ಮಡಿಕೇರಿ, ಸೆ. 12: ಫೇಸ್‍ಬುಕ್‍ನಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಸಮೀಲ್ ಎಂಬವರು ಪ್ರಧಾನಮಂತ್ರಿ ಮೋದಿ ವಿರುದ್ಧದ ಬರಹವನ್ನು ಶೇರ್ ಮಾಡಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ದೂರು ನೀಡಲಾಗಿದೆ.ಆ ಫೇಸ್‍ಬುಕ್ ಬರಹದಲ್ಲಿ ‘ಸೈನಿಕರು ಪ್ರತಿಭಟನೆ ಮಾಡಿದ್ದು, ನೋಡಿದ್ದೀರ, ಕೇಳಿದ್ದೀರ ಮೋದಿ ಸರ್ಕಾರಕ್ಕೆ ಇದಕ್ಕಿಂತ ಅವಮಾನ ಬೇಕಾ ಮೋದಿ ನೀ... ಬರೀ ಪ್ರಧಾನಿಯಾದರೆ ಸಾಲದು’ ಎಂಬಿತ್ಯಾದಿ ಅವಹೇಳನಕಾರಿ ಅಂಶಗಳಿರುವದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಂದೂರುವಿನ ಬಿ.ಎಸ್. ನಂದಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರಿಗೆ ಲಿಖಿತ ದೂರು ನೀಡಿದ್ದಾರೆ. ಸಮೀಲ್ ಅವರು ಫೇಸ್‍ಬುಕ್‍ನಲ್ಲಿ ಮೂರು ಖಾತೆ ಹೊಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಹಿಂದೂ ಸಂಘಟನೆ ಹಾಗೂ ಮುಖಂಡರ ವಿರುದ್ಧ ಅವಹೇಳನಕಾರಿ ಅಂಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇಂತಹ ಕೋಮು ಪ್ರಚೋದನೆ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ದೂರಿನ ಕುರಿತು ಪ್ರತಿಕ್ರಿಯಿಸಿದ ಎಸ್‍ಪಿ ರಾಜೇಂದ್ರ ಪ್ರಸಾದ್ ಅವರು ಈ ಬಗ್ಗೆ ಕೂಲಂಕುಶ ಪರಿಶೀಲನೆ ನಡೆಯುತ್ತಿರುವದಾಗಿ ತಿಳಿಸಿದ್ದಾರೆ.