ಮಡಿಕೇರಿ, ಸೆ. 11: ಸುಂಟಿಕೊಪ್ಪದ ‘ಸ್ವಸ್ಥ’ ವಿಶೇಷ ಶಿಕ್ಷಣ ಹಾಗೂ ಪುನರ್ವಸತಿ ಕೇಂದ್ರದ ವಿಶೇಷ ಚೇತನ ಮಕ್ಕಳಿಂದ ನಿನ್ನೆ ಆಯೋಜಿಸಿದ ಯುವ ಸೃಜನಶೀಲರ ಒಳನೊಳ್ಳುವಿಕೆಗೆ ಕಲೆ (ಎಸಳುಗಳು) ಎಂಬ ಕಾರ್ಯಕ್ರಮದಲ್ಲಿ ಅಪೂರ್ವ ಸುಮಗಳನ್ನು ಕಾಣುವಂತಾಯಿತು. ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಸಾಮಾನ್ಯ ಮಕ್ಕಳ ನಡುವೆ ‘ಸ್ವಸ್ಥ’ ಕೇಂದ್ರದ ವಿಶೇಷ ಮಕ್ಕಳು ಸೃಜನಾತ್ಮಕ ಕಲಾ ಸ್ಪಂದನ ಮೂಡಿಸುವಲ್ಲಿ ಸಾಫಲ್ಯದೊಂದಿಗೆ ಪ್ರೇಕ್ಷಕರ ಸಹಾನುಭೂತಿಗೆ ಪಾತ್ರರಾದರು.ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಲಾ ಭಾರತಿ ಬಳಗದ ಸಾಮಾನ್ಯ ಮಕ್ಕಳ ಜತೆಗೂಡಿ ಈ ಒಂದು ದಿನದ ಕಾರ್ಯಕ್ರಮದಲ್ಲಿ ತಮ್ಮ ಸುಪ್ತ ಪ್ರತಿಭೆಗಳನ್ನು ಚಿತ್ರಗಳಿಂದ ಮೂಡಿಸಿ ಬಣ್ಣದ ಲೋಕವನ್ನು ಸೃಷ್ಟಿಸಿದರು. ವಿಶೇಷ ಚೇತನ ಮಕ್ಕಳ ನಡುವಿನ ಈ ಸಂವೇದನೆಗಳ ಮಿಳಿತದ ಬಣ್ಣದ ಲೋಕದಲ್ಲಿ ನೂರಾರು ಮಂದಿ ಅಚ್ಚರಿಯ ನೋಟ ಹರಿಸಿದರು.

ಸಾಮಾನ್ಯ ಮಕ್ಕಳೊಂದಿಗೆ ವಿಶೇಷ ಚೇತನ ಮಕ್ಕಳು ಒಗ್ಗೂಡಿ ಏಕೀಕರಣ ಭಾವದಿಂದ ಸುಂದರ ಕಲೆಗಳನ್ನು ಹೊರಹೊಮ್ಮುವಂತೆ ಎಳೆಯ ಮನಗಳ ಸಾಮಥ್ರ್ಯವನ್ನು ಕುಂಚಗಳಿಂದ ಕೃತಿ ರೂಪದಲ್ಲಿ ಪ್ರಚುರಪಡಿಸಿದರು. ಈ ಸುಂದರ ಪುಷ್ಪ ಲೋಕವನ್ನು ಸಾರ್ವಜನಿಕರು, ವಿಶೇಷ ಮಕ್ಕಳ ಹೆತ್ತವರು ಪ್ರತ್ಯಕ್ಷ ಎದುರುಗೊಂಡು ಆನಂದ ತುಂದಿಲರಾದರು.

ಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ಕಲಾ ಭಾರತಿ ಶಿಕ್ಷಕ ಪ್ರಸನ್ನ, ಟಾಟಾ ಕಾಫಿ ಸಂಸ್ಥೆಯ ನಿರ್ದೇಶಕ ಪಿ.ಬಿ. ಚಂಗಪ್ಪ, ಸ್ವಸ್ಥ ನಿರ್ದೇಶಕಿ ಗಂಗಾ ಚಂಗಪ್ಪ, ಉಪ ನಿರ್ದೇಶಕಿ ಆರತಿ ಸೋಮಯ್ಯ ಮೊದಲಾದವರು ಪಾಲ್ಗೊಂಡು ವಿಶೇಷ ಮಕ್ಕಳನ್ನು

(ಮೊದಲ ಪುಟದಿಂದ) ಕೇವಲ ಅನುಕಂಪದಿಂದ ನೋಡದೆ ಸಮಾಜದ ಇತರ ಮಕ್ಕಳಂತೆ ಸಮಾನತೆಯಿಂದ ನೋಡುವ ಗುಣ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.

ವಿಶೇಷ ಚೇತನರ ಕುಂಚಗಳಿಂದ ಅರಳಿರುವ ಕಲಾ ಪ್ರಪಂಚದ ಸುಮಗಳು ನೈಜ ಪುಷ್ಪರಾಶಿಯ ಎಸಳುಗಳಂತೆ ರೂಪುಗೊಂಡಿದ್ದು, ಅವು ಎಂದಿಗೂ ಬಾಡದ ಸುಮಗಳಂತೆ ಎಂದು ಬಣ್ಣಿಸಿದರು. ಹಾಲೇರಿಯ ರಾಂ ಗೌತಂ ಸುಬ್ರಮಣ್ಯ ಈ ಕಲಾ ಶಿಬಿರದ ಉಸ್ತುವಾರಿ ನಿರ್ವಹಿಸಿದರು. ಮಲ್ಟಿಮೀಡಿಯಾದ ತಮ್ಮು ಪೂವಯ್ಯ, ಕುಶಾಲನಗರದ ನರೇಂದ್ರ ಹೆಬ್ಬಾರ್, ಸಂಪಾಜೆಯ ಕೆ.ಎಸ್. ಬೆಳ್ಯಪ್ಪ ಶಿಬಿರಕ್ಕೆ ಪ್ರಾಯೋಜಕತ್ವ ನೀಡಿದರು. ‘ಸ್ವಸ್ಥ’ ಸಂಸ್ಥೆಯ ಮುರುಗೇಶ್ ಸ್ವಾಗತಿಸಿ, ಕೊಡಗು ವಿದ್ಯಾಲಯದ ಅನುಶ್ರೀ ಪ್ರಾರ್ಥಿಸಿ, ರೇಖಾ ವಂದಿಸಿದರು.ಇತ್ತೀಚೆಗೆ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿರುವ ಕೊಡಗು ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರಿಗೆ ನಿನ್ನೆ ಸುಂಟಿಕೊಪ್ಪದ ಸ್ವಸ್ಥ ಸಂಸ್ಥೆಯಿಂದ ಗೌರವ ಸನ್ಮಾನ ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜೇಂದ್ರ ಪ್ರಸಾದ್, ಕೊಡಗಿನಲ್ಲಿ ಸೇವೆ ಸಂದರ್ಭ ಲಭಿಸಿದ ಈ ರಾಷ್ಟ್ರಪತಿ ಪದಕವನ್ನು ಇಲಾಖೆಯ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿ ಸಹಿತ ನಾಡಿನ ಜನತೆಗೆ ದೊರೆತ ಗೌರವವೆಂದು ಪರಿಗಣಿಸಿರುವದಾಗಿ ತಿಳಿಸಿದರು.

ಪೊಲೀಸ್ ವೃತ್ತಿಗೆ ಬರುವ ಮುನ್ನ ಅನೇಕ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ 12 ವರ್ಷ ಸೇವೆ ಸಲ್ಲಿಸಿದ್ದನ್ನು ಸ್ಮರಿಸಿಕೊಂಡ ಅವರು, ಓರ್ವ ಪೇದೆಯಿಂದ ಪೊಲೀಸ್ ಮಹಾ ನಿರ್ದೇಶಕರ ತನಕ ಇಲಾಖೆಯಲ್ಲಿ ಎಲ್ಲರ ಸಾಮಥ್ರ್ಯವನ್ನು ಸಮಾನ ಗೌರವದಿಂದ ಕಾಣಲಾಗುವದು ಎಂದರು. ಅಂತೆಯೇ ಸಮಾಜದಲ್ಲಿ ಸಾಮಾನ್ಯ ನಾಗರಿಕರಂತೆ ಎಲ್ಲ ವಿಶೇಷ ಚೇತನರನ್ನೂ ಸಹಾನುಭೂತಿಯಿಂದ ಕಾಣುವಂತೆ ತಿಳಿ ಹೇಳಿದರು.