ಸೋಮವಾರಪೇಟೆ, ಸೆ. 10: ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಮಾತಿದೆ. ಸಾರ್ವಜನಿಕ ಸೇವೆಗಾಗಿಯೇ ಸರ್ಕಾರವೂ ರಚಿತವಾಗಿದೆ. ಇದರ ಭಾಗವಾಗಿರುವ ಅಧಿಕಾರಿಗಳು ದೇವರ ಕೆಲಸವನ್ನು ಎಷ್ಟರ ಮಟ್ಟಿಗೆ ಮಾಡುತ್ತಾರೆ ಎಂಬದಕ್ಕೆ ಈ ಘಟನೆ ಸಾಕ್ಷಿಯಾಗಬಹುದು!ಹೌದು, 1980ರ ದಶಕದಲ್ಲಿ ಸರ್ಕಾರ ಮಂಜೂರು ಮಾಡಿದ ಜಾಗಕ್ಕೆ ಇದುವರೆಗೂ ಆರ್‍ಟಿಸಿ ನೀಡಿಲ್ಲ. ನಮ್ಮ ಜಾಗಕ್ಕೆ ಆರ್‍ಟಿಸಿ ನೀಡಿ ಎಂದು ಕಳೆದ ನಾಲ್ಕು ತಿಂಗಳಿನಿಂದ ಸೋಮವಾರಪೇಟೆ ತಾಲೂಕು ಕಚೇರಿಗೆ ಅಲೆದರೂ ಯಾವದೇ ಪ್ರಯೋಜನವಿಲ್ಲ. ಈ ಹಿನ್ನೆಲೆ ಅಂಗವಿಕಲರೋರ್ವರು ಕುಟುಂಬ ಸಮೇತರಾಗಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ತಾಲೂಕಿನ ಶನಿವಾರಸಂತೆ ಸಮೀಪದ ಮೆಣಸ ಗ್ರಾಮದ ನಿವಾಸಿ ಪರಿಶಿಷ್ಟ ಜಾತಿಗೆ ಸೇರಿದ ಎಂ.ಡಿ.ದಾಳಿ ಅವರಿಗೆ ಈ ಹಿಂದೆ 1979-80ನೇ ಸಾಲಿನಲ್ಲಿ ಸರ್ಕಾರ 5 ಎಕರೆ ಜಾಗವನ್ನು ಮಂಜೂರು ಮಾಡಿದೆ. ಈ ಜಾಗಕ್ಕೆ ಸಾಗುವಳಿ ಚೀಟಿಯನ್ನೂ ನೀಡಿದ್ದು, ಅವರ ಹೆಸರಿಗೆ ಎಂ.ಸಿ. ಹಾಗೂ ಜಮಾಬಂದಿ ದಾಖಲಾಗಿದೆ. ಅದರಂತೆ ಆರ್‍ಟಿಸಿಯಲ್ಲಿ ದಾಖಲು ಮಾಡುವಂತೆ ಕಳೆದ ನಾಲ್ಕು ತಿಂಗಳಿನಿಂದ ಸೋಮವಾರಪೇಟೆ ತಾಲೂಕು ಕಚೇರಿಗೆ ಅಲೆದರೂ ಯಾವದೇ ಪ್ರಯೋಜನವಾಗಿಲ್ಲ.

ಇದರಿಂದ ಬೇಸತ್ತ ದಾಳಿ ಅವರು, ತಾ. 11 ರಂದು ತಾಲೂಕು ಕಚೇರಿಯ ಎದುರು ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದು, ಸಾಯುವದರೊಳಗೆ ಆರ್‍ಟಿಸಿ ಪಡೆದೇ ತೀರುತ್ತೇನೆ ಎಂದು ಸಂಕಲ್ಪ ಕೈಗೊಂಡಿದ್ದಾರೆ. ಈ ವಿಷಯವನ್ನು ಪತ್ರಿಕಾ ಪ್ರಕಟಣೆಯಲ್ಲಿ ಸ್ವತಃ ದಾಳಿಯವರೇ ತಿಳಿಸಿದ್ದಾರೆ.

ಆರ್‍ಟಿಸಿ ವಿಳಂಬದ ಬಗ್ಗೆ ತಹಶೀಲ್ದಾರ್ ವಿರುದ್ಧ ಈಗಾಗಲೇ ಕಂದಾಯ ಸಚಿವರಿಗೆ ದೂರು ನೀಡಿದ್ದು, ಕೂಡಲೆ ಆರ್‍ಟಿಸಿ ನೀಡುವಂತೆ ಸಚಿವರು ಲಿಖಿತ ಆದೇಶ ನೀಡಿದ್ದಾರೆ. ಶಾಸಕರು, ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ. ಉಪ ವಿಭಾಗಾಧಿಕಾರಿಗಳೂ ಸಹ ಆರ್‍ಟಿಸಿ ನೀಡುವಂತೆ ಸೂಚಿಸಿದ್ದಾರೆ. ಈ ಬಗ್ಗೆ ತಹಶೀಲ್ದಾರ್‍ರನ್ನು ವಿಚಾರಿಸಿದರೆ ಮೂಲ ದಾಖಲಾತಿಗಳು ಕಳೆದು ಹೋಗಿದೆ ಎಂದು ಉಡಾಫೆಯ ಉತ್ತರ ನೀಡುತ್ತಾರೆ ಎಂದು ಆರೋಪಿಸಿರುವ ದಾಳಿ ಅವರು, ನ್ಯಾಯ ದೊರಕುವವರೆಗೆ ಕುಟುಂಬ ಸಹಿತರಾಗಿ ತಾಲೂಕು ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ತಹಶೀಲ್ದಾರ್‍ರೋರ್ವರು ಸ್ಥಳ ಪರಿಶೀಲನೆ ಮಾಡಲೆಂದೇ 5 ಸಾವಿರ ರೂಪಾಯಿ ಲಂಚವನ್ನೂ ಪಡೆದಿದ್ದಾರೆ. ಹಣ ಪಡೆದ ಮೇಲೆಯೂ ಸ್ಥಳ ಪರಿಶೀಲನೆ ಮಾಡಿಲ್ಲ.

ಬಡವರ ಮೇಲೆ ಅಧಿಕಾರಿಗಳ ಪ್ರೀತಿ ಎಷ್ಟಿದೆ ಎಂಬದು ಇದರಿಂದಲೇ ತಿಳಿಯುತ್ತದೆ ಎಂದು ದಾಳಿ ಅವರ ಮಗ ಹರೀಶ್ ದೂರಿದ್ದು, ನ್ಯಾಯ ದೊರಕುವವರೆಗೂ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ.