ಶ್ರೀಮಂಗಲ, ಸೆ. 12: ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಳಪೆ ಗುಣಮಟ್ಟದ ಕರಿಮೆಣಸನ್ನು ವಿಯೆಟ್ನಾಂ ದೇಶದಿಂದ ಆಮದು ಮಾಡಿಕೊಂಡು ಕೊಡಗಿನ ಉತ್ತಮ ಗುಣಮಟ್ಟದ ಕರಿಮೆಣಸಿನೊಂದಿಗೆ ಮಿಶ್ರಣ ಮಾಡಿ, ಸ್ಥಳೀಯ ಕರಿಮೆಣಸಿಗೆ ಬೆಲೆ ಕುಸಿಯಲು ಕಾರಣವಾಗಿದೆ ಎಂದು ಆರೋಪಿಸಿ ಜಿಲ್ಲಾ ಬೆಳೆಗಾರರ ಒಕ್ಕೂಟ ಸೋಮವಾರ ಮಾರುಕಟ್ಟೆಗೆ ಬೃಹತ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ನಂತರ ಮಾರುಕಟ್ಟೆ ಸಮಿತಿಯ ಕಾಂiÀರ್iದರ್ಶಿ ಹಾಗೂ ವ್ಯಾಪಾರಿಗಳಾದ ಸೌರವ್ ಬಂಕ, ಶಿವಕುಮಾರ್ ಬಂಕ ಮತ್ತು ಜತೀನ್ ಷಾ ಅವರ ಮೇಲೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಗೋಣಿಕೊಪ್ಪ ಪೊಲೀಸರು ಇವರ ಮೇಲೆ ಮೊಕದ್ದಮೆ ದಾಖಲಿಸಿದ್ದಾರೆ.

ಪ್ರತಿಭಟನೆ ವೇಳೆ ಸೋಮವಾರ ಗೋದಾಮನ್ನು ಬೆಳೆಗಾರರ ಒಕ್ಕೂಟದಿಂದ ಪರಿಶೀಲಿಸಿದ ಸಂದರ್ಭ ಹುಡಿಯನ್ನು ತುಂಬಿದ ನೂರಾರು ಚೀಲಗಳು ಪತ್ತೆಯಾಗಿದ್ದು, ಇದರೊಂದಿಗೆ ಹುಡಿ ಮಾಡಲು ಗೋದಾಮಿನೊಳಗೆ ಅಳವಡಿಸಿದ್ದ ಯಂತ್ರೋಪಕರಣಗಳು ಸಹ ಗೋಚರಿಸಿದವು. ಇವುಗಳನ್ನು ಮಂಗಳವಾರ ತಾಲೂಕು ತಹಶೀಲ್ದಾರ್ ಗೋವಿಂದಸ್ವಾಮಿ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಯೋಗಾನಂದ, ಡಿವೈಎಸ್‍ಪಿ ನಾಗಪ್ಪ, ಗೋಣಿಕೊಪ್ಪ ವೃತ್ತ ನಿರೀಕ್ಷಕ ಪಿ.ಕೆ.ರಾಜು, ಉಪನಿರೀಕ್ಷಕ ಹೆಚ್.ವೈ ರಾಜು ಮತ್ತು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಪಂಚನಾಮೆ ಮಾಡಲಾಯಿತು.

ಈ ಸಂದರ್ಭ ಗೋದಾಮು ಒಳಗೆ ಇರಿಸಿದ್ದ 1046 ಚೀಲಗಳಲ್ಲಿನ 26 ಟನ್ ಹುಡಿಯನ್ನು ಗೋಣಿಕೊಪ್ಪ ಪೊಲೀಸ್ ಠಾಣಾ ವಶಕ್ಕೆ ಪಡೆಯಲಾಯಿತು. ಗೋದಾಮು ತಪಾಸಣಾ ವೇಳೆ ಗುರುಗು ಹತ್ತಿಯ ಬೀಜದ 3 ಚೀಲುಗಳು ಸಿಕ್ಕಿದ್ದು, ಕಾಳು ಮೆಣಸು ಪುಡಿಗೆ ಇದನ್ನು ಬೆರೆಸಲಾಗಿತ್ತೆ ಎಂಬ ಸಂಶಯದಡಿ ಮೈಸೂರು ಕೇಂದ್ರೀಯ ಆಹಾರ ಮತ್ತು ತಂತ್ರಜ್ಞಾನ ಸಂಸ್ಥೆಗೆ ಕಳುಹಿಸಲಾಗಿದೆ. ನಂತರ ಈ ಗೋದಾಮನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಇದನ್ನು ಪರೀಕ್ಷೆಗೆ ಪೊಲೀಸ್ ಇಲಾಖೆ ಕಳುಹಿಸಲು ಮಾದರಿ ಸಂಗ್ರಹಿಸಿದೆ. ಇದಲ್ಲದೆ, ಬೆಳೆಗಾರರ ಒಕ್ಕೂಟ ನೀಡಿದ್ದ ಪೊಲೀಸ್ ದೂರಿನಂತೆ ಮಾರುಕಟ್ಟೆ ಒಳಗಿನ ವ್ಯಾಪಾರಿ ಸೌರವ್ ಬಂಕ ಹಾಗೂ ಜತೀನ್ ಷಾ ಅವರಿಗೆ ಸೇರಿದ ಇನ್ನೂ ಹಲವು ಗೋದಾಮುಗಳನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದು, ಈ ವ್ಯಾಪಾರಿಗಳು ಕೊಡಗಿನ ಹೊರಗೆ ತೆರಳಿರುವದರಿಂದ ಅವರುಗಳು ಬಂದ ನಂತರ ಗೋದಾಮುಗಳನ್ನು ಬೆಳೆಗಾರರ ಒಕ್ಕೂಟದ ಪದಾಧಿಕಾರಿಗಳ ಸಮ್ಮುಖದಲ್ಲಿ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದು, ಅದುವರೆಗೆ ಸಂಬಂಧಿಸಿದ ಗೋದಾಮುಗಳಿಗೆ ಪೊಲೀಸ್ ಭದ್ರತೆ ಏರ್ಪಡಿಸಲಾಗುವದೆಂದು ತಿಳಿಸಿದ್ದಾರೆ.

ಈ ಸಂದರ್ಭ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಹಂಪಣ್ಣ, ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಸಲಹೆಗಾರ ಚೆಪ್ಪುಡಿರ ಶೆರಿ ಸುಬ್ಬಯ್ಯ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ, ಯುಕೊ ಸಂಘಟನೆಯ ಸಂಚಾಲಕ ಮಂಜು ಚಿಣ್ಣಪ್ಪ, ಅನೀಶ್ ಮಾದಪ್ಪ, ತೀತರಮಾಡ ಗಣೇಶ್, ವಕೀಲ ಸಣ್ಣುವಂಡ ರತನ್, ಅರವiಣಮಾಡ ಮುರುಳಿ ಮುತ್ತಣ್ಣ, ಕೊಟ್ಟಂಗಡ ಜೋಯಪ್ಪ, ಮತ್ತಿತರರು ಹಾಜರಿದ್ದರು.

ವರದಿ : ಹರೀಶ್ ಮಾದಪ್ಪ