ಸುಂಟಿಕೊಪ್ಪ, ಸೆ. 12: ಮಹಿಳೆಯರ ಸ್ವಾವಲಂಬಿ ಜೀವನ ಹಾಗೂ ಸಬಲೀಕರಣಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸ್ತ್ರೀಶಕ್ತಿ ಸಂಘದವರು ಬೆಳೆಸಿದ ತರಕಾರಿ ಹಾಗೂ ತಿಂಡಿ ತಿನಿಸುಗಳ ಉತ್ಪನ್ನದ ಮಾರಾಟಕ್ಕಾಗಿ ಉಚಿತವಾಗಿ ಜಿಲ್ಲೆಗೆ ಮಾರುತಿ ವ್ಯಾನ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಹೆನಾ ಫೈರೋಜ್ ಹೇಳಿದರು.

ಇಲ್ಲಿನ ಮಧುರಮ್ಮ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಸೂರ್ಯ ಸ್ತ್ರೀಶಕ್ತಿ ಗುಂಪಿನವರು ಉತ್ಪಾದಿಸಿದ ತಿಂಡಿ ತಿನಿಸು, ತರಕಾರಿಗಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸರಕಾರ ಒದಗಿಸಿದ ಮಾರುತಿ ವ್ಯಾನ್‍ನಲ್ಲಿ ಮಾರಾಟ ಮಾಡುವ ಸಂದರ್ಭ ಅವರು ಮಾತನಾಡಿದರು. ಜಿಲ್ಲೆಯ ಎಲ್ಲಾ ಸ್ತ್ರೀಶಕ್ತಿ ಗುಂಪಿನವರು ತಾವು ಉತ್ಪಾದಿಸಿದ ತಿಂಡಿ ತಿನಿಸು ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಲು 1 ಉಚಿತ ವ್ಯಾನ್‍ನ್ನು ಜಿಲ್ಲೆಗೆ ಸರಕಾರ ಕಲ್ಪಿಸಿದ್ದು ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.

ಪ್ರತಿ ತಿಂಗಳಿನ ತಾ. 1 ರಿಂದ 10 ರವರೆಗೆ ವೀರಾಜಪೇಟೆ ತಾಲೂಕು ತಾ. 10 ರಿಂದ 20 ರವರೆಗೆ ಸೋಮವಾರಪೇಟೆ ತಾಲೂಕು ಹಾಗೂ ತಾ. 20 ರಿಂದ 30 ರವರೆಗೆ ಮಡಿಕೇರಿ ತಾಲೂಕಿನಲ್ಲಿ ಸ್ತ್ರೀಶಕ್ತಿ ಗುಂಪಿನವರು ಉತ್ಪಾದಿಸಿದ ಪದಾರ್ಥಗಳನ್ನು ಮಾರಾಟ ಮಾಡಲು ವ್ಯಾನನ್ನು ಬಳಸಬಹುದೆಂದು ಹೇಳಿದರು.