ಗೋಣಿಕೊಪ್ಪಲು,ಸೆ.12: ಶ್ರೀ ಕೃಷ್ಣ ಜಯಂತಿಯ ಅಂಗವಾಗಿ ಪುಟಾಣಿಗಳು, ಕಿರಿಯರು, ಹಿರಿಯರು ಇಂದು ಕೃಷ್ಣ-ರಾಧೆಯರಾಗಿ, ದೇವಾನುದೇವತೆಗಳಾಗಿ ಕೆ.ಬಾಡಗ, ಕೇಂಬುಕೊಲ್ಲಿ, ಕುಟ್ಟ ಮುಖ್ಯರಸ್ತೆಯ ಇಕ್ಕೆಲಗಳಲ್ಲಿಯೂ ಕುತೂಹಲ ಭರಿತರಾಗಿ ನೋಡುತ್ತಿದ್ದ ಸಾರ್ವಜನಿಕರಿಗೆ ಮುದ ನೀಡಿದರು. ಕುಟ್ಟ ಶ್ರೀ ಕೃಷ್ಣ ಜಯಂತಿ ಆಚರಣಾ ಸಮಿತಿ, ಶ್ರೀ ಕೃಷ್ಣ ದೇವಸ್ಥಾನ ಟೃಸ್ಟ್, ಶ್ರೀ ಕೃಷ್ಣ ಉತ್ಸವ ಸಮಿತಿ, ಕೆ.ಬಾಡಗ-ಕೇಂಬುಕೊಲ್ಲಿ ಶ್ರೀ ಕೃಷ್ಣ ಜಯಂತಿ ಸೇವಾ ಸಮಿತಿ ಆಶ್ರಯದಲ್ಲಿ ಅದ್ಧೂರಿಯ ಕೃಷ್ಣ ಜಯಂತಿ ಕಾರ್ಯಕ್ರಮ ಜರುಗಿತು.

ಕೇಂಬುಕೊಲ್ಲಿಯಿಂದ ಇದೇ ಪ್ರಥಮ ಬಾರಿಗೆ ಅಲ್ಲಿನ ಸೇವಾ ಸಮಿತಿ ಆಶ್ರಯದಲ್ಲಿ ಆಯೋಜಿಸಿದ ಶೋಭಾಯಾತ್ರೆ ಚಿತ್ತಾಕರ್ಷಕವಾಗಿದ್ದು, ಜನ ಮನ ಸೂರೆಗೊಂಡಿತು. ಶಾಸಕ ಕೆ.ಜಿ.ಬೋಪಯ್ಯ ಶೋಭಾಯಾತ್ರೆಗೆ ಚಾಲನೆ ನೀಡಿ ಶುಭಕೋರಿದರು. ಕೇರಳ ಮಾನಂದವಾಡಿ ಸಮೀಪ ವೆಳ್ಳಮುಂಡದ ಸ್ತ್ರೀ ಶಕ್ತಿ ಮಹಿಳೆಯರ ಚಂಡೆವಾದ್ಯ, ಆದಿವಾಸಿ ಗಿರಿಜನ ಯುವಕ ಯುವತಿಯರ ನೃತ್ಯ, ಕಲಶ ಹೊತ್ತ ಮಹಿಳೆಯರು, ಶ್ರೀ ಕೃಷ್ಣ ಹಾಗೂ ಕಾಳಿಂಗ ಸರ್ಪದ ವಿಶೇಷ ತಯಾರಿ, ಸ್ತಬ್ಧಚಿತ್ರಗಳು ಗಮನಸೆಳೆದವು. ಸುಮಾರು ನಾಲ್ಕು ಕಿ.ಮೀ. ಕ್ರಮಿಸಿದ ಶೋಭಾಯಾತ್ರೆ ಕುಟ್ಟ ನಗರದಲ್ಲಿರುವ ಶ್ರೀ ಕೃಷ್ಣ ದೇವಸ್ಥಾನ ಮುಂಭಾಗ ಅಂತ್ಯವಾಯಿತು. ದಾರಿಯುದ್ದಕ್ಕೂ ಧ್ವನಿವರ್ಧಕದಲ್ಲಿ ಮಹಾಭಾರತದ ಕಥಾಭಾಗವನ್ನು ಪ್ರಸಾರ ಮಾಡಲಾಯಿತು.

ಶ್ರೀ ಕೃಷ್ಣ ದೇವಸ್ಥಾನ ಆವರಣದಲ್ಲಿ ಕೃಷ್ಣ-ರಾಧೆ ಛದ್ಮವೇಷದ ಸ್ಪರ್ಧೆಯನ್ನೂ ಆಯೋಜಿಸಲಾಗಿತ್ತು. ದೇವಸ್ಥಾನ ಆವರಣದಲ್ಲಿ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ, ಬೆಳಗ್ಗಿನ ಉಪಹಾರ ಹಾಗೂ ಸಾಮೂಹಿಕ ಭೋಜನ ಏರ್ಪಡಿಸಲಾಗಿತ್ತು.

ಪ್ರಥಮ ವರ್ಷದ ಶೋಭಾಯಾತ್ರೆಯ ಉಸ್ತುವಾರಿಯನ್ನು ಕೆ.ಬಾಡಗ-ಕೇಂಬುಕೊಲ್ಲಿ ಶ್ರೀ ಕೃಷ್ಣ ಜಯಂತಿ ಸೇವಾ ಸಮಿತಿಯ ಪ್ರಮುಖರಾದ ಪೆಮ್ಮಣಮಾಡ ನವೀನ್ ವಹಿಸಿದ್ದರು. ಕೆ.ಬಾಡಗ ಸ್ತ್ರೀ ಶಕ್ತಿ ಗುಂಪು, ಜೋಯ್ ಜೋಯಪ್ಪ, ಸುನಿ, ಪಿ.ಬಿ. ರಮೇಶ್, ರಾಜ ಜಿ.ಎಸ್. ಅನಿಲ್ ಮುಂತಾದವರು ಸಹಕರಿಸಿದರು.

ಕುಟ್ಟ ಶ್ರೀ ಕೃಷ್ಣ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ವಿ.ಟಿ. ಗೋಪಾಲ್ ಹಾಗೂ ಕಾರ್ಯದರ್ಶಿ ಕೆ.ಬಿ.ಗಿರೀಶ್ ನೇತೃತ್ವದಲ್ಲಿ ದೇವಾಲಯದಲ್ಲಿ ಬೆಳಿಗ್ಗೆ 8 ಗಂಟೆಯಿಂದಲೇ ಗಣಪತಿ ಹೋಮ, ಮಕ್ಕಳ ಛದ್ಮವೇಷ ಸ್ಪರ್ಧೆ, ಅಲಂಕೃತ ಮಂಟಪದಲ್ಲಿ ಶ್ರೀ ಕೃಷ್ಣನ ಮೆರವಣಿಗೆ, 11 ಗಂಟೆಗೆ ಸಾಮೂಹಿಕ ಸತ್ಯನಾರಾಯಣ ಪೂಜೆ ವಿದ್ಯುಕ್ತವಾಗಿ ಜರುಗಿದವು. ಪ್ರಮುಖರಾದ ಎಂ.ಕೆ.ಮಂದಣ್ಣ, ಹೊಟ್ಟೇಂಗಡ ತಿಮ್ಮಯ್ಯ, ಶಿಬು, ಸದಾ, ಮೋಹನ್ ಸಿನೋಜ್ ಮತ್ತು ಸ್ನೇಹಿತರ ಸಹಕಾರದಲ್ಲಿ ಅದ್ಧೂರಿ ಕೃಷ್ಣ ಜಯಂತಿ ಆಚರಣೆ ನೆರವೇರಿತು. ಮಧ್ಯಾಹ್ನ ಭೋಜನ ವ್ಯವಸ್ಥೆಯನ್ನು ಆಚರಣಾ ಸಮಿತಿ ಅಧ್ಯಕ್ಷ ವಿ.ಟಿ.ಗೋಪಾಲ್ ಪ್ರಾಯೋಜಿಸಿದ್ದರು.

ವರದಿ: ಟಿ.ಎಲ್.ಶ್ರೀನಿವಾಸ್