ಕುಶಾಲನಗರ, ಸೆ. 10: ತಾ. 12 ರಿಂದ 23 ರವರೆಗೆ ಜೀವನದಿ ಕಾವೇರಿಯಲ್ಲಿ ಪುಷ್ಕರ ಸ್ನಾನಾಚರಣೆ ಮತ್ತು ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿದ್ದು ತಲಕಾವೇರಿಯಿಂದ ಪೂಂಪ್‍ಹಾರ್ ತನಕ ಸಾಧುಸಂತರು, ಭಕ್ತಾದಿಗಳು ಸೇರಿದಂತೆ ಲಕ್ಷಾಂತರ ಜನರು 12 ದಿನಗಳ ಕಾಲ ನದಿ ದಂಡೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

12 ವರ್ಷಗಳಿಗೆ 1 ಸಾರಿ ಬರುವ ಕಾವೇರಿ ಮಹಾ ಪುಷ್ಕರದ ಹಿನ್ನೆಲೆಯಲ್ಲಿ ತಾ. 11 ರಂದು ಬೆಳಿಗ್ಗೆ ತಲಕಾವೇರಿಯಿಂದ ಕಲಶÀಗಳಲ್ಲಿ ತೀರ್ಥ ತುಂಬಿ ಎರಡೂ ರಾಜ್ಯಗಳ ವಿವಿಧ ಕ್ಷೇತ್ರಗಳಲ್ಲಿ ಪೂಜೆ ಪುನಸ್ಕಾರಗಳೊಂದಿಗೆ ಕಾವೇರಿ ಮಹಾ ಪುಷ್ಕರಕ್ಕೆ ಚಾಲನೆ ದೊರೆಯಲಿದೆ. ಗುರುಗ್ರಹವು ತುಲಾ ರಾಶಿಗೆ ಪ್ರವೇಶ ಮಾಡಿದಾಗ ಕಾವೇರಿ ನದಿಗೆ ಸಕಲ ನದಿಗಳ ತೀರ್ಥಗಳ ಸಂಗಮವಾಗುವ ಪ್ರತೀತಿಯೊಂದಿಗೆ ಈ ಪರ್ವ ಕಾಲದಲ್ಲಿ ಭಕ್ತಾದಿಗಳು ಸಂಕಲ್ಪ ಸಹಿತ ಸ್ನಾನ ಮಾಡುವದರೊಂದಿಗೆ ಸಕಲ ದೋಷಗಳು ನಿವಾರಣೆಯಾಗಿ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಕಾವೇರಿ ನದಿ ಸ್ವಚ್ಚತಾ ಅಭಿಯಾನದ ಸಂಯೋಜಕರಾಗಿರುವ ವೇ.ಬ್ರ.ಡಾ. ಭಾನುಪ್ರಕಾಶ್ ಶರ್ಮ ತಿಳಿಸಿದ್ದಾರೆ.

ಜಿಲ್ಲೆಯ ಭಾಗಮಂಡಲ ಸಂಗಮ ಕ್ಷೇತ್ರ ಸೇರಿದಂತೆ ರಾಮನಾಥಪುರ, ಶ್ರೀರಂಗಪಟ್ಟಣ, ಟಿ.ನರಸಿಪುರ ಮುಂತಾದೆಡೆಗಳಲ್ಲಿ 12 ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದಕ್ಷಿಣ ಭಾರತದ ಸಾವಿರಾರು ಸಂಖ್ಯೆಯ ಸಾಧುಗಳು ಸೇರಿದಂತೆ ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಾನುಪ್ರಕಾಶ್ ಶರ್ಮ ಮಾಹಿತಿ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ 12 ದಿನಗಳ ಕಾಲ ಕಾರ್ಯಕ್ರಮಗಳು ಜರುಗಲಿವೆ. ನೂರಾರು ಸಾಧು ಸಂತರು ಸಾವಿರಾರು ಸಂಖ್ಯೆಯ ಭಕ್ತಾದಿಗಳು ಈ ಸಂದರ್ಭ ಪುಷ್ಕರದಲ್ಲಿ ಸ್ನಾನಾಚರಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ರಾಮನಾಥಪುರ ಕ್ಷೇತ್ರದಲ್ಲಿ ಬೆಂಗಳೂರಿನ ಆಚಾರ್ಯ ಶ್ರೀ ಗುರುಪ್ರಕಾಶ್ ಗುರೂಜಿಯವರ ನೇತೃತ್ವದಲ್ಲಿ 12 ದಿನಗಳ ಕಾಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಸಂದರ್ಭ ತಮಿಳುನಾಡು ಪ್ರಾಂತದ ನದಿ ತಟದ ಎಲ್ಲಾ ಜಿಲ್ಲೆಗಳಲ್ಲಿ ಪೂಜಾ ಕಾರ್ಯಕ್ರಮಗಳು ಪುಷ್ಕರ ಸ್ನಾನಾದಿ ಕಾರ್ಯಕ್ರಮಗಳು ಜರುಗಲಿವೆ. 12 ರಂದು ನದಿ ಸಮುದ್ರ ಸಂಗಮವಾಗುವ ಪೂಂಪ್‍ಹಾರ್ ಬಳಿಯ ಮೈಲಾಡುದುರೈಯಲ್ಲಿ ಸಾವಿರಾರು ಸಂಖ್ಯೆಯ ಸಾಧುಸಂತರ ಸಂಗಮದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಅಲ್ಲಿನ ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು ಕಾವೇರಿ ಮಹಾ ಪುಷ್ಕರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಕಾವೇರಿ ನದಿ ಸ್ವಚ್ಚತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.

ಈ ತಿಂಗಳ 21 ರಂದು ವಿಶೇಷ ಮಹಾ ಆರತಿಯೊಂದಿಗೆ ಭಾಗಮಂಡಲದ ಸಂಗಮದಲ್ಲಿ ಕಾವೇರಿ ಪುಷ್ಕರ ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸಿದ್ದಾರೆ.

ಪುಷ್ಕರ ಕಾಲದಲ್ಲಿ 12 ರಾಶಿಗಳಲ್ಲಿ ಗುರು ಯಾವ ದಿನ ಪ್ರವೇಶ ಮಾಡುತ್ತಾನೋ ಆ ದಿನದಿಂದ 12 ದಿನಗಳನ್ನು ಮಹಾಪರ್ವ ಕಾಲ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 12 ರಿಂದ 23 ರ ತನಕ ಕಾವೇರಿ ಮಹಾಪುಷ್ಕರ ಜರುಗಲಿದೆ. ಈ ಪುಷ್ಕರ ಪರ್ವ ಕಾಲದಲ್ಲಿ ದೇವಾನುದೇವತೆಗಳು, ಸಪ್ತಋಷಿಗಳು ನದಿಯಲ್ಲಿ ಸ್ನಾನ ಮಾಡಲು ಕುಂಭ ಮೇಳ ಮತ್ತು ಪುಷ್ಕರ ದಿನಗಳಲ್ಲಿ ಭೂಮಿಗೆ ಬರುತ್ತಾರೆ ಎನ್ನುವ ಪ್ರತೀತಿಯಿದೆ. ಪುಷ್ಕರ ಸಂದರ್ಭ 64 ಕೋಟಿ ತೀರ್ಥಗಳು ಭೂಲೋಕಕ್ಕೆ ಬಂದು ಸೃಷ್ಟಿಯಾಗಿರುವ ಎಲ್ಲಾ ಜೀವಿಗಳನ್ನು, ಮನುಷ್ಯರನ್ನು ಪವಿತ್ರಗೊಳಿಸುತ್ತದೆ ಎನ್ನುವ ನಂಬಿಕೆಯಿದೆ. ಪ್ರತಿಯೊಬ್ಬ ಋಷಿಮುನಿಗಳು ಲೋಕ ಕಲ್ಯಾಣಕ್ಕಾಗಿ ಮಹಾ ಸಂಕಲ್ಪ ಮಾಡಿ ನದಿಯಲ್ಲಿ ಸ್ನಾನ ಮಾಡಿ ತಮ್ಮ ತಪಸ್ಸನ್ನು ವಿಸರ್ಜಿಸುತ್ತಾರೆ. ಸಾಧುಸಂತರು, ಗುರುಗಳು ಸ್ನಾನ ಮಾಡಿದ ನಂತರ ದೇವತೆಗಳನ್ನು ಕುಂಭದಲ್ಲಿ ಆವಾಹನೆ ಮಾಡಿ ಕಲಶಗಳನ್ನು ನೀರಿನಲ್ಲಿ ಸ್ನಾನ ಮಾಡಿಸುತ್ತಾರೆ. ನಂತರ ಭಕ್ತಾದಿಗಳು ನದಿಯಲ್ಲಿ ಸ್ನಾನ ಮಾಡಿ ಗುರುಗಳಿಗೆ ನಮಸ್ಕರಿಸುವ ಮೂಲಕ ಸ್ನಾನಾಚರಣೆಯಲ್ಲಿ ತೊಡಗಿಸಿಕೊಳ್ಳುವದು ಪುಷ್ಕರದ ಪದ್ಧತಿಯಾಗಿದೆ.