ಕುಶಾಲನಗರ, ಸೆ. 10: ವಿಶ್ವ ಹಿಂದು ಪರಿಷತ್, ಭಜರಂಗದಳ ಮತ್ತು ಕಾವೇರಿ ಕಲಾ ಪರಿಷತ್ ಹಾಗೂ ಶ್ರೀ ಜನ್ಮಾಷ್ಟಮಿ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಅಂಗವಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳಿಗೆ ಏರ್ಪಡಿಸಿದ್ದ ಕೃಷ್ಣ ಮತ್ತು ರಾಧೆ ವೇಷ ಸ್ಪರ್ಧೆಯಲ್ಲಿ ಪುಟಾಣಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಪುರುಷರಿಗೆ ಕಬಡ್ಡಿ, ಹಗ್ಗ ಜಗ್ಗಾಟ, ಕಣ್ಣಿಗೆ ಬಟ್ಟೆ ಕಟ್ಟಿ ಮೊಸರು ಕುಡಿಕೆ ಒಡೆಯುವ ಸ್ಪರ್ಧೆಗಳು ನೆರೆದಿದ್ದ ಜನರಿಗೆ ಮನೋರಂಜನೆ ನೀಡಿತು. ಮಹಿಳೆಯರಿಗೆ ಹಗ್ಗಜಗ್ಗಾಟ, ಶಾಲಾ ಮಕ್ಕಳಿಗೆ ಕಬಡ್ಡಿ ಪಂದ್ಯಾವಳಿಯನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ಕಾವೇರಿ ಕಲಾ ಪರಿಷತ್ ಅಧ್ಯಕ್ಷ ಕೆ.ಜೆ.ಸತೀಶ್ ಉದ್ಘಾಟಿಸಿದರು. ಭಜರಂಗ ದಳದ ತಾಲ್ಲೂಕು ಅಧ್ಯಕ್ಷ ಪ್ರಕಾಶ್, ಗೋರಕ್ಷಾ ಸಮಿತಿ ಅಧ್ಯಕ್ಷ ಅನಿಷ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಕೆ,ಎಸ್. ರಾಜಶೇಖರ್, ಕಲಾ ಪರಿಷತ್ ಕಾರ್ಯದರ್ಶೀ ಆಶಾಅಶೋಕ್, ನಿರ್ದೇಶಕರಾದ ಅಮೃತ್ ರಾಜ್, ಬಿ.ಜನಾರ್ಧನ್, ಇಂದಿರಾತಿಮ್ಮಪ್ಪ, ಉಮಾಪ್ರಭಾಕರ್, ವ್ಯವಸ್ಥಾಪಕಿ ಯಶೋಧ ಮತ್ತಿತರರು ಉಪಸ್ಥಿತರಿದ್ದರು.