ಸೋಮವಾರಪೇಟೆ, ಸೆ. 12: ಇಲ್ಲಿನ ಲಯನ್ಸ್ ಕ್ಲಬ್, ಪೊಲೀಸ್ ಇಲಾಖೆ, ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಇವುಗಳ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಸಲಹಾ ಶಿಬಿರ ನಡೆಯಿತು.

ಶಿಬಿರವನ್ನು ಕೆವಿಜಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಕೆ.ವಿ. ಚಿದಾನಂದ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತಿಯೊಬ್ಬರೂ 35 ವರ್ಷಗಳ ನಂತರ ಮುಂಜಾಗ್ರತಾ ಕ್ರಮವಾಗಿ ತಮ್ಮ ಆರೋಗ್ಯವನ್ನು ತಜ್ಞ ವ್ಶೆದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕಿದೆ. ನಾವು ತಿನ್ನುವ ಆಹಾರದಿಂದಲೂ ಕೆಲವು ಕಾಯಿಲೆಗಳು ಮನುಷ್ಯರನ್ನು ಕಾಡುತ್ತಿದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಉನ್ನತೀಕರಣ ಗೊಂಡಿದ್ದು, ಹೆಚ್ಚಿನ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಆದ್ದರಿಂದ ಎಲ್ಲರೂ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮುಂದಾಗ ಬೇಕೆಂದರು.

ಶಿಬಿರದ ಅಧ್ಯಕ್ಷತೆಯನ್ನು ವಹಿಸಿದ್ದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎ.ಎಸ್. ಮಹೇಶ್ ಮಾತನಾಡಿ, ದೈನಂದಿನ ಬದುಕಿನಲ್ಲಿ ಇತರ ಚಟುವಟಿಕೆಗಳಿಗೆ ನೀಡುವ ಆದ್ಯತೆಯನ್ನು ಆರೋಗ್ಯ ಕಾಪಾಡಿ ಕೊಳ್ಳಲೂ ನೀಡಬೇಕಿದೆ ಎಂದರು.

ಶಿಬಿರದಲ್ಲಿ ಸಾಮಾನ್ಯ ಕಾಯಿಲೆಗಳನ್ನು ವೈದ್ಯರಾದ ಕಾರ್ತಿಕ್, ಹರ್ಷಿತ, ಮೂಳೆಗೆ ಸಂಬಂಧಿಸಿದಂತೆ ತಜ್ಞರಾದ ವಿಘ್ನೇಶ್ ಹಾಗೂ ಜ್ಞಾನೇಶ್, ಶಸ್ತ್ರ ಚಿಕಿತ್ಸಕರಾದ ಹೇಮಂತ್ ಮತ್ತು ಮಕ್ಕಳ ಕಾಯಿಲೆಗಳನ್ನು ಡಾ. ಮಂಜುನಾಥ್ ತಪಾಸಣೆ ನಡೆಸಿದರು. ಚರ್ಮ ರೋಗವನ್ನು ವೈದ್ಯಾರಾದ ಕಾರ್ತಿಕ್, ಕಿವಿ, ಮೂಗು ಹಾಗೂ ಗಂಟಲು ಕಾಯಿಲೆಗಳನ್ನು ಡಾ. ಜ್ಯೋತಿ ತಪಾಸಣೆ ನಡೆಸಿದರು.

ಇದೇ ಸಂದರ್ಭ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ನೂರಾರು ಮಂದಿ ಸಾರ್ವಜನಿಕರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದು ಕೊಂಡರು.