ಮಡಿಕೇರಿ, ಸೆ. 12: ವಿಶ್ವವಿಖ್ಯಾತ ಮೈಸೂರು ದಸರಾದೊಂದಿಗೆ ಅದಕ್ಕೆ ಸರಿಸಾಟಿಯಾಗಿ ರಾತ್ರಿ ನಡೆಯುವ ಕಾರ್ಯಕ್ರಮದೊಂದಿಗೆ ಲಕ್ಷಾಂತರ ಜನರನ್ನು ಆಕರ್ಷಿಸುವ ಮಡಿಕೇರಿ ಜನೋತ್ಸವದ್ದು ವರ್ಷಂಪ್ರತಿ ಒಂದೊಂದು ರೀತಿಯ ಪಡಿಪಾಟಲು ಕಾಣುವದು ಸಹಜ ಎಂಬಂತಾಗಿದೆ. ನವರಾತ್ರಿ ಆರಂಭಕ್ಕೆ ಇನ್ನು ಉಳಿದಿರುವದು ಕೇವಲ ಎಂಟು ದಿನಗಳು ಮಾತ್ರ.

ವೈಭವಯುತ ದಸರಾ ಆಚರಣೆಗೆ ಕಾರ್ಯ ಯೋಜನೆ ರೂಪಿಸಲಾಗಿದ್ದು, ಸರಕಾರಕ್ಕೆ ರೂ. 1 ಕೋಟಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಕೇವಲ 30 ಲಕ್ಷ ಮಾತ್ರ ಘೋಷಣೆಯಾಗಿದೆ.

ದಸರಾ ಆಚರಣೆಗೆ ಸಾಕಷ್ಟು ಸಿದ್ಧತೆಗಳು ಅತ್ಯಗತ್ಯವಾಗಿದೆ. ಆದರೆ ದಸರಾ ಸಮೀಪಿಸುತ್ತಿದ್ದರೂ, ಮಂಜಿನ ನಗರಿಯಲ್ಲಿ ದಸರಾದ ಬಿರುಸುತನ ಇನ್ನೂ ಕಂಡುಬರುತ್ತಿಲ್ಲ. ಅಲ್ಪಾವಧಿಯಲ್ಲಿ ಇನ್ನೇನು ಆಗಬಹುದು ಎಂದು ಜನತೆ ಮಾತನಾಡಿಕೊಳ್ಳುವಂತಾಗಿದೆ.

ನಗರದ ರಸ್ತೆಗಳನ್ನು ಗಮನಿಸಿದರೆ ಮಂಟಪಗಳು ತೆರಳುವದಿರಲಿ ನಡೆದಾಡುವದೇ ಕಷ್ಟ ಎಂಬಂತಿದೆ. ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ಇದಕ್ಕೆ ರೂ. 4.50 ಲಕ್ಷ ಮೀಸಲಿಡಲಾಗಿದ್ದು, ತಾ. 12 ರಿಂದಲೇ ತುರ್ತು ಕೆಲಸ ಕೈಗೊಳ್ಳ ಲಾಗುವದು ಎಂದು ಸಮಿತಿ ಪದಾಧಿಕಾರಿಗಳು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಆದರೆ ನಗರಸಭಾ ಕಾರ್ಯಾಲ ಯದಿಂದ ತಾ. 9ರಂದು ಇದಕ್ಕೆ ಟೆಂಡರ್ ಕರೆಯಲಾಗಿದ್ದು, ಭರ್ತಿ ಮಾಡಿದ ಸೀಲ್ಡ್ ಟೆಂಡರ್‍ಗಳನ್ನು ಕಚೇರಿಗೆ ಸಲ್ಲಿಸುವ ಕೊನೆಯ ದಿನಾಂಕವಾಗಿದ್ದು, ಟೆಂಡರ್ ತೆರೆಯುವ ದಿನಾಂಕ ತಾ. 20ರಂದು ಸಂಜೆ 5 ಗಂಟೆ ಅಥವಾ ಸೂಚಿಸಿದ ದಿನದಂದು ಎಂದು ತೋರಿಸಲಾಗಿದೆ. ನಗರ ಸ್ವಚ್ಛತೆ, ಅಲಂಕಾರ, ಸುಣ್ಣ, ಬಣ್ಣ ಬಳಿಯುವದು ಇನ್ನಿತರ ಕಾಮಗಾರಿಗಳಿಗೂ ಟೆಂಡರ್ ಕರೆಯಲಾಗಿದ್ದು, ಇವುಗಳಿಗೂ ಅದೇ ಕೊನೆಯ ದಿನಾಂಕವಾಗಿದೆ.

ಟೆಂಡರ್ ಬಳಿಕ 7 ದಿವಸಗಳಲ್ಲಿ ಕಾಮಗಾರಿ ಪೂರೈಸಲು ಅವಧಿ ನೀಡಲಾಗಿದೆ. ಇದೀಗ ಅನುದಾನ ಕೊರತೆಯಾಗಿದ್ದು, ಕೆಲಸಗಳ ಮೇಲೆ ಪರಿಣಾಮ ಬೀಳಲಿದೆ. ತಾ. 21ರಂದು ಸಂಜೆ ಶಕ್ತಿ ದೇವತೆಗಳ ಕರಗ ಉತ್ಸವದೊಂದಿಗೆ ನವರಾತ್ರಿಗೆ ಚಾಲನೆ ದೊರೆಯಲಿದೆ. ಇದರೊಂದಿಗೆ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿದ್ದು, ಜನ-ವಾಹನ ದಟ್ಟಣೆಯೂ ಅಧಿಕವಾಗಲಿದೆ.

ವಿವಿಧ ಉಪಸಮಿತಿಗಳು ತಮ್ಮ ತಮ್ಮ ಸಮಿತಿಯ ಜವಾಬ್ದಾರಿ ನಿಭಾಯಿಸಲು ತಮ್ಮಷ್ಟಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಇನ್ನು ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ ಇರುವದು ದಶಮಂಟಪಗಳ ಶೋಭಾಯಾತ್ರೆ. ಈ ಶೋಭಾಯಾತ್ರೆಗೆ ಮಂಟಪ ತಯಾರಿಗೆ ಸಾಕಷ್ಟು ಪ್ರಯತ್ನದ ಅಗತ್ಯತೆ ಇದೆ. ಆಯಾ ದೇವಾಲಯ ಸಮಿತಿಯವರು ಇದಕ್ಕೆ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. ಕಥಾ ಸಾರಾಂಶಕ್ಕೆ ಅಗತ್ಯವಿರುವ ದೇವಿಯ ವಿಗ್ರಹಗಳು, ರಾಕ್ಷಸರ ಆಕೃತಿಗಳನ್ನು ಸಿದ್ಧತೆಯ ಸ್ಥಳಕ್ಕೆ ಸಾಗಿಸುವದು ಸೇರಿದಂತೆ ದೇವಾಲಯ ಸಮಿತಿಯವರೂ ತಮ್ಮಷ್ಟಕ್ಕೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ದಸರಾ ಅನುದಾನದ ಕೊರತೆ ದಶಮಂಟಪಗಳ ಮೇಲೂ ಪರಿಣಾಮ ಬೀರಲಿದ್ದು, ಸಮಿತಿ ಯವರೂ ಆತಂತಕ್ಕೆ ಒಳಗಾಗಿದ್ದಾರೆ.

ಆದರೆ ದೇವಾಲಯ ಸಮಿತಿ ಗಳು ಅಗತ್ಯ ತಯಾರಿ ಮಾಡಿ ಕೊಳ್ಳಲೇಬೇಕಾಗಿದ್ದು, ಅವರ ಪಾಡಿಗೆ ಈ ಕೆಲಸದಲ್ಲಿ ನಿರತರಾಗಿ ದ್ದಾರೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ಸತೀಶ್ ಧರ್ಮಪ್ಪ ತಿಳಿಸಿದ್ದಾರೆ.

ದೇಚೂರು ವಿಭಾಗದಿಂದ ನಿನ್ನೆಯಿಂದ ರಸ್ತೆ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್. ರಮೇಶ್ ಮಾಹಿತಿ ನೀಡಿದ್ದಾರೆ. ಸಮಯದ ಅಭಾವ, ಕಡಿಮೆ ಅನುದಾನ, ಇನ್ನೂ ಬಾರದ ಹಣ, ಮಳೆಯ ಪ್ರಭಾವ ಹೀಗೆ ಹಲವು ಅಡಚಣೆಗಳ ನಡುವೆಯೂ ದಸರಾ ಯಶಸ್ಸಾಗಲಿ ಎಂಬದು ಎಲ್ಲರ ಆಶಯ. -ಶಶಿ