ಸುಂಟಿಕೊಪ್ಪ,s ಸೆ.10: ಮೂಲ ಭೂತ ಸೌಲಭ್ಯಗಳಿಂದ ವಂಚಿತವಾದ ಗ್ರಾಮದ ಸ್ಥಿತಿಗೆ ಓಟ್ ಬ್ಯಾಂಕ್ ರಾಜಕೀಯ ಕೈಗನ್ನಡಿಯಂತಿದೆ.

ಐಗೂರು ಗ್ರಾ.ಪಂ.ಯ ಕಾಜೂರು ದುರ್ಗಾ ಪರಮೇಶ್ವರಿ ಎಸ್ಟೇಟ್‍ಗೆ ತೆರಳುವ ಪೈಸಾರಿ ಜಾಗದಲ್ಲಿ ಕಳೆದ 25 ವರ್ಷಗಳಿಂದ 18 ಕುಟುಂಬಸ್ಥರು ಸಣ್ಣಮನೆ ನಿರ್ಮಿಸಿಕೊಂಡು ಕೂಲಿನಾಲಿ ಮಾಡಿ ಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಆಗ ಕೊಥಾರಿ ಕಂಪನಿಯ ಜನರಲ್ ಮೆನೇಜರ್ ಆಗಿದ್ದ ರಾಮಸ್ವಾಮಿ ಹೆಗಡೆ ಅವರು ದುರ್ಗಾ ಪರಮೇಶ್ವರಿ ಎಸ್ಟೇಟ್‍ನಲ್ಲಿ ತೊಡಗಿಸಿಕೊಂಡಿದ್ದಾಗ ಕಲ್ಲು ಮಣ್ಣಿನ ರಸ್ತೆ ನಿಮಿಸಲಾಗಿತ್ತು. ಆದರೆ ಇದೀಗ ಈ ರಸ್ತೆ ಸಂಪೂರ್ಣ ಹಾಳಾಗಿದ್ದು ಶಾಲಾ ಮಕ್ಕಳು, ಸಾರ್ವಜನಿಕರು ನಡೆದಾಡಲು ಆಗದೆ ವಾಹನ ಸಂಚಾರಕ್ಕೆ ಆಯೋಗ್ಯವಾಗಿದೆ.

ಮೊದಲೇ ಕಾಡಾನೆಗಳ ಹಾವಳಿ, ದುರ್ಗಮ ಹಾದಿಯಲ್ಲಿ ಕೂಲಿನಾಲಿ ಮಾಡಿ ಜೀವಿಸುವ ಕಾರ್ಮಿಕರು ಹಾಗೂ ಶಾಲೆ ಮಕ್ಕಳು ಪರದಾಡುವ ಪರಿಸ್ಥಿತಿ ಬಂದಿದೆ. ರಾತ್ರಿ ಈ ರಸ್ತೆಯಲ್ಲಿ ನಡೆದಾಡಲು ಕಷ್ಟ ಸಾಧ್ಯವಾಗಿದೆ.

ಮತ್ತೊಂದೆಡೆ ಐಗೂರು ಗ್ರಾ.ಪಂ.ಯ ಯಡವಾರೆ ಗ್ರಾಮಕ್ಕೆ ಸೇರುವ ಕಾಜೂರು ವ್ಯಾಪ್ತಿಯಲ್ಲಿರುವ ಮಾಜಿ ಗ್ರಾ.ಪಂ.ಅಧ್ಯಕ್ಷರ ನಿವಾಸದ ಅನತಿ ದೂರದ 1.5 ಕಿ.ಮಿ. ಕಾಲು ರಸ್ತೆ ತೀರಾ ಹಾಳಾಗಿದ್ದು ಗ್ರಾಮಸ್ಥರಾದ ಬಾಬು, ಶೇಖರ್, ಆಮೆಮನೆ ನಾರಾಯಣಪ್ಪ, ರಾಜು ಹಾಗೂ ವಿಠಲ ಅವರುಗಳು ಲೋಕಾಯುಕ್ತಕ್ಕೆ ದೂರು ನೀಡಿದ ಹಿನ್ನೆಲೆ ಸ್ವಲ್ಪ ಮಟ್ಟಿಗೆ ಪಂಚಾಯಿತಿಯಿಂದ ರಸ್ತೆ ದುರಸ್ಥಿ ಕಾರ್ಯನಿರ್ವಹಿಸಲಾಯಿತು. ಆದರೆ ಇದೀಗ 6 ಕುಟುಂಬಸ್ಥರು ತೀರಾ ಹದಗೆಟ್ಟ ರಸ್ತೆಯಲ್ಲಿ ನಡೆದಾಡಲು ಪಡಿಪಾಟಲು ಪಡುವಂತಾಗಿದೆ.

ಈ ಕುಟುಂಬಸ್ಥರ ಮಕ್ಕಳು ಶಾಲೆಗೆ ತೆರಳಲು ಹಿಂದೇಟು ಹಾಕು ವಂತಾಗಿದೆ. ಇಲ್ಲಿನ ಕುಟುಂಬಸ್ಥರೇ ಕಲ್ಲು ಮಣ್ಣು ತುಂಬುವ ಮೂಲಕ ಗುಂಡಿಗಳನ್ನು ಮುಚ್ಚುವ ಕೆಲಸ ನಿರ್ವಹಿಸಿದ್ದಾರೆ. ಗ್ರಾ.ಪಂ., ತಾ.ಪಂ., ಜಿ.ಪಂ. ಹಾಗೂ ಶಾಸಕರ ನಿಧಿಯಿಂದಲೂ ಇಲ್ಲಿನ ದುರ್ಬಲ ಕುಟುಂಬಸ್ಥರ ರಸ್ತೆಗೆ ಅನುದಾನ ದೊರಕಿಸಲು ವಿಫಲರಾಗಿರುವದು ಕಂಡು ಬಂದಿದೆ.