ಮಡಿಕೇರಿ, ಸೆ. 11 : ಮೊನ್ನೆ ರಾತ್ರಿ ಮಾದಾಪುರ ಬಳಿ ಜಂಬೂರು ಗ್ರಾಮದಲ್ಲಿ ಆಟೋಚಾಲಕ ಸತೀಶ್ ಎಂಬವರ ಕೊಲೆ ನಡೆದಿರುವ ಪ್ರಕರಣ ಸಂಬಂಧ, ಆರೋಪ ಹೊತ್ತು ಜೈಲು ಸೇರಿರುವ ಮೂವರು ಸಹೋದರರ ಉದ್ಯೋಗಕ್ಕೆ ಕುತ್ತು ಎದುರಾಗಿದೆ. ಆಟೋ ಚಾಲಕ ಸತೀಶ್‍ಗೆ ಚೂರಿಯಿಂದ ಇರಿದು ಕೊಲೆ ಗೈದಿರುವ ಪ್ರಮುಖ ಆರೋಪ ಎದುರಿಸುತ್ತಿರುವ ರುದ್ರಕುಮಾರ್ ಕಂದಾಯ ಉಲಾಖೆ ನೌಕರನಾಗಿದ್ದು, ಮಾದಾಪುರದಲ್ಲಿ ಗ್ರಾಮ ಸಹಾಯಕನಾಗಿದ್ದ.ಇನ್ನೋರ್ವ ಆರೋಪಿ ಜಯಾನಂದ ಕೂಡ ಸೋಮವಾರಪೇಟೆ ಸರಕಾರಿ ಖಜಾನೆ ಇಲಾಖೆಯ ನೌಕರನಾಗಿದ್ದು, ಇದೀಗ ಕೊಲೆ ಆರೋಪದಡಿ ಜೈಲು ಪಾಲಾಗಿದ್ದಾನೆ. ಮತ್ತೋರ್ವ ಆರೋಪಿ ಬಸಪ್ಪ ತೋಟಗಾರಿಕಾ ಇಲಾಖೆಯ ದಿನಗೂಲಿ ನೌಕರಿಯೊಂದಿಗೆ ಇಲ್ಲಿನ ರಾಜಾಸೀಟ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದ.

ಈ ವಿಷಯವನ್ನು ಖಚಿತ ಪಡಿಸಿರುವ ಸಂಬಂಧಪಟ್ಟ ಮೂರು ಇಲಾಖೆಯ ಮೇಲಧಿಕಾರಿಗಳು, ಆರೋಪಿಗಳ ವಿರುದ್ಧ ಸಲ್ಲಿಸಲ್ಪಟ್ಟಿರುವ ಕೊಲೆ ಮೊಕದ್ದಮೆ ದೂರುಗಳನ್ನು ಪಡೆದು, ಇಲಾಖೆಗಳ ವರಿಷ್ಠರಿಗೆ ವರದಿ ನೀಡಲಿರುವದಾಗಿ ಸುಳಿವು ನೀಡಿದ್ದಾರೆ. ಅಲ್ಲದೆ ಆರೋಪಿಗಳು 48 ಗಂಟೆಗಳಿಗೂ ಹೆಚ್ಚಿನ ಅವಧಿಗೆ ಸೆರೆವಾಸದಲ್ಲಿದ್ದರೆ, ಅಂತಹವರ ವಿರುದ್ಧ ಅಮಾನತು ತಪ್ಪಿದ್ದಲ್ಲಿ ವಜಾಗೊಳಿಸುವ ಕ್ರಮ ಕೈಗೊಳ್ಳಲಿರುವದಾಗಿ ಖಚಿತ ಪಡಿಸಿದ್ದಾರೆ. ಹೀಗಾಗಿ ಪ್ರಸಕ್ತ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಮೂವರು ಸಹೋದರರು ತಮ್ಮ ಉದ್ಯೋಗಕ್ಕೆ ಕುತ್ತು ತಂದುಕೊಂಡಿರುವದು ಖಚಿತವಾಗಿದೆ.