ವೀರಾಜಪೇಟೆ, ಸೆ. 11 : ಯುವಜನತೆ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳುವದರ ಜತೆಗೆ ರಾಷ್ಟ್ರ ರಕ್ಷಣೆಗೆ ಪಣತೊಡಬೇಕು ಎಂದು ಸೇನೆಯ ಎಂಇಜಿಯ ಶೈಕ್ಷಣಿಕ ವಿಭಾಗದ ಅಧಿಕಾರಿ ಮೇಜರ್ ಸಿ. ಜೋಸೆಫ್ ಅಂತೋಣಿ ಕರೆ ನೀಡಿದರು.

ಪಟ್ಟಣದ ಸಂತ ಅನ್ನಮ್ಮ ಪದವಿ ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಘಟಕದ ವತಿಯಿಂದ ಕಾಲೇಜಿನ ಸಭಾಂಗಣ ದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ಯುವ ಜನತೆ ಇಂದು ಸೇನೆ ಸೇರಲು ಹಿಂದೇಟು ಹಾಕುತ್ತಿರುವದು ವಿಷಾದದ ಸಂಗತಿ ರಾಷ್ಟ್ರ ರಕ್ಷಣೆಯ ವಿಚಾರದಲ್ಲಿ ಜಾತಿ, ಧರ್ಮ, ಭಾಷೆ, ಪ್ರಾಂತ್ಯ ಸೇರಿದಂತೆ ಯಾವದೇ ತಡೆಯಿಲ್ಲ ಎಂದು ಹೇಳಿದ ಅವರು ಸೇನೆಯ ಸೇರ್ಪಡೆ, ಅರ್ಹ ಪರೀಕ್ಷೆ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪದವಿ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಐಸಾಕ್ ರತ್ನಾಕರ್ ವೀರಭೂಮಿಯಾಗಿರುವ ಕೊಡಗಿನಿಂದ ಹಿಂದಿನಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರ್ಪಡೆಯಾಗಿದ್ದಾರೆ. ಮುಂದೆಯೂ ಯುವಜನತೆ ದೇಶ ರಕ್ಷಣೆಗೆ ಸದಾ ಸಿದ್ದರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಎಂಇಜಿಯ ಹವಾಲ್ದಾರ್ ಶಿವಕುಮಾರ್, ಲ್ಯಾನ್ಸ್ ನಾಯಕ್ ರಾಜೇಶ್, ಕಾಲೇಜಿನ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಘಟಕದ ಜೋಯ್ಸನ್ ಲೋಬೋ ಸೇರಿದಂತೆ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿರಿದ್ದರು. ವಿದ್ಯಾರ್ಥಿನಿ ನಿರೀಕ್ಷಿತ ಮತ್ತು ತಂಡದವರು ಪ್ರಾರ್ಥಿಸಿದರು. ಗೌರಮ್ಮ ಸ್ವಾಗತಿಸಿದರು. ಪ್ರತಿಭಾ ನಿರೂಪಿಸಿದರು. ಲಕ್ಷ್ಮಿ ವಂದಿಸಿದರು.