ಗೋಣಿಕೊಪ್ಪಲು, ಸೆ.11: ಕೊಡಗು ಜಿಲ್ಲಾ ಕಾಂಗ್ರೆಸ್, ಕೊಡಗು ಬೆಳೆಗಾರರ ಒಕ್ಕೂಟ ಹಾಗೂ ವೀರಾಜಪೇಟೆ ಜೆಡಿಎಸ್ ವತಿಯಿಂದ ಇಂದು ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ವಿರುದ್ಧ ವ್ಯಾಪಕ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಇಲ್ಲಿನ ಉಮಾ ಮಹೇಶ್ವರಿ ದೇವಸ್ಥಾನ ಮುಂಭಾಗ ದಿಂದ ಕೊಡಗು ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಎಪಿಎಂಸಿ ವರೆಗೂ ಮೊದಲು ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನಾ ಕಾರರನ್ನು ಮೊದಲು ಎಪಿಎಂಸಿ ಆವರಣ ದೊಳಗೆ ಬಿಡಲು ಪೆÇಲೀಸರು ನಿರಾಕರಿಸಿದರೂ, ನಂತರ ಎಪಿಎಂಸಿ ಕಚೇರಿ ಮುಂಭಾಗ ದವರೆಗೂ ಪ್ರತಿಭಟನಾ ನಿರತರು ನುಗ್ಗಿ ಬಂದರು. ಈ ಹಂತದಲ್ಲಿ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಮುಖಂಡರು ಎಪಿಎಂಸಿ ಕಚೇರಿಯ ಮತ್ತೊಂದು ಭಾಗದಲ್ಲಿ ಪ್ರತಿಭಟನೆ ನಡೆಸಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ವೀರಾಜಪೇಟೆ ತಾಲೂಕು ಜೆಡಿಎಸ್ ಘಟಕವೂ ಪ್ರತಿಭಟನೆಗೆ ಬೆಂಬಲ ನೀಡಿದ್ದು 12 ಗಂಟೆ ಸುಮಾರಿಗೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗ ನೂರಾರು ಬೆಳೆಗಾರರು ಜಮಾಯಿಸಿ ವಿಯಟ್ನಾಂ ಕಾಳುಮೆಣಸು ಆಮದು, ಕಲಬೆರಕೆ ಹಾಗೂ ಮಾರಾಟ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಡಿಕೇರಿ ಎಪಿಎಂಸಿ ಸಹಾಯಕ ನಿರ್ದೇಶಕ ಯೋಗಾನಂದ, ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು, ಗೋಣಿಕೊಪ್ಪಲು ಎಪಿಎಂಸಿ ಕಾರ್ಯದರ್ಶಿ ಹಂಪಣ್ಣ ಅವರು ಸ್ಥಳದಲ್ಲಿ ಹಾಜರಿದ್ದು, ಪ್ರತಿಭಟನಾಕಾರರ ಟೀಕೆಗೆ ಗುರಿಯಾದರೆ, ಎಪಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಚುನಾಯಿತ ಸದಸ್ಯರು ಗೈರುಹಾಜರಾಗಿದ್ದರು. ಇಡೀ ಎಪಿಎಂಸಿ ಯಾರ್ಡ್‍ನ ವರ್ತಕರು ಅಲ್ಲಿ ಕಂಡು ಬರದೆ, ಮಳಿಗೆ, ಗೋದಾಮುಗಳು ಬೀಗಮುದ್ರೆ ಯೊಂದಿಗೆ ಮುಚ್ಚಲ್ಪಟ್ಟಿದ್ದು ಕಂಡು ಬಂದಿತ್ತು. ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹಾಗೂ ಕೇಂದ್ರ ಸಂಬಾರ ಮಂಡಳಿಯ ಅಧ್ಯಕ್ಷರೂ ಆಗಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧವೂ ಪ್ರತಿಭಟನಾ ನಿರತರು ವಾಗ್ಧಾಳಿ ನಡೆಸಿದರು.