ಸೋಮವಾರಪೇಟೆ, ಸೆ. 12: ಇಲ್ಲಿನ ವಿವಿದೋದ್ದೇಶ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. 4,32,210 ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಪಿ. ಶಿವಕುಮಾರ್ ಹೇಳಿದರು.

ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂಘದ 48ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಂಘಕ್ಕೆ ವ್ಯಾಪಾರದಿಂದ ಲಾಭ ಕಡಿಮೆ ಯಾಗುತ್ತಿದ್ದು, ನೂತನ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ರೂ. 10ಲಕ್ಷದ ವರೆಗೆ ಭದ್ರತಾ ಸಾಲವನ್ನು ನೀಡಲಾಗುವದು ಎಂದು ಶಿವಕುಮಾರ್ ತಿಳಿಸಿದರು.

ಉತ್ತಮ ವ್ಯವಹಾರ ನೀಡುವ ದೃಷ್ಟಿಯಿಂದ ಎಲ್ಲ ವ್ಯವಹಾರವನ್ನು ಗಣಕೀಕರಣಗೊಳಿಸಲಾಗಿದೆ. ಇ-ಸ್ಟ್ಯಾಂಪಿಂಗ್ ಸೇವೆ ನೀಡಲಾಗುತ್ತಿದೆ. ಸಾಲಗಾರರ ಹಿತದೃಷ್ಟಿಯಿಂದ ಸಾಲ ವಿಮಾ ನಿಧಿ ಯೋಜನೆ ಮತ್ತು ಹಾಲಿ ಕಟ್ಟಡದ ಮೇಲೆ ಸಭಾಂಗಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ಒದಗಿಸಿದರು.

ಅಲ್ಲದೆ, ಪ್ರಸಕ್ತ ಸಾಲಿನಿಂದಲೇ ರೂ. 10 ಸಾವಿರ ಮರಣ ನಿಧಿಯನ್ನು ಸದಸ್ಯರಿಗೆ ನೀಡಲಾಗುವದು. ಈ ನಿಧಿಗಾಗಿ ಸದಸ್ಯರಿಂದ ಅಕ್ಟೋಬರ್ ಅಂತ್ಯದೊಳಗೆ ರೂ. 500 ವಂತಿಕೆ ಪಡೆಯಲಾಗುವದು ಎಂದರು. ಇದೇ ಸಂದರ್ಭ ಪ್ರಸಕ್ತ ಸಾಲಿನಲ್ಲಿ ಶೇ. 7ರಂತೆ ನೀಡಲು ಉದ್ದೇಶಿಸಿದ್ದ ಲಾಭಾಂಶವನ್ನು ಸದಸ್ಯರ ಮರಣ ನಿಧಿಗೆ ವರ್ಗಾಯಿಸುವಂತೆ ಸದಸ್ಯರು ಸೂಚಿಸಿದರು.

ಕಳೆದ ಸಾಲಿನಲ್ಲಿ ಸಂಘಕ್ಕೆ ನಡೆದ ಚುನಾವಣೆ ಕಾನೂನು ಬದ್ಧವಾಗಿ ನಡೆಯಲಿಲ್ಲ ಎಂದು ರಾಜು, ಅಭಿಮನ್ಯುಕುಮಾರ್, ಕಮಲ್ ಸೇರಿದಂತೆ ಹಲವು ಸದಸ್ಯರು ಆರೋಪಿಸಿದರು. ಕೇವಲ ಕೆಲವೇ ಸದಸ್ಯರ ಗಮನಕ್ಕೆ ತಂದು ಚುನಾವಣೆ ನಡೆಸಲಾಗಿದೆ. ಚುನಾವಣೆಗೂ 15ದಿನಗಳ ಮುನ್ನ ನೋಟೀಸ್ ನೀಡಬೇಕಿತ್ತು. ಚುನಾವಣಾಧಿಕಾರಿ ಗಳನ್ನು ಪ್ರಶ್ನಿಸಿದ ನಂತರ ನಾಮಪತ್ರ ಸಲ್ಲಿಸುವ ಕೊನೆಯ ಎರಡು ದಿನಗಳ ಮುನ್ನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ಚುನಾವಣೆ ನಡೆಸಬೇಕೆಂದು ಸದಸ್ಯರು ಸೂಚಿಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಮ್‍ಪ್ರಸಾದ್, ಸದಸ್ಯರಾದ ಬಿ.ಡಿ. ಮಂಜುನಾಥ್, ವರಲಕ್ಷ್ಮೀ ಸಿದ್ದೇಶ್ವರ್, ಬಿ.ಆರ್. ಮೃತ್ಯುಂಜಯ, ಎಂ.ಸಿ. ರಾಘವ, ಕೆ.ಬಿ. ದಿವ್ಯ, ಎಚ್.ಕೆ. ಮಾದಪ್ಪ, ಶೋಭಾ ಶಿವರಾಜ್, ಎಚ್.ಎಸ್. ವೆಂಕಪ್ಪ, ಬಿ.ಶಿವಪ್ಪ, ಕೆ.ಬಿ. ಸುರೇಶ್, ಎಸ್.ಟಿ. ಪರಮೇಶ್, ಎಂ. ಶ್ರೀಕಾಂತ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕೆ. ಮೋಹನ್ ಉಪಸ್ಥಿತರಿದ್ದರು.