ನಾಪೋಕ್ಲು, ಸೆ. 12: ಮಡಿಕೇರಿಯಿಂದ ಮೂರ್ನಾಡು – ಕುಂಬಳದಾಳು ಮೂಲಕ ನಾಪೋಕ್ಲುವಿಗೆ ಸಂಚರಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಇತ್ತೀಚಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಬಾರದೇ ಗ್ರಾಮಸ್ಥರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು ಉಪಯೋಗವಿಲ್ಲ ದಂತಾಗಿದೆ ಎಂದು ಕುಂಬಳದಾಳು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್ ಅವರಿಗೆ ಕುಂಬಳದಾಳು ಗ್ರಾಮಸ್ಥರು ಮೌಖಿಕ ದೂರು ನೀಡಿದರು. ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದ ಶಾಸಕರು ಮಡಿಕೇರಿ ಡಿಪೋ ವ್ಯವಸ್ಥಾಪಕ ಗೀತಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಈ ಹಿಂದಿನಂತೆ ಬಸ್ ಮಡಿಕೇರಿಯಿಂದ ಹೊರಟು 8.30 ಗಂಟೆಗೆ ಕುಂಬಳದಾಳು ತಲುಪಿ ಬಳಿಕ ನಾಪೋಕ್ಲುವಿನಿಂದ 9.30ಕ್ಕೆ ಕುಂಬಳದಾಳು ಮೂಲಕ ಮಡಿಕೇರಿಗೆ ಸಂಚರಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಈ ಅವಧಿಯಲ್ಲಿ ಬಸ್ ಸಂಚರಿಸುವದರಿಂದ ಕಚೇರಿಗಳಿಗೆ ಉದ್ಯೋಗಕ್ಕೆ ತೆರಳುವವರಿಗೆ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದರು. ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚನ ದಿನೇಶ್, ಕುಂಬಳದಾಳು ಧವಸ ಭಂಡಾರದ ಕಾರ್ಯದರ್ಶಿ ನೆರವಂಡ ಗಣೇಶ್, ಕರ್ಣಯ್ಯನ ಸಿದ್ದಾರ್ಥ, ಕರ್ಣಯ್ಯನ ಲೀಲಾವತಿ, ಬೊಬ್ಬೀರ ರಾಧಾ ಕುಮಾರಿ, ಅಂಗನವಾಡಿ ಶಿಕ್ಷಕಿ ಶಾರದಾ, ಶಿಕ್ಷಕ ನಂದಕುಮಾರ್ ಇದ್ದು. ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಸಮ್ಮುಖದಲ್ಲಿ ಗ್ರಾಮಸ್ಥರು ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು.

- ದುಗ್ಗಳ