ಮಡಿಕೇರಿ, ಸೆ. 11: ಐತಿಹಾಸಿಕ ನಾಡಹಬ್ಬ ಮಡಿಕೇರಿ ನಗರ ದಸರಾ ಜನೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಗರ ದಸರಾ ಸಮಿತಿ ಕಾರ್ಯ ಯೋಜನೆ ರೂಪಿಸಿದ್ದು, ಅದರ ಪೂರ್ವಭಾವಿ ಸಿದ್ಧತೆಯಲ್ಲಿ ದಸರಾ ಸಮಿತಿ ಕಾರ್ಯೋನ್ಮುಖವಾಗಿದೆ.ಮಡಿಕೇರಿ ನಗರ ದಸರಾ ಜನೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲು ನಗರ ದಸರಾ ಸಮಿತಿ ರೂ. 2 ಕೋಟಿ ಬಜೆಟನ್ನು ತಯಾರಿಸಿದ್ದು, ಸರ್ಕಾರದ ಅನುದಾನಕ್ಕಾಗಿ ರೂ. 1 ಕೋಟಿ ಮೊತ್ತಕ್ಕೆ ದಸರಾ ಸಮಿತಿ ಬೇಡಿಕೆಯಿಟ್ಟಿದೆ. ಸರ್ಕಾರದ ಅನುದಾನದ ಭರವಸೆ ಹೊಂದಿರುವ ಸಮಿತಿ ದಸರಾ ವೈಭವಕ್ಕೆ ಯಾವದೇ ಅಡಚಣೆಯಾಗದಂತೆ ಆಚರಿಸಲು ಉತ್ಸುಕತೆ ಹೊಂದಿದೆ.

ಕಳೆದ ಸಾಲಿನಲ್ಲಿ ರಾಜ್ಯದಲ್ಲಿ ಬರದ ಛಾಯೆ ಕಂಡುಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇವಲ ರೂ. 40 ಲಕ್ಷ ಅನುದಾನ ಕಲ್ಪಿಸಿತ್ತು. ಇದರಿಂದಾಗಿ ದಸರಾ ಉಪ ಸಮಿತಿಗಳಿಗೆ ಅನುದಾನ ಕಡಿಮೆ ನೀಡಲಾಗಿತ್ತು. ಆದರೆ ಈ ಬಾರಿ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿರುವದರಿಂದ ದಸರಾ ಸಮಿತಿಯ ಅನುದಾನದ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸುವ ಆಶಾಭಾವನೆಯನ್ನು ಸಮಿತಿ ಹೊಂದಿದೆ. ಆದರೂ, ದಸರಾ ವೈಭವದಲ್ಲಿ ಯಾವದೇ ಸಮಸ್ಯೆ, ಕೊರತೆಯಾಗದಂತೆ ಈ ಬಾರಿಯ ದಸರಾ ಜನೋತ್ಸವವನ್ನು ವೈಭವದಿಂದ ಆಚರಿಸಲು ಸಮಿತಿ ಪದಾಧಿಕಾರಿಗಳು ಕಾರ್ಯೋನ್ಮುಖ ವಾಗಿದ್ದು, ದಾನಿಗಳ ಸಹಕಾರವನ್ನು ಬಯಸಿ ಈಗಾಗಲೇ ಹಣ ಸಂಗ್ರಹದಲ್ಲಿ ನಿರತರಾಗಿದ್ದಾರೆ. ದಾನಿಗಳಿಂದ ಸಮಿತಿ ಚೆಕ್ ಮೂಲಕವೇ ಧನಸಹಾಯವನ್ನು ಸಂಗ್ರಹಿಸುತ್ತಿದ್ದು, ಚೆಕ್ ಮೂಲಕವೇ ಖರ್ಚು ವೆಚ್ಚಗಳನ್ನು ವಿಲೇವಾರಿ ಮಾಡುವ ಮೂಲಕ ಪಾರದರ್ಶಕವಾಗಿ ದಸರಾ ಉತ್ಸವವನ್ನು ಆಚರಿಸಲು ಯೋಜನೆ ರೂಪಿಸಿದೆ.

ತಾ. 21ರಿಂದ ಕರಗ ಆರಂಭ : ಐತಿಹಾಸಿಕ ದಸರಾ ಜನೋತ್ಸವ ನಾಡಹಬ್ಬಕ್ಕೆ ಸಂಪ್ರದಾಯದಂತೆ ನವರಾತ್ರಿಯ ಆರಂಭ ದಿನ ತಾ. 21ರಂದು ಚಾಲನೆ ದೊರೆಯಲಿದೆ. ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವದ ಮೆರವಣಿಗೆ ಸಂಪ್ರದಾಯ ದಂತೆ ಆರಂಭವಾಗಲಿದೆ. ನಾಲ್ಕು ಶಕ್ತಿ ದೇವತೆಗಳಾದ ಶ್ರೀ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ ಹಾಗೂ ಶ್ರೀ ಕೋಟೆ ಮಾರಿಯಮ್ಮ ದೇವತೆಗಳ ಕರಗಗಳು ಸಾಂಪ್ರದಾಯಿಕ ಪೂಜೆಯೊಂದಿಗೆ ನವರಾತ್ರಿಯ 10 ದಿನಗಳ ಕಾಲ ನಗರದ ಮನೆ ಮನೆಗಳಿಗೆ ತೆರಳಿ ಹರಕೆ, ಕಾಣಿಕೆ ಸ್ವೀಕರಿಸಲಿದೆ. ಕೊನೆಯ ದಿನ ವಿಜಯದಶಮಿಯಂದು ದಶಮಂಟಪಗಳ ವೈಭೋಗವನ್ನು ಕಣ್ತುಂಬಿಕೊಳ್ಳಬಹುದು.

ರಸ್ತೆ ದುರಸ್ತಿಗೆ ಕ್ರಮ : ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ಹಾಗೂ ದಶಮಂಟಪಗಳು ಹಾದು ಹೋಗುವ

(ಮೊದಲ ಪುಟದಿಂದ) ರಸ್ತೆಗಳ ಅಭಿವೃದ್ಧಿಗೆ ಈಗಗಾಲೇ ಕ್ರಮ ಕೈಗೊಳ್ಳಲಾಗಿದೆ. ರಸ್ತೆಗಳ ಅಭಿವೃದ್ಧಿಗೆ ರೂ. 4.50 ಲಕ್ಷ ಅನುದಾನ ಮೀಸಲಿಡಲಾಗಿದ್ದು, ತಾ. 12 ರಿಂದಲೇ ತುರ್ತು ಕೆಲಸ ಕೈಗೊಳ್ಳಲಾಗುವದು. ನಗರದ ಎಲ್ಲಾ ವೃತ್ತಗಳು ಸ್ವಾಗತ ಕಮಾನುಗಳು, ಕಾವೇರಿ ಕಲಾ ಕ್ಷೇತ್ರ, ಖಾಸಗಿ ಬಸ್ ನಿಲ್ದಾಣ ಕಟ್ಟಡವನ್ನು ಸುಣ್ಣ ಬಣ್ಣ ಬಳಿದು ಅಲಂಕರಿಸಲಾಗು ವದು ಎಂದು ಹೇಳಿದರು.

ಅಲ್ಲದೆ ನಗರದ ರಸ್ತೆಯ ಗುಂಡಿ ಮುಚ್ಚುವ ಕ್ರಮಕೈಗೊಳ್ಳಲಾಗಿದೆ. ಯುಜಿಡಿ ಕೆಲಸ ಸಂದರ್ಭ ಉಂಟಾದ ಗುಂಡಿಗಳನ್ನು ಯುಜಿಡಿ ಗುತ್ತಿಗೆದಾರರು ಮಾಡಲಿದ್ದಾರೆ. ನಗರ ವ್ಯಾಪ್ತಿಯ ಕಾಡು ಕಡಿಯುವದು ಸೇರಿದಂತೆ ಮೋರಿ ದುರಸ್ತಿಯನ್ನು ತಕ್ಷಣ ಕೈಗೊಳ್ಳಲಾಗುವದು ಎಂದು ಕಾವೇರಮ್ಮ ಸೋಮಣ್ಣ ಹೇಳಿದರು.

ಪಂಪಿನ ಕೆರೆ ದುರಸ್ತಿ: ನಗರದ ನಾಲ್ಕು ಶಕ್ತಿ ದೇವತೆಗಳ ಕರಗಗಳು ಹೊರಡುವ ಪಂಪಿನ ಕೆರೆ ಬಳಿ ಇಂಟರ್‍ಲಾಕ್ ಹಾಗೂ ಗ್ರಿಲ್‍ಗಳನ್ನು ಹಾಕಿ ದುರಸ್ತಿಪಡಿಸಲಾಗು ವದು ಎಂದು ಕಾವೇರಮ್ಮ ಸೋಮಣ್ಣ ಇದೇ ಸಂದರ್ಭ ಹೇಳಿದರು.

ತಾ. 22ರಿಂದ ಸಾಂಸ್ಕøತಿಕ ಕಾರ್ಯಕ್ರಮ

ನಗರ ದಸರಾ ಜನೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು ತಾ. 22 ರಿಂದ ಆರಂಭವಾಗಲಿದ್ದು, ತಾ. 23, 24 ಮತ್ತು 26ರಂದು ಕ್ರೀಡಾಕೂಟಗಳು, ತಾ. 24 ರಂದು ಮಹಿಳಾ ದಸರಾ, 25ಕ್ಕೆ ಕವಿಗೋಷ್ಠಿ, 26 ರಂದು ಮಕ್ಕಳ ದಸರಾ, 28 ರಂದು ಯುವ ದಸರಾ, 29ಕ್ಕೆ ಆಯುಧ ಪೂಜೆ, ತಾ. 30 ರಂದು ದಸರಾ ನಡೆಯಲಿದೆ.

ಜಿಲ್ಲೆಯ ಜನತೆ ಪಾಲ್ಗೊಳ್ಳಲು ಮನವಿ

ಐತಿಹಾಸಿಕ ಮಡಿಕೇರಿ ನಗರ ದಸರಾ ಜನೋತ್ಸವಕ್ಕೆ ಸಾಂಪ್ರದಾಯಿಕ ವಾಗಿ ನಾಲ್ಕು ಶಕ್ತಿ ದೇವತೆಗಳು ಹೊರಡುವ ದಿನ ಚಾಲನೆ ದೊರೆ ಯಲಿದ್ದು, ನಗರದ ಮಹದೇವಪೇಟೆಯ ವ್ಯಾಪ್ತಿಯ ಬೀದಿಗಳಲ್ಲಿ ಅಂದು ರಂಗೋಲಿ, ಹೂವಿನ ಅಲಂಕಾರ ಸೇರಿದಂತೆ ಬೀದಿಯನ್ನು ಅಲಂಕರಿಸಲಿದ್ದಾರೆ. ಜಿಲ್ಲೆಯ ಜನತೆ ವಿಜಯ ದಶಮಿ ದಿನ ಮಾತ್ರ ಪಾಲ್ಗೊಳ್ಳದೇ ಕರಗ ಹೊರಡುವ ದಿನವೂ ಪಾಲ್ಗೊಂಡು ಸಹಕಾರ ನೀಡುವಂತೆ ನಗರ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಮಹೇಶ್ ಜೈನಿ, ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪ್ರಧಾನ ಕಾರ್ಯದರ್ಶಿ ಚುಮ್ಮಿ ದೇವಯ್ಯ, ಖಜಾಂಚಿ ಸಂಗೀತ ಪ್ರಸನ್ನ ಹಾಗೂ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್ ಮನವಿ ಮಾಡಿದ್ದಾರೆ.