ಕೂಡಿಗೆ, ಸೆ. 10: ನಾಲ್ಕೈದು ವರ್ಷಗಳಿಂದ ಹೋರಾಟ ನಡೆಸಿದ ಫಲವಾಗಿ ಶೌಚಾಲಯದ ಭಾಗ್ಯವನ್ನು ಕರುಣಿಸಿದ ಸರ್ಕಾರ ಇನ್ನೂ ಕುಡಿಯುವ ನೀರಿಗೆ ಮತ್ತೆಷ್ಟು ವರ್ಷಗಳು ಹೋರಾಡಬೇಕೋ ಎಂಬ ಸಂಕಷ್ಠದಲ್ಲಿದ್ದ ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದರು. ಇಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಕುಶಾಲನಗರ ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಕುಡಿಯುವ ನೀರಿನ ವ್ಯವಸ್ಥೆಯನ್ನು ಕೈಗೊಳ್ಳುವಂತೆ ತೀರ್ಮಾನಿಸಿ ಕಾಲೇಜಿನ ಪ್ರಾಂಶುಪಾಲರು ಮತ್ತು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳ ಜೊತೆ ಚರ್ಚಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಮುಂದೆ ಬಂದರು.

ಪರಿಣಾಮವಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಸುಮಾರು ರೂ. 14,500 ವೆಚ್ಚದಲ್ಲಿ ಆರ್.ಓ. ಸಿಸ್ಟಮ್ ಮೂಲಕ ಕೊಡುಗೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಸಿ.ಎಂ. ಮಹಾಲಿಂಗಯ್ಯ, ಉಪನ್ಯಾಸಕರಾದ ನಾಗಪ್ಪ, ಸತೀಶ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕುಮಾರಸ್ವಾಮಿ, ರೋಟರಿ ಅಧ್ಯಕ್ಷ ಎನ್.ಜಿ. ಪ್ರಕಾಶ್, ಸಮುದಾಯ ಸೇವಾ ನಿರ್ದೇಶಕ ರೊಟೇರಿಯನ್ ರವೀಂದ್ರ ರೈ, ರೊಟೇರಿಯನ್ ಗಂಗಾಧರ್, ರಿಚರ್ಡ್ ಡಿಸೋಜ, ಪ್ರೇಮ್‍ಚಂದ್ರನ್, ಅಶೋಕ್ ಮತ್ತು ಜಾಕಬ್ ಹಾಜರಿದ್ದರು.