ಮಡಿಕೇರಿ, ಸೆ. 12: ಭಾರತೀಯ ಸೇನೆಯಲ್ಲಿ ಕೊಡಗಿನ ಮಂದಿ ವಿಶೇಷವಾಗಿ ಗುರುತಿಸಿಕೊಂಡಿದೆ. ಇತ್ತೀಚಿನ ದಿನಗಳಲ್ಲಿ ಸೇನೆಗೆ ಸೇರ್ಪಡೆಗೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತಿದ್ದರೂ ಅಧಿಕಾರಿಗಳಾಗಿ ಹಲವರು ಗುರುತಿಸಿಕೊಳ್ಳುತ್ತಿದ್ದಾರೆ. ಇವರ ಸಾಲಿಗೆ ಇದೀಗ ಜಿಲ್ಲೆಯ ಇನ್ನಿಬ್ಬರು ಸೇರ್ಪಡೆಗೊಂಡಿದ್ದಾರೆ.

ಬಾರಿಕೆ ಲಿಷ್ಮಿತಾ ಹಾಗೂ ಚೋನೀರ ಗಾಯನ್ ಗಣಪತಿ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರುಗಳು ಲೆಫ್ಟಿನೆಂಟ್ ಆಗಿ ನೇಮಕಗೊಂಡರು.

ಜಿಲ್ಲೆಯ ಏಳೆಂಟು ಮಂದಿ ಯುವತಿಯರು ಮಾತ್ರ ಭಾರತೀಯ ಸೇನೆಯಲ್ಲಿ ಅಧಿಕಾರಿ ಹುದ್ದೆಯಲ್ಲಿದ್ದು, ಇವರ ಸಾಲಿಗೆ ಲಿಷ್ಮಿತಾ ಹೊಸ ಸೇರ್ಪಡೆಯಾಗಿದ್ದಾರೆ. ಈಕೆ ಮಡಿಕೇರಿಯ ಕಾವೇರಿ ಬಡಾವಣೆಯ ನಿವಾಸಿ ಕಾಫಿ ಮಂಡಳಿಯ ನಿವೃತ್ತ ಲೈಸನ್ ಆಫೀಸರ್ ಬಾರಿಕೆ ಅಯ್ಯಪ್ಪ ಹಾಗೂ ಬಿ.ಎಸ್.ಎನ್.ಎಲ್.ನ ಲೆಕ್ಕಾಧಿಕಾರಿ ರತ್ನಶೀಲಾ ದಂಪತಿಯ ಪುತ್ರಿ.

ಚೋನೀರ ಗಾಯನ್ ಗಣಪತಿ ಗೋಣಿಕೊಪ್ಪಲುವಿನ ಚೋನೀರ ಕೆ. ಸತ್ಯ ಹಾಗೂ ಆರತಿ ದಂಪತಿಯ ಪುತ್ರ.