಬಲೇನೋ ಕಾರು (ಕೆಎ-14 - ಎನ್ 7495) ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಮಂಜುನಾಥ ಅವರ ಎದೆ ಹಾಗೂ ಕೆಳಹೊಟ್ಟೆ ಭಾಗಕ್ಕೆ ಮಾರಣಾಂತಿಕ ಘಾಸಿಯುಂಟಾಗಿ ವ್ಯಾನಿನೊಳಗೆ ಕೊರೆಯುಸಿರೆಳೆದಿದ್ದಾರೆ. ಘಟನೆ ಸಂದರ್ಭ ಎರಡು ವಾಹನಗಳು ನಜ್ಜುಗುಜ್ಜಾಗಿರುವ ದೃಶ್ಯ ಕಂಡುಬಂದಿದ್ದು, ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

ಗಾಯಾಳು ಹೇಳಿಕೆ : ಎದರು ವಾಹನದ ಚಾಲಕ ನಿಖಿಲ್ ಆರ್. ಸಾಲಿಯಾನ್ (22) ಹಾಗೂ ಈತನ ಸಹೋದರ ಸೋನಲ್

(ಮೊದಲ ಪುಟದಿಂದ) ಆರ್. ಸಾಲಿಯಾನ್ ಇಬ್ಬರು ಇಂದು ಮಡಿಕೇರಿಯಿಂದ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಾಲಯಕ್ಕೆ ತೆರಳಿ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ.

ತಾವಿಬ್ಬರು ಬರುತ್ತಿದ್ದ ಮಾರ್ಗದಲ್ಲಿ ಹಠಾತ್ ಗೋಚರಿಸಿದ ಮಾರುತಿ ವ್ಯಾನ್ ಮುಖಾಮುಖಿ ಡಿಕ್ಕಿಯಾಗುತ್ತಿದ್ದಂತೆ ತಪ್ಪಿಸಲಾರದೆ ತೀವ್ರ ಆಘಾತ ಉಂಟಾಯಿತೆಂದು ಗಾಯಾಳು ತಿಳಿಸಿದ್ದು, ಈತನ ಎಡಭಾಗದ ಎದೆ, ಭುಜ ಹಾಗೂ ಎಡಗಾಲಿಗೆ ಮತ್ತು ತುಟಿಗೆ ಪೆಟ್ಟಾಗಿದೆ. ಸೋನಾಲ್ ಸಣ್ಣ ಪುಟ್ಟ ಗಾಯದೊಂದಿಗೆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಲ್ಲದೆ ಬೇರೋಬ್ಬರ ಸಹಾಯದಿಂದ ಕೂಡಲೇ ಗೋಣಿಕೊಪ್ಪಲು ಆಸ್ಪತ್ರೆಗೆ ಬಂದು ಪ್ರಥಮ ಚಿಕಿತ್ಸೆ ಬಳಿಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ನಿಖಿಲ್ ಸಾಲಿಯಾನ್ ದಾಖಲಾಗಿದ್ದಾರೆ. ಗಾಯಾಳು ಸಹೋದರ ಮೂಲತಃ ಅರೆಕಾಡು ನಿವಾಸಿ ಹಾಗೂ ನಗರಸಭೆ ಉದ್ಯೋಗಿ ಹರಿಣಿ ರಮೇಶ ಸಾಲಿಯಾನ್ ಅವರ ಪುತ್ರರಾಗಿದ್ದು, ಮಡಿಕೇರಿ ದಾಸವಾಳ ನಿವಾಸಿಗಳಾಗಿದ್ದಾರೆ. ಮಡಿಕೇರಿ ಪೊಲೀಸರು ಗಾಯಾಳುಗಳ ಹೇಳಿಕೆ ಪಡೆದುಕೊಂಡಿದ್ದಾರೆ.

ಪ್ರತ್ಯಕ್ಷದರ್ಶಿಯಿಂದ ದೂರು : ಇಂದು ಈ ಅಪಘಾತ ಸಂಭವಿಸಿದ ವೇಳೆ ದುರ್ದೈವಿ ಮಂಜುನಾಥ್ ಚಾಲಿಸುತ್ತಿದ್ದ ವಾಹನದ ಹಿಂದುಗಡೆ ತಮ್ಮದೇ ಕಾರಿನಲ್ಲಿ ತೆರಳುತ್ತಿದ್ದ ಚಿಂಡಮಡ ಕೆ. ನಾಚಪ್ಪ ಎಂಬವರು ಈ ಬಗ್ಗೆ ಶ್ರೀಮಂಗಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಆ ಮೇರೆಗೆ ಪ್ರತ್ಯಕ್ಷದರ್ಶಿಯ ಹೇಳಿಕೆ ಪಡೆದುಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ. ಘಟನೆ ನಡೆದ ತಕ್ಷಣ ನಾಚಪ್ಪ ತಮ್ಮ ವಾಹನದಿಂದ ಇಳಿದು ಓಡಿ ಹೋಗಿ ನೋಡುವಷ್ಟರಲ್ಲಿ ಮಂಜುನಾಥ್ ಅವರ ಬಲಗಾಲು ಮುರಿದು ತೀವ್ರ ಆಘಾತದಿಂದ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲವೆಂದೂ, ಕೂಡಲೇ ಕುಟ್ಟ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ಕೊನೆಯುಸಿರೆಳೆದಿದ್ದರೆಂದೂ ಪುಕಾರು ನೀಡಿದ್ದಾರೆ. ಆ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಾರ್ವಜನಿಕರ ಆಕ್ರೋಶ: ಈ ರಸ್ತೆಯಲ್ಲಿ ಪ್ರವಾಸಿಗರು ಹಾಗೂ ಕೇರಳ ರಾಜ್ಯದ ವಾಹನಗಳು ಅತೀ ವೇಗ ಹಾಗೂ ಅಜಾಗÀರೂಕತೆಯಿಂದ ಸಂಚರಿಸುತ್ತಿವೆ. ರಸ್ತೆ ಬದಿಯಲ್ಲಿ ಕಾಡು ಕಡಿಯದೆ ತಿರುವಿನಲ್ಲಿ ಎದುರಿನಿಂದ ಬರುವ ವಾಹನಗಳು ಗೋಚರಿಸುತ್ತಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಲೋಕೊಪಯೋಗಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಶ್ರೀಮಂಗಲ ನಾಗರಿಕ ಹೋರಾಟ ಸಮೀತಿಯ ಅಧ್ಯಕ್ಷ ಎಂ.ಟಿ. ಕಾರ್ಯಪ್ಪ ಆಗ್ರಹಿಸಿದ್ದಾರೆ.

-ಹರೀಶ್ ಮಾದಪ್ಪ