ಮಡಿಕೇರಿ, ಸೆ. 11: ದಿನನಿತ್ಯ ಸಮಾಜದ ಜಂಜಾಟದಲ್ಲಿ ಸುದ್ದಿಯ ಬೆನ್ನಟ್ಟಿ ಓಡುತ್ತಾ..., ವಿಶೇಷ ವಿಚಾರಗಳಲ್ಲಿ ಜಗ್ಗಾಡುತ್ತಾ..., ಪೆನ್ನು, ಕ್ಯಾಮರಾಗಳ ಹಿಡಿದು ಒತ್ತಡದ ಲ್ಲಿರುವ ಪತ್ರಕರ್ತರು ದಿನವಿಡೀ ಕೆಸರು ಗದ್ದೆಯಲ್ಲಿ ಓಡಾಡಿ.., ಹಗ್ಗ ಜಗ್ಗಾಡಿ.., ಹ್ಯಾಂಡ್‍ಬಾಲ್ ಆಟವಾಡಿ ಕೆಸರಿನಲ್ಲಿ ಮಿಂದೆದ್ದು, ಗೆದ್ದು ಸಂಭ್ರಮಿಸಿದರು.ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಆಶ್ರಯದಲ್ಲಿ ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮದ ಬಲ್ಲಚಂಡ ರಂಜನ್ ಬಿದ್ದಪ್ಪ ಅವರ ಗದ್ದೆಯಲ್ಲಿ ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ 80ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ವಯಸ್ಸಿನ ಮಿತಿಯಿಲ್ಲದೆ 20ರಿಂದ ಹಿಡಿದು 50 ದಾಟಿದ ಪತ್ರಕರ್ತರು ಉತ್ಸಾಹದಿಂದ ಆಟವಾಡಿದರು. ರೋಚಕತೆಯ ಗ್ರಾಮೀಣ ಕ್ರೀಡೆ ಆಗಿರುವ ಹಗ್ಗ ಜಗ್ಗಾಟದಲ್ಲಿ ಹಗ್ಗ ಹಿಡಿದು ಜಗ್ಗಿದರು. ಯಾವದೇ ಅನುಭವ, ಅಭ್ಯಾಸ ಇಲ್ಲದಿದ್ದರೂ ಇದೇ ಪ್ರಥಮ ಬಾರಿಯಾದರೂ ಹ್ಯಾಂಡ್‍ಬಾಲ್ ಆಟದಲ್ಲಿ ನುರಿತ ಆಟಗಾರರಂತೆ ಆಡಿ ನಲಿದರು. ಕೆಸರಿನಲ್ಲೇ ಬಿದ್ದು, ಎದ್ದು ಓಡಿದರು. ಕೆಸರಿನಲ್ಲೇ ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು. ಗದ್ದೆಯಲ್ಲಿಯೇ ಸಾಮೂಹಿಕ ಭೋಜನ ಮಾಡಿ ಹಳ್ಳಿಗಾಡಿನ ಅನುಭವ ಪಡೆದುಕೊಂಡರು.ನೀರಿನ ಸಿಂಚನ: ಕೆಸರುಗದ್ದೆ ಸ್ಪರ್ಧೆ ಆಯೋಜಿಸಿದ ಗದ್ದೆ ಸಮೀಪದಲ್ಲಿಯೇ ಇದ್ದ ಕೆರೆ ಬದಿಯಲ್ಲಿ ಕೃತಕ ಜಲಪಾತ ಸೃಷ್ಟಿಸಲಾಗಿತ್ತು. ಕೆರೆಯಿಂದ ಮೋಟಾರ್, ಪೈಪ್ ಮೂಲಕ ನೀರು ಹಾಯಿಸಿ, ಮರದಿಂದ ಬೀಳುವಂತೆ ಮಾಡಲಾಗಿತ್ತು. ಕೆಸರುಮೆತ್ತಿಕೊಂಡಿದ್ದ ಪತ್ರಕರ್ತರು ಮರದ ಮೇಲಿಂದ ಬೀಳುತ್ತಿದ್ದ ನೀರಿನಲ್ಲಿ ಜಳಕ ಮಾಡಿದರು.

ಸ್ಪರ್ಧಾ ವಿಜೇತರು

ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ವಿಜಯವಾಣಿ ವರದಿಗಾರ ಪಳೆಯಂಡ ಪಾರ್ಥ ಚಿಣ್ಣಪ್ಪ (40 ವರ್ಷ ಮೇಲ್ಪಟ್ಟ ವಿಭಾಗ), ಆದರ್ಶ್ ಅದ್ಕಲೇಗಾರ್ (40 ವರ್ಷದೊಳಗೆ) ಪ್ರಥಮ ಬಹುಮಾನ ಪಡೆದರು.

40 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಅಮ್ಮಣಿಚಂಡ ಪ್ರವೀಣ್ ಚಂಗಪ್ಪ (ಬ್ರಹ್ಮಗಿರಿ- ದ್ವಿ), ಟಿ.ಎನ್. ಮಂಜುನಾಥ್ (ಕನ್ನಡಪ್ರಭ- ತೃ), 40 ವರ್ಷದೊಳಗಿನ ವಿಭಾಗದಲ್ಲಿ ದಿವಾಕರ್ ಜಾಕಿ (ದಿಗ್ವಿಜಯ ನ್ಯೂಸ್- ದ್ವಿ), ಮನೋಜ್ (ಸುದ್ದಿ- ತೃ) ಬಹುಮಾನ ಪಡೆದರು.

ಹ್ಯಾಂಡ್‍ಬಾಲ್ ಫೈನಲ್ ಪಂದ್ಯದಲ್ಲಿ ವೀರಾಜಪೇಟೆ ಟೈಗರ್ಸ್ ತಂಡ 6-2 ಗೋಲುಗಳಿಂದ ಮಡಿಕೇರಿ ಪಾಂಬು ತಂಡವನ್ನು ಮಣಿಸಿ ಪ್ರಥಮ ಬಹುಮಾನ ಪಡೆಯಿತು. ಪಳೆಯಂಡ ಪಾರ್ಥ ಚಿಣ್ಣಪ್ಪ (ವಿಜಯವಾಣಿ) ನಾಯಕತ್ವದ ತಂಡದಲ್ಲಿ ಹೇಮಂತ್‍ಕುಮಾರ್ (ಪ್ರಜಾವಾಣಿ), ಪ್ರವೀಣ್ ಚಂಗಪ್ಪ (ಬ್ರಹ್ಮಗಿರಿ), ಲೋಹಿತ್ ಗೌಡ (ವಿಶ್ವವಾಣಿ), ರವಿಕುಮಾರ್ (ಟಿ.ವಿ1), ಯುವರಾಜ ಕೃಷ್ಣ (ಟಿವಿ 24), ಕಿಶೋರ್ ಶೆಟ್ಟಿ (ಸಂಯುಕ್ತ ಕರ್ನಾಟಕ) ಇದ್ದರು.