ಸುಂಟಿಕೊಪ್ಪ, ಸೆ. 10: ಶ್ರದ್ಧೆ, ಕಠಿಣ ಅಧ್ಯಯನದಿಂದ ಉನ್ನತ ಶಿಕ್ಷಣ ಪಡೆದು ರಾಜಕೀಯವಾಗಿ ಹಾಗೂ ಸರಕಾರಿ ಆಯಕಟ್ಟಿನ ಹುದ್ದೆ ಪಡೆದು ದೇಶದ ಅಭಿವೃದ್ಧಿಗೆ ಕೆಳವರ್ಗದ ಯುವ ಜನಾಂಗ ಕೈಜೋಡಿಸಬೇಕು ಎಂದು ಸೋಮವಾರಪೇಟೆ ಸಿವಿಲ್ ಹಿರಿಯ ನ್ಯಾಯಾಲಯದ ನ್ಯಾಯಧೀಶ ಶ್ಯಾಮ್ ಪ್ರಕಾಶ್ ಹೇಳಿದರು.

ಮಾದಾಪುರದಲ್ಲಿ ಆದಿದ್ರಾವಿಡ ಸಮಾಜ ಸೇವಾ ಸಂಘದ ಕಚೇರಿ ಉದ್ಘಾಟಿಸಿದ ನಂತರ ಮಾದಾಪುರ ವಿಎಸ್‍ಎಸ್‍ಎನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದರು. ಡಾ. ಅಂಬೇಡ್ಕರ್ ಜ್ಞಾನದ ಭಂಡಾರವಾಗಿದ್ದರು. ಆಸ್ಪøಶ್ಯತೆ ದೇಶದಲ್ಲಿ ತಾಂಡವ ವಾಡುತ್ತಿರುವ ಸಂದರ್ಭದಲ್ಲಿ ಶಾಲೆಯ ಒಂದು ಮೂಲೆಯಲ್ಲಿ ಕುಳಿತು ಶಿಕ್ಷಣ ಪಡೆದು ಎಲ್ಲಾ ವರ್ಗದವರಿಗೂ ಒಪ್ಪಿಗೆ ಯಾಗುವ ಸಾಮಾಜಿಕ ನ್ಯಾಯದ ಸಂವಿಧಾನ ರಚಿಸಿದ್ದ ಧೀಮಂತ ವ್ಯಕ್ತಿಯಾಗಿದ್ದಾರೆ. ದುರ್ಬಲ ವರ್ಗವರ ಮಕ್ಕಳು ಉನ್ನತ ಹುದ್ದೆ ಪಡೆದರೆ ಮಾತ್ರ ಐಎಎಸ್, ಐಪಿಎಸ್ ಹುದ್ದೆ ಪಡೆದುಕೊಂಡು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳ ಬಹುದು. ಯುವ ಜನಾಂಗ ದುಶ್ಚಟಗಳಿಂದ ದೂರವಾಗಿ ಒಳ್ಳೆಯ ಆಹಾರವನ್ನು ಸೇವಿಸುವ ಮೂಲಕ ಶಿಸ್ತು ಪ್ರಾಮಾಣಿಕತೆಯಿಂದ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ತುಳಿತಕ್ಕೆ ಒಳಗಾದವರನ್ನು ಮೇಲೆತ್ತುವ ಜವಾಬ್ದಾರಿ ಸರಕಾರದ್ದಾಗಿವೆ. ಸಂವಿಧಾನದಲ್ಲಿ ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ನ್ಯಾಯ ಸಿಗಬೇಕಾಗಿದೆ. ಶಿಕ್ಷಣ, ಸಂಘಟನೆ, ಹೋರಾಟ ಎಂಬ ಧ್ಯೇಯ ಡಾ. ಅಂಬೇಡ್ಕರ್‍ದಾಗಿತ್ತು. ಯುವ ಜನಾಂಗ ಓದುವ ಅಭ್ಯಾಸ ಕಡಿಮೆ ಮಾಡಿದ್ದು ನೋಡುವ ಅಭ್ಯಾಸ ಬೆಳಸಿಕೊಂಡಿದೆ. ಮೊಬೈಲ್‍ನಿಂದ ಬುದ್ಧಿ ಬೆಳವಣಿಗೆಗೆ ಜ್ಞಾನ ವೃದ್ಧಿಯಾಗುವದಿಲ್ಲ ಓದಿನಿಂದ ಮಾತ್ರ ಜೀವನದಲ್ಲಿ ಮುಂದೆ ಬರಬಹುದು. ತಾಯಿಯಂದಿರು ಮಕ್ಕಳಿಗೆ ಮೊಬೈಲ್ ಬಳಕೆ ಬಗ್ಗೆ ಎಚ್ಚರ ನೀಡುತ್ತಾ ವಿದ್ಯೆ ಕಡೆ ಹೆಚ್ಚಿನ ಗಮನ ಹರಿಸಲು ಮುಂದಾಗಬೇಕೆಂದ ಅವರು, ಸಂಘದ ಕಚೇರಿಯಲ್ಲಿ ಗ್ರಂಥಾಲಯ ಸ್ಥಾಪಿಸಿದರೆ ಸಂವಿಧಾನ ಸೇರಿದಂತೆ ಉಪಯುಕ್ತವಾದ ಪುಸ್ತಕಗಳನ್ನು ಖರೀದಿಸಿ ಕೊಡುವದಾಗಿ ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ತಾ.ಪಂ. ಉಪಾಧ್ಯಕ್ಷರೂ, ಸೋಮವಾಪೇಟೆ ವಕೀಲರ ಸಂಘದ ಅಧ್ಯಕ್ಷ ಎಂ.ಬಿ. ಅಭಿಮನ್ಯು ಕುಮಾರ್ ಮಾತನಾಡಿ, ಸಮಾಜದ ಎಲ್ಲಾ ವರ್ಗದವರು ಅಭಿವೃದ್ಧಿಯಾದರೆ ದೇಶ ಉದ್ಧಾರವಾದೀತು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ನ್ಯಾಯ ಕಲ್ಪಿಸಿದರೂ ಶೋಷಿತ ವರ್ಗದವರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲೆ ದೌರ್ಜನ್ಯ, ಕ್ರಿಮಿನಲ್ ಚಟುವಟಿಕೆ ನಡೆಯುತ್ತಲೇ ಇರುವದು ವಿಷಾದನೀಯ ಎಂದರು.

ರಾಜ್ಯ ಪತರ್ರಕರ್ತರ ಸಂಘದ ನಿರ್ದೇಶಕ ಎಸ್.ಎ. ಮುರುಳೀಧರ, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕವನ್ ಕಾರ್ಯಪ್ಪ, ದಕ್ಷಿಣ ಕನ್ನಡ ಆದಿದ್ರಾವಿಡ ಸಮಾಜದ ಅಧ್ಯಕ್ಷ ಮೋಹನ್ ನೆಲ್ಲಿ ಗುಂಡಿ, ಕೊಡಗು ಜಿಲ್ಲಾ ಆದಿದ್ರಾವಿಡ ಸಂಘದ ಗೌರವ ಅಧ್ಯಕ್ಷ ಪಿ.ಬಿ. ಬಾಬು, ಜಿಲ್ಲಾ ಅಧ್ಯಕ್ಷ ಹೆಚ್.ಎಸ್. ಸೋಮಪ್ಪ ಮಾತನಾಡಿದರು.

ಮಾದಾಪುರದ ಸಿದ್ಧಿಬುದ್ಧಿ ಗಣಪತಿ ದೇವಾಲಯದಿಂದ ವಾದ್ಯಗೋಷ್ಠಿಯೊಂದಿಗೆ ಕಲಶ ಹೊತ್ತ ಮಹಿಳೆಯರೊಂದಿಗೆ ಆದಿದ್ರಾವಿಡ ಸಂಘದ ಕಾರ್ಯಕರ್ತರು ಮೆರವಣಿಗೆಯಲ್ಲಿ ತೆರಳಿ ಸಂಘದ ಕಚೇರಿಯನ್ನು ಉದ್ಘಾಟಿಸಿದರು.