ಮಡಿಕೇರಿ, ಸೆ. 12: ಮಡಿಕೇರಿಯ ನೆಹರು ಯುವ ಕೇಂದ್ರ, ತಾಲೂಕು ಯುವ ಒಕ್ಕೂಟ, ಸ್ನೇಹಿತರ ಯುವಕ ಸಂಘ, ಗಾಳಿಬೀಡು ಚಪ್ಪಂಡಕೆರೆ ಹಾಗೂ ವಲಯ ಗ್ರಾಮ ಅರಣ್ಯ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ನೇಹಿತರ ಯುವಕ ಸಂಘದ ಕಟ್ಟಡದಲ್ಲಿ ವನಮಹೋತ್ಸವ ಹಾಗೂ ಗಿಡಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಕೊಂಬಾರನ ಪಿ. ಗಣಪತಿ ವಹಿಸಿದ್ದರು. ಉಪ ವಲಯ ಅರಣ್ಯಾಧಿಕಾರಿ ವೈ.ಕೆ. ಜಗದೀಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅರಣ್ಯ ಪ್ರದೇಶವನ್ನು ಉಳಿಸುವ ಉದ್ದೇಶ ಹಾಗೂ ಅರಣ್ಯ ಇಲಾಖೆಯಿಂದ ದೊರಕುವ ಸೌಲಭ್ಯಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು.

ಗಾಳಿಬೀಡು ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಡಿ. ಸುಭಾಷ್ ಆಳ್ವ ಮಾತನಾಡಿದರು. ಇದೇ ಸಂದರ್ಭ ತಲಾ ಐದು ಗಿಡಗಳಂತೆ ಒಟ್ಟು ನೂರು ಅರಣ್ಯ ಗಿಡಗಳನ್ನು ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ವಿತರಿಸಿದರು.

ಯುವಕ ಸಂಘದ ಅಧ್ಯಕ್ಷ ಕೆ.ಎ. ಮೋಹನ್, ಗಾಳಿಬೀಡಿನ ದವಸ ಭಂಡಾರದ ಕಾರ್ಯದರ್ಶಿ ಕೆ.ಕೆ. ಗಣೇಶ್, ಅರಣ್ಯ ಸಮಿತಿಯ ಸದಸ್ಯರುಗಳು, ಸ್ನೇಹಿತರ ಯುವಕ ಸಂಘದ ಸದಸ್ಯರುಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.