ಭಾಗಮಂಡಲ, ಸೆ. 12: ಭಾಗಮಂಡಲ ಸಂಗಮ ಕ್ಷೇತ್ರ ಮತ್ತು ತಲಕಾವೇರಿ ಸನ್ನಿಧಿಯಲ್ಲಿ ಅಪರೂಪದ ಉತ್ಸವ - ಸಂಭ್ರಮಾಚರಣೆ ನಡೆಯಿತು. ಹನ್ನೆರಡು ವರ್ಷಗಳಿಗೊಮ್ಮೆ ಆಚರಿಸುವ ಈ ಪುಷ್ಕರ ಉತ್ಸವದಲ್ಲಿ ಬಹುತೇಕ ಆಂಧ್ರದಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡರು. ಬಳಿಕ ಅವರೊಂದಿಗೆ ಸ್ಥಳೀಯರು ಸೇರಿಕೊಂಡರು.ಬೃಹಸ್ಪತಿ ಅಥವಾ ಗುರುಗ್ರಹ ತುಲಾ ರಾಶಿಯನ್ನು ಪ್ರವೇಶಿಸುವ ಪುಣ್ಯ ಮುಹೂರ್ತ ಇಂದು ಬೆಳಿಗ್ಗೆ 6.30ಕ್ಕೆ ಸನ್ನಿಹಿತವಾಯಿತು. ಆ ಸಂದರ್ಭ ಕಾವೇರಿ ನದಿಯಲ್ಲಿ ಸ್ನಾನ ಮಾಡಿದರೆ, ಪುಣ್ಯ ದ್ವಿಗುಣವಾಗುವದೆನ್ನುವ ನಂಬಿಕೆಯಿದೆ. ಅಲ್ಲದೆ ದಾನ - ಧರ್ಮವನ್ನು ಮಾಡುವ ರೂಢಿಯಿದೆ. ಆಂಧ್ರದ ಸುದ್ದಿ ಮಾಧ್ಯಮಗಳಲ್ಲಿ ಈ ಕುರಿತು ಹೆಚ್ಚು ಪ್ರಚಾರವಾದುದರಿಂದ ಬಹುತೇಕ ತೆಲಂಗಾಣ ಮತ್ತು ಆಂಧ್ರಪ್ರದೇಶದ ಭಕ್ತಾದಿಗಳು ನೂರಾರು ವಾಹನಗಳಲ್ಲಿ ಅಧಿಕ

(ಮೊದಲ ಪುಟದಿಂದ) ಸಂಖ್ಯೆಯಲ್ಲಿ ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಿಗೆ ಆಗಮಿಸಿದರು. ವಿಶೇಷವಾಗಿ ಪಿತೃಗಳಿಗೆ ಸಾಮೂಹಿಕ ಪಿಂಡ ಪ್ರದಾನ ಮಾಡುವ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಮುತ್ತೈದೆಯರಿಗೆ ಸೀರೆಗಳನ್ನು ನೀಡುವ ಕಾರ್ಯಕ್ರಮವು ವಿಶೇಷವೆನಿಸಿತು. ಅಲ್ಲದೆ ಮಹಿಳೆಯರು ತುಪ್ಪದ ದೀಪಗಳನ್ನು ಕಾವೇರಿ ನದಿಗೆ ಬಿಡುತ್ತಿರುವ ದೃಶ್ಯ ಮನಮೋಹಕವೆನಿಸಿತು. ಅಲ್ಲದೆ ಕಿರು ಶಿವಲಿಂಗಗಳನ್ನು ತಂದು ನದಿ ನೀರನ್ನು ಅಭಿಷೇಕ ಮಾಡುತ್ತಿದ್ದ ದೃಶ್ಯವೂ ಕಂಡು ಬಂದಿತು. ಇಂದು ದಿಢೀರಾಗಿ ಯಾತ್ರಾರ್ಥಿಗಳ ಅಧಿಕ ಸಂಖ್ಯೆಯ ಆಗಮನವನ್ನು ಕಂಡು ಸ್ಥಳೀಯರು ಕೂಡ ಕುತೂಹಲಭರಿತರಾಗಿದ್ದರು. ಪುಷ್ಕರ ಉತ್ಸವದ ಮಾಹಿತಿ ಪಡೆದ ಬಳಿಕ ಸ್ಥಳೀಯರು ಕೂಡ ಇದರಲ್ಲಿ ಪಾಲ್ಗೊಂಡರು. ಈ ಉತ್ಸವವು 12 ದಿನಗಳವರೆಗೆ ನಡೆಯಲಿದೆ. ಈ ದಿನಗಳಲ್ಲಿ ಆಂಧ್ರದಿಂದ ಅಧಿಕ ಸಂಖ್ಯೆಯಲ್ಲಿ ನಿತ್ಯವೂ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಆಂಧ್ರದ ದೃಶ್ಯ ಮಾಧ್ಯಮವೊಂದು ಈ ಉತ್ಸವವನ್ನು ಚಿತ್ರೀಕರಣ ಮಾಡುತ್ತಿದ್ದುದು ಕಂಡು ಬಂದಿತು.