ಕುಶಾಲನಗರ, ಸೆ. 10: ಜಿಲ್ಲೆಯ ಕುಶಾಲನಗರದಲ್ಲಿ ಅತಿ ಹೆಚ್ಚು ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿದ್ದು ಎಲ್ಲವೂ ಕೂಡ ಲಾಭದ ಹಾದಿಯಲ್ಲಿ ಸಾಗುತ್ತಿರುವದು ಸಮಾಜದ ಪ್ರಗತಿಯ ಸಂಕೇತವಾಗಿದೆ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾದ ಬಿ.ಡಿ.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರದ ಕಾರು ಮಾಲೀಕರು ಮತ್ತು ಚಾಲಕರ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ಸದಸ್ಯರ ಪಾತ್ರ ಪ್ರಮುಖವಾಗಿದ್ದು ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮೂಲಕ ಸಂಘ ಏಳಿಗೆಗೆ ಶ್ರಮಿಸಬೇಕಿದೆ ಎಂದರು.

ಪಟ್ಟಣದ ಬಾಪೂಜಿ ಬಡಾವಣೆಯಲ್ಲಿ ರೂ 18 ಲಕ್ಷ ವೆಚ್ಚದಲ್ಲಿ ಖರೀದಿಸಿದ ನೂತನ ಕಟ್ಟಡದ ನಾಮಫಲಕವನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಹೆಚ್.ಡಿ.ರವಿಕುಮಾರ್ ಉದ್ಘಾಟಿಸಿದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾದ ಕೆ.ಎಸ್. ರಾಜಶೇಖರ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದರು.

ಸಂಘದ ಅಧ್ಯಕ್ಷರಾದ ಹೆಚ್.ಎನ್.ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾದ ಎಂ.ಎನ್.ಕುಮಾರಪ್ಪ, ಬಲ್ಲಾರಂಡ ಮಣಿ ಉತ್ತಪ್ಪ, ಕುಶಾಲನಗರ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಆರ್.ರವಿಕುಮಾರ್, ಕಾರು ಮಾಲೀಕರು, ಚಾಲಕರ ಸಂಘದ ಮಾಜಿ ಅಧ್ಯಕ್ಷರಾದ ವಿ.ಎ.ನಂಜುಂಡ ಮಾತನಾಡಿದರು.

ಇದೇ ಸಂದರ್ಭ ಸಂಘಡ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷರಾದ ಕೆ.ಎನ್.ಅಶೋಕ್, ನಿರ್ದೇಶಕರುಗಳಾದ ಎಂ.ಎನ್.ಕರುಣ ಕುಮಾರ್, ಬಿ.ಸಿ.ಮಲ್ಲಿಕಾರ್ಜುನ, ಲೀಲಾಧರ ಬಿ.ರೈ, ಬಿ.ಆರ್.ರುಕ್ಮಿಣಿ, ಬಿ.ಸಾವಿತ್ರಿ, ಕೆ.ಎ.ಉದಯಕುಮಾರ್, ಎ.ಯು.ಉಮ್ಮರ್, ಎಲ್.ಸುರೇಶ್ ಇದ್ದರು.