*ಗೋಣಿಕೊಪ್ಪಲು, ಸೆ. 10: ಪತ್ರಕರ್ತೆ ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆಯ ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಎಂದು ಒತ್ತಾಯಿಸಿ ವಿವಿಧ ಪ್ರಗತಿಪರ ಸಂಘಟನೆಗಳ ವತಿಯಿಂದ ಭಾನುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.ಭಾರತೀಯ ಕಮ್ಯುನಿಷ್ಟ್ ಪಕ್ಷ, ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾ, ದಲಿತ ಸಂಘರ್ಷ ಸಮಿತಿ, ಪ್ರಗತಿಪರ ವೇದಿಕೆಗಳ ಕಾರ್ಯಕರ್ತರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

ಭಾರತೀಯ ಕಮ್ಯುನಿಷ್ಟ್ ಪಕ್ಷದ ವಕೀಲ ಸುನಿಲ್ ಮಾತನಾಡಿ ಬಡವರ ಹಾಗೂ ಅಲ್ಪಸಂಖ್ಯಾತರ ಪರವಾಗಿದ್ದ ಗೌರಿ ಲಂಕೇಶ್ ಅವರ ಹತ್ಯೆ ಇಡೀನಾಡಿನ ಪ್ರಗತಿಯ ಹತ್ಯೆಯಾಗಿದೆ ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪರಶುರಾಮ್ ಮಾತನಾಡಿ, ನಾಡಿನ ಜನತೆ ಮೂಲಭೂತವಾದಿಗಳ ಹೀನಕೃತ್ಯದಿಂದ ಆತಂಕಕ್ಕೆ ಒಳಗಾಗಿದ್ದಾರೆ. ಇವರನ್ನು ಕೂಡಲೆ ಬಂಧಿಸುವ ಮೂಲಕ ಜನತೆಯ ಆತಂಕವನ್ನು ದೂರಮಾಡಬೇಕು ಎಂದು ಹೇಳಿದರು.

ಪಿಲಿಫೋಸ್ ಮ್ಯಾಥ್ಯು, ಅಬ್ದುಲ್ ರೆಹಮಾನ್, ತಿತಿಮತಿಯ ದಸಂಸ ಕಾರ್ಯಕರ್ತ ಪರಶುರಾಮ್, ರಮೇಶ್, ಕೆ.ಟಿ. ಬಷೀರ್ ಮಾತನಾಡಿದರು. ಬಳಿಕ ಸಿಪಿಐ ಪಿ.ಕೆ. ರಾಜು ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಶ್ರದ್ಧಾಂಜಲಿ: ಕಾಮತ್ ನವಮಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಧರ್ಮಜ ಉತ್ತಪ್ಪ, ವಿಚಾರವಾದಿಗಳ ಹತ್ಯೆ ಹೇಡಿತನದ ಕೃತ್ಯ ಎಂದರು.

ಡಾ. ಜೆ. ಸೋಮಣ್ಣ ಮಾತನಾಡಿ, ವಿಚಾರವಾದಕ್ಕೆ ಯಾವತ್ತೂ ಸಾವಿಲ್ಲ. ಅದು ಸತ್ಯದ ತಳಹದಿಯ ಮೇಲಿದೆ. ವ್ಯಕ್ತಿಯನ್ನು ಕೊಲ್ಲಬಹುದೇ ಹೊರತು ವಿಚಾರವನ್ನಲ್ಲ ಎಂದರು.

ಎಂ.ಪಿ. ಕೇಶವ ಕಾಮತ್ ಮಾತನಾಡಿ, ಗೌರಿ ಲಂಕೇಶ್ ಹತ್ಯೆ ಪತ್ರಿಕಾಲೋಕದ ಮೇಲೆ ನಡೆದ ಬಹುದೊಡ್ಡ ಕ್ರೌರ್ಯವಾಗಿದೆ ಎಂದು ಖಂಡಿಸಿದರು. ಬಿ.ಎನ್. ಪ್ರಕಾಶ್, ದಸಂಸ ವಿಭಾಗೀಯ ಸಂಚಾಲಕ ಕೃಷ್ಣಪ್ಪ, ಶ್ರೀನಿವಾಸ್ ಹಾಜರಿದ್ದರು.