ಮಡಿಕೇರಿ, ಸೆ.13: ಜಿಲ್ಲೆಯ ನಾಲ್ವರು ಶಿಕ್ಷಕರಿಗೆ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ನೇಷನ್ ಬಿಲ್ಡರ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಡಿಕೇರಿಯ ರೋಟರಿ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ.ತೀತಿರ ರೇಖಾ ವಸಂತ್ (ಸಾಹಿತ್ಯ), ಸುಂಟಿಕೊಪ್ಪ ಪ್ರೌಢಶಾಲಾ ಶಿಕ್ಷಕ ಟಿ.ಜಿ. ಪ್ರೇಮ್ ಕುಮಾರ್ (ಪರಿಸರ), ನೆಲಜಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಿ.ಎಸ್. ಸುರೇಶ್ (ಗಣಿತ), ಮತ್ತು ಸುಂಟಿಕೊಪ್ಪ ಪ್ರಾಥಮಿಕ ಶಾಲೆಯ ಕ್ರೀಡಾ ಶಿಕ್ಷಕ ಪಾಸುರ ನಂದಾ ಅವರನ್ನು ನೇಷನ್ ಬಿಲ್ಡರ್ರ್ಸ್ ಪ್ರಶಸ್ತಿ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಡಾ.ತೀತಿರ ರೇಖಾ ವಸಂತ್, ಶಿಕ್ಷಣ ವ್ಯವಸ್ಥೆ ಹಾಳಾದರೆ ಇಡೀ ದೇಶವೇ ಹಾಳಾದಂತೆ. ಪ್ರಸ್ತುತ ದಿನಗಳಲ್ಲಿ ಭಾರತವನ್ನು ವಿವಿಧ ರೀತಿಯಲ್ಲಿ ಹಾಳುಗೆಡಹುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಇಂಥ ಪರಿಸ್ಥಿತಿಯಲ್ಲಿ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಮಹತ್ವದ ಹೊಣೆಯ ಸವಾಲನ್ನು ಶಿಕ್ಷಕರು ಎದುರಿಸುತ್ತಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಟಿ.ಜಿ. ಪ್ರೇಮ್ ಕುಮಾರ್, ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಮತ್ತಷ್ಟು ಜಾಗೃತಿ ಮೂಡಿಸುವ ಮೂಲಕ ಉಳಿದಿರುವ ನಿಸರ್ಗ ರಕ್ಷಣೆಗೆ ಮಕ್ಕಳನ್ನು ಅಣಿಗೊಳಿಸಬೇಕಾಗಿದೆ. ಒಗ್ಗಟ್ಟಿನಿಂದ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಕಾರ್ಯಗಳು ಆಂದೋಲನ ರೂಪದಲ್ಲಿ ಕಾರ್ಯಗತ ಗೊಳ್ಳಬೇಕೆಂದು ಹೇಳಿದರು.

ಶಿಕ್ಷಕ ಸಿ.ಎಸ್. ಸುರೇಶ್ ಮಾತನಾಡಿ, ಗಣಿತ ಪಠ್ಯ ಕಬ್ಬಿಣದ ಕಡಲೆಕಾಯಿ ಎಂಬಂತಿರುವಾಗ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗಣಿತ ವಿಷಯದ ಆಧಾರದಲ್ಲಿಯೇ ಆಯಾ ಶಾಲೆಗಳ ಫಲಿತಾಂಶ ನಿಂತಿರುತ್ತದೆ. ಹೀಗಿರುವಾಗ ಶಾಲೆಯಲ್ಲಿ ಗಣಿತ ಶಿಕ್ಷಕರು ಮಹತ್ವದ ಪಾತ್ರ ನಿರ್ವಹಿಸುತ್ತಾರೆ. ಕೊಡಗು ಜಿಲ್ಲೆಯಲ್ಲಿನ 120 ಗಣಿತ ಶಿಕ್ಷಕರೂ ಪ್ರತೀ ವರ್ಷ ಉತ್ತಮ ಫಲಿತಾಂಶ ಲಭಿಸಲು ಶಕ್ತಿ ಮೀರಿ ಶ್ರಮಿಸುತ್ತಿರುವ ದರಿಂದಾಗಿಯೇ ಜಿಲ್ಲೆಯಲ್ಲಿ ಫಲಿತಾಂಶ ಉತ್ತಮವಾಗಿದೆ ಎಂದರು.

ಕ್ರೀಡಾ ತರಬೇತಿ ಶಿಕ್ಷಕ ಪಾಸುವ ನಂದಾ ಮಾತನಾಡಿ, 23 ವರ್ಷಗಳಿಂದ ಕ್ರೀಡಾ ತರಬೇತಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದು ಸುಂಟಿಕೊಪ್ಪ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು 17 ಬಾರಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವಂತೆ ಮಾಡಿದ್ದು, 10 ಬಾರಿ ರಾಷ್ಟ್ರಮಟ್ಟಕ್ಕೂ ಈ ತಂಡವನ್ನು ಕಳುಹಿಸಲಾಗಿದೆ. ಈ ಶಾಲಾ ತಂಡ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಪಡೆಯುವದೇ ತನ್ನ ಮುಂದಿನ ಗುರಿಯಾಗಿದೆ ಎಂದು ಹೇಳಿದರು .

ಶಿಕ್ಷಕರಿಗೆ ನೇಷನ್ ಬಿಲ್ಡರ್ಸ್ ಪ್ರಶಸ್ತಿ ಪ್ರಧಾನ ಮಾಡಿದ ಮಂಗಳೂರು ರೋಟರಿ ಮಿಡ್ ಟೌನ್ ನ ನಿರ್ದೇಶಕ ರಂಗನಾಥ ಭಟ್, ಶಿಕ್ಷಕರಾಗಿ ಕಾರ್ಯನಿರ್ವಹಿಸುವವರಿಗೆ ಮೊದಲು ತನ್ನ ವೃತ್ತಿಯ ಬಗೆಗೆ ವೃತ್ತಿ ನಿಷ್ಟೆ, ಪ್ರೀತಿ ಇರಬೇಕು ಎಂದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಅನಿಲ್ ಹೆಚ್.ಟಿ, ಮಾತನಾಡಿ, ನೇಷನ್ ಬಿಲ್ಡರ್ಸ್ ಪ್ರಶಸ್ತಿಗೆ ರೋಟರಿ ಮಿಸ್ಟಿ ಹಿಲ್ಸ್ ಕೊಡಗು ಜಿಲ್ಲೆಯ ಸಾಹಿತ್ಯ, ವಿಜ್ಞಾನ, ಗಣಿತ, ಪರಿಸರ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿನ ಶಿಕ್ಷಕರನ್ನು ಆಯ್ಕೆ ಮಾಡಿ ವಿಭಿನ್ನತೆ ಮೆರೆದಿದೆ. ಈಗಾಗಲೇ ಸಾಕಷ್ಟು ಪ್ರಶಸ್ತಿ ಮೂಲಕ ಸಾಮಾಜಿಕ ಹೊಣೆಗಾರಿಕೆ ಹೊಂದಿರುವ ಶಿಕ್ಷಕರನ್ನು ಪ್ರತಿಷ್ಟಿತ ಪ್ರಶಸ್ತಿ ಮೂಲಕ ಗೌರವಿಸಿದ್ದು ಮಿಸ್ಟಿ ಹಿಲ್ಸ್‍ಗೆ ಮತ್ತೊಂದು ಹಿರಿಮೆ ತಂದಿದೆ ಎಂದರು.

ಮಿಸ್ಟಿಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ, ನಿರ್ದೇಶಕರಾದ ಕೆ.ಡಿ. ದಯಾನಂದ್, ಡಾ.ಸಿ. ಆರ್. ಪ್ರಶಾಂತ್, ಬಿ.ಕೆ. ರವೀಂದ್ರ ರೈ, ಶಂಕರ್ ಶರ್ಮಾ, ಅಜಿತ್ ನಾಣಯ್ಯ ಅತಿಥಿ ಪರಿಚಯ ನಿರ್ವಹಿಸಿದರು. ಮಿಸ್ಟಿಹಿಲ್ಸ್ ಉಪಾಧ್ಯಕ್ಷ ಎಸ್.ಎಸ್. ಸಂಪತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ಪಿ.ಎಂ. ಸಂದೀಪ್ ವಂದಿಸಿದರು.