ಮಡಿಕೇರಿ, ಸೆ. 10: ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಇತ್ತೀಚೆಗೆ ಮಡಿಕೇರಿಯ ಹೊಟೇಲ್ ಕೂರ್ಗ್ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ರಾಜ್ಯಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.ಕಾರ್ಯಕ್ರಮದ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ನೆರವೇರಿಸಿ, ಮಾತನಾಡಿ, ಜಿಲ್ಲೆಯ ಸಹಕಾರ ಸಂಘಗಳ ಅಧ್ಯಕ್ಷರುಗಳಿಗೆ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ತರಬೇತಿ ನಡೆಸುತ್ತಿರುವದು ಸಂತೋಷದ ವಿಷಯ. ಪ್ರಧಾನಮಂತ್ರಿ ನರೇಂದ್ರ ಮೋದಿ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆಯಿಂದ ದೇಶದಲ್ಲೇ ಏಕರೂಪದ ತೆರಿಗೆ ಕಾನೂನನ್ನು ತಂದಿರುವದು ಒಳ್ಳೆಯ ಬೆಳವಣಿಗೆ. ಜಿ.ಎಸ್.ಟಿ.ಯನ್ನು ಸಹಕಾರ ಸಂಘಗಳಲ್ಲಿ ಅಳವಡಿಸಿಕೊಂಡು ಈ ವ್ಯವಸ್ಥೆಗೆ ಎಲ್ಲರೂ ಕೈ ಜೋಡಿಸಿ ದೇಶದ ಪ್ರಗತಿಯನ್ನು ಕಾಣೋಣ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಮಾತನಾಡಿ, ಜಿ.ಎಸ್.ಟಿ.ಯಿಂದ ದೇಶದಲ್ಲೇ ದೊಡ್ಡ ಬದಲಾವಣೆ ಆಗುತ್ತಿದ್ದು ಇದು ಸಹಕಾರ ಕ್ಷೇತ್ರಕ್ಕೂ ಬಿಸಿ ತಟ್ಟಿದೆ, ಇದಕ್ಕೆ ಅನೇಕ ಟೀಕೆ-ಟಿಪ್ಪಣಿ ಇದ್ದರೂ ಈ ವ್ಯವಸ್ಥೆಗೆ ಎಲ್ಲರೂ ಹೊಂದಿಕೊಂಡು ಹೋಗಬೇಕಾಗುತ್ತದೆ ಎಂದರು.

ಮತ್ತೋರ್ವ ಮುಖ್ಯ ಅತಿಥಿ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಬಾಂಡ್ ಗಣಪತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಎ.ಕೆ. ಮನು ಮುತ್ತಪ್ಪ ಮಾತನಾಡಿದರು.