ಸೋಮವಾರಪೇಟೆ,ಸೆ.11: ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದಿಂದ ಜಿಲ್ಲೆಯಲ್ಲಿ ತುಳು ಭಾಷಿಕರಿಗೆ ಹೆಚ್ಚಿನ ಅನುಕೂಲ ಹಾಗೂ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ಉದ್ದೇಶದಿಂದ ತುಳುವೆರ ಸಹಕಾರ ಸಂಘವನ್ನು ಸ್ಥಾಪಿಸುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು.

ತಾಲೂಕು ತುಳುವೆರ ಜನಪದ ಕೂಟದ ಅಧ್ಯಕ್ಷ ಕೆ.ಪಿ. ದಿನೇಶ್ ಅಧ್ಯಕ್ಷತೆಯಲ್ಲಿ ಇಲ್ಲಿನ ಸಫಾಲಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕು ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು.

ದಕ್ಷಿಣ ಕನ್ನಡ ಮೂಲದ ತುಳು ಭಾಷಿಕರು ಕೊಡಗಿನಲ್ಲಿ ಹೆಚ್ಚಿದ್ದು, ಇವರುಗಳನ್ನು ಸಂಘಟಿಸಿ ತುಳು ಭಾಷೆ, ಸಾಹಿತ್ಯ, ಪದ್ದತಿ ಪರಂಪರೆ, ಆಚಾರ, ವಿಚಾರ, ಸಂಸ್ಕøತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವದೂ ಸೇರಿದಂತೆ ತುಳು ಭಾಷಿಕರಿಗೆ ಸಾಲ ಸೌಲಭ್ಯದೊಂದಿಗೆ ಹೆಚ್ಚಿನ ಆರ್ಥಿಕ ಸ್ವಾವಲಂಬನೆ ಕಲ್ಪಿಸುವ ನಿಟ್ಟಿನಲ್ಲಿ ಸಹಕಾರ ಸಂಘವನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಲಾಯಿತು.

ಇದರೊಂದಿಗೆ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಒಳಪಡಿಸಲು ಸಂಘಟನಾತ್ಮಕ ಹೋರಾಟ ನಡೆಸಲು ತೀರ್ಮಾನಿಸಲಾಯಿತು. ತುಳು ಭಾಷಿಕರನ್ನು ಇನ್ನಷ್ಟು ಸಂಘಟಿಸುವ ದೃಷ್ಟಿಯಿಂದ ಕ್ರೀಡಾಕೂಟಗಳನ್ನು ಆಯೋಜಿಸುವದು, ಸಂಘಟನೆಯನ್ನು ಗ್ರಾಮ, ಹೋಬಳಿ ಮಟ್ಟದಲ್ಲಿ ಶಕ್ತಿಯುತವನ್ನಾಗಿ ಮಾಡುವ ತೀರ್ಮಾನ ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ತುಳುವೆರ ಜನಪದ ಕೂಟದ ಜಿಲ್ಲಾ ಸಂಚಾಲಕ ಶ್ರೀಧರ್ ನೆಲ್ಲಿತ್ತಾಯ, ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ, ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಭು ರೈ, ವೀರಾಜಪೇಟೆ ತಾಲೂಕು ಅಧ್ಯಕ್ಷ ದಾಮೋದರ ಆಚಾರ್ಯ, ಜಿ.ಪಂ. ಮಾಜೀ ಅಧ್ಯಕ್ಷ ಬಿ. ಶಿವಪ್ಪ, ಆದಿದ್ರಾವಿಡ ಸಮಾಜದ ಸ್ಥಾಪಕಾಧ್ಯಕ್ಷ ಓಂಕಾರಪ್ಪ, ತಾಲೂಕು ಉಪಾಧ್ಯಕ್ಷೆ ಇಂದಿರಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಮಿತಿಯ ಪದಾಧಿಕಾರಿಗಳಾದ ಸಂತೋಷ್ ರೈ, ಸತೀಶ್‍ಕುಂದರ್, ಪ್ರಶಾಂತ್ ಬಿ.ಜಿ., ದಾಮೋದರ್ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.