ಗ್ಯಾಟ್ ಒಪ್ಪಂದ, ಏಷಿಯನ್ ಟ್ರೇಡ್ ಅಗ್ರಿಮೆಂಟ್ ಹಾಗೂ ಸಾರ್ಕ್ ದೇಶಗಳ ಒಡಂಬಡಿಕೆ ಅನ್ವಯ ರಪ್ತು ಹಾಗೂ ಅಮದು ನೀತಿ ಸಡಿಲಗೊಂಡಿದೆ. ಆಮದು ನಿರ್ಬಂಧ ಅಸಾಧ್ಯ. ಈ ನಿಟ್ಟಿನಲ್ಲಿ ಆಮದನ್ನು ಕಡಿತಗೊಳಿಸಲು ಕೇಂದ್ರವು ಆಮದು ಸುಂಕವನ್ನು ಶೇ.79ಕ್ಕೆ ಹೆಚ್ಚಿಸಿದೆ. ಹೀಗಿದ್ದೂ ವಿಯಟ್ನಾಂ ಕಾಳುಮೆಣಸು ಹೇಗೆ ಬಂತು? ಇದರಿಂದ ವರ್ತಕರಿಗೆ ಎಷ್ಟು ಲಾಭ? ವಿಯಟ್ನಾಂನಿಂದ ಕೊಡಗಿಗೆ ಬಂದ ಕಾಳುಮೆಣಸು ಇಲ್ಲಿನ ಉತ್ತಮ ದರ್ಜೆಯ ಕಾಳುಮೆಣಸಿನೊಂದಿಗೆ ಕಲಬೆರಕೆ ಮಾಡಿ ದುಬಾರಿ ದರಕ್ಕೆ ಮಾರಾಟ ಮಾಡಿದ್ದಲ್ಲಿ ಅದು ತಪ್ಪು ಹಾಗೂ ಎಪಿಎಂಸಿ ಗೋದಾಮಿನಲ್ಲಿ ಕಳಪೆ ಗುಣಮಟ್ಟದ ಕಾಳುಮೆಣಸು ಪುಡಿ ತಯಾರಿ,ಮಿಶ್ರಣದ ಬಗ್ಗೆ ಅಗತ್ಯ ಸಾಕ್ಷ್ಯಾಧಾರವಿದ್ದಲ್ಲಿ ಕರ್ನಾಟಕ ಕಲಬೆರಕೆ ನಿಯಂತ್ರಣ ಕಾಯ್ದೆ ಮೂಲಕ ವರ್ತಕರ ಮೇಲೆ ಪ್ರಕರಣ ದಾಖಲಿಸಲು, ಕಾನೂನು ಕ್ರಮ ಜರುಗಿಸಲು ಅವಕಾಶವಿದೆ ಎಂದು ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.

ಕಲಬೆರಕೆ ಕಾಯ್ದೆ ಬಳಸಬಹುದು - ಕೆಜಿಬಿ

(ಮೊದಲ ಪುಟದಿಂದ) ಇಂದು ಕುಟ್ಟ-ಕೆ.ಬಾಡಗದಲ್ಲಿ ಶ್ರೀಕೃಷ್ಣ ಜಯಂತಿ ಶೋಭಾಯಾತ್ರೆ ಉದ್ಘಾಟನೆಯ ನಂತರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಪ್ರತಿಭಟನೆಯ ಅಗತ್ಯವಿರಲಿಲ್ಲ. ರಪ್ತು ಹಾಗೂ ಆಮದು ವರ್ತಕರು ಕಲಬೆರಕೆ ಮೂಲಕ ವಂಚನೆ ಮಾಡುತ್ತಿದ್ದಲ್ಲಿ ತಹಶೀಲ್ಧಾರ್ ಮಟ್ಟದಲ್ಲಿ, ಜಿಲ್ಲಾಧಿಕಾರಿ ಮಟ್ಟದಲ್ಲಿ ಅಥವಾ ಸರ್ಕಾರದ ಮಟ್ಟದಲ್ಲಿಯೇ ಕಾನೂನು ಕ್ರಮ ಜರುಗಿಸಲು ಅವಕಾಶ ಇದೆ ಎಂದು ಹೇಳಿದ್ದಾರೆ.

ಕಳೆದ 6 ತಿಂಗಳ ಹಿಂದೆಯೇ ಭಾರತಕ್ಕೆ ವಿದೇಶಿ ಕಾಳುಮೆಣಸು ಆಮದಾಗುತ್ತಿರುವ ಕುರಿತು ಉಪಾಸಿ( ದಕ್ಷಿಣ ಭಾರತ ಸಂಯುಕ್ತ ಬೆಳೆಗಾರರ ಒಕ್ಕೂಟ) ಆತಂಕ ವ್ಯಕ್ತಪಡಿಸಿತ್ತು. ಆಮದು ಶುಲ್ಕ ಹೆಚ್ಚಳ ಮಾಡುವ ಮೂಲಕ ಕೇಂದ್ರ ನಿಯಂತ್ರಣಕ್ಕೆ ಮುಂದಾಗಿತ್ತು. ಇದೀಗ ರಾಜ್ಯ ಸರ್ಕಾರದ ಬಳಿ ಕಲಬೆರಕೆ ನಿಯಂತ್ರಣ ಕಾಯ್ದೆ ಅಸ್ತ್ರ ಇದೆ ಪ್ರಯೋಗ ಮಾಡಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಂಜು ಚಿಣ್ಣಪ್ಪ ಆರೋಪ

ಯುಕೋ ಸಂಘಟನೆಯ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರು, ಈ ಹಿಂದೆ ಭಾರತಕ್ಕೆ ಕೋಳಿಮಾಂಸ ಆಮದು ಸಂದರ್ಭ ಕೆಂಟಕಿ ಚಿಕನ್ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಹೋರಾಟ ನಡೆದಿತ್ತು. ಇದೀಗ ಕಾಳುಮೆಣಸು ವಿಚಾರದಲ್ಲಿ ಅಂತಹದ್ದೇ ಉಗ್ರ ಸ್ವರೂಪದ ಹೋರಾಟ ಮಾಡಬೇಕಾಗಿದೆ ಎಂದರು. ವಿಯಟ್ನಾಂ ಕಾಳುಮೆಣಸು ನೇರವಾಗಿ ಭಾರತಕ್ಕೆ ಬರಲಿಲ್ಲ. ಶ್ರೀಲಂಕಾಗೆ ಬಂದು ಕೇವಲ ಶೇ.8 ಆಮದು ಸುಂಕ ಪಾವತಿಸಿ ಭಾರತಕ್ಕೆ ತರಲಾಗಿದೆ. ಈ ಬಗ್ಗೆಯೂ ತನಿಖೆಯಾಗಬೇಕಾಗಿದೆ ಎಂದು ಹೇಳಿದರು.

ತನಗೆ ಅಧಿಕಾರವಿಲ್ಲ-ತಹಶೀಲ್ದಾರ್

‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ವೀರಾಜಪೇಟೆ ತಹಶೀಲ್ದಾರ್ ಗೋವಿಂದರಾಜು ಅವರು ಎಪಿಎಂಸಿ ಚುನಾವಣೆ ಸಂದರ್ಭ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಬಹುದು. ಆಡಳಿತ ಮಂಡಳಿ ಅವಧಿ ಮುಗಿದ ಸಂದರ್ಭ ಆಡಳಿತಾಧಿಕಾರಿಯಾಗಿ ಎಪಿಎಂಸಿ ಚಟುವಟಿಕೆಯಲ್ಲಿ ಹಸ್ತಕ್ಷೇಪ ಮಾಡಬಹುದಿತ್ತು. ಇದೀಗ ತನಗೆ ಆಡಳಿತ ಮಂಡಳಿ ವಿರುದ್ಧ ಕ್ರಮ ಜರುಗಿಸಲು, ಹಸ್ತಕ್ಷೇಪ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಗೋದಾಮಿನಲ್ಲಿ ಕಾಳುಮೆಣಸು ಕಲಬೆರಕೆ ಬಗ್ಗೆ ವೀರಾಜಪೇಟೆ ಡಿವೈಎಸ್‍ಪಿ ನಾಗಪ್ಪ ಅವರ ನೇತೃತ್ವದಲ್ಲಿ ಮಹಜರು, ಪಂಚನಾಮೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

- ಟಿ.ಎಲ್.ಶ್ರೀನಿವಾಸ್