ಭಾಗಮಂಡಲ, ಸೆ. 14: ಪುಷ್ಕರ ಸ್ನಾನಾಚರಣೆ ಹಿನ್ನೆಲೆ ಇಂದೂ ಕೂಡ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ತ್ರಿವೇಣಿ ಸಂಗಮ ಹಾಗೂ ಕಾವೇರಿ ಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡಿ ಪಿಂಡ ಪ್ರದಾನ ಮಾಡಿದರು. ಸ್ವಚ್ಛತೆಯಲ್ಲಿ ಇಂದೂ ಕೂಡ ಅದೇ ಪರಿಸ್ಥಿತಿ ಮುಂದುವರಿದಿದ್ದು, ಇನ್ನಷ್ಟು ಮಲಿನವಾಗಿದೆ.

ಎಲ್ಲೆಂದರಲ್ಲಿ ಮಲ-ಮೂತ್ರ ವಿರ್ಸಜನೆ, ಬಟ್ಟೆ ಇನ್ನಿತರ ತ್ಯಾಜ್ಯಗಳನ್ನು ಎಸೆದಿರುವದು ಕಂಡು ಬಂದಿತು. ತಲಕಾವೇರಿ ಕೊಳದಲ್ಲಿನ ನೀರು ಇನ್ನಷ್ಟು ಕಲುಷಿತಗೊಂಡಿದ್ದು, ಕೊಳದಿಂದ ಹೊರ ಹೋದ ನೀರು ಸಂಗ್ರಹವಾಗುವ ನಂದಿ ಕಂಬದ ಪ್ರದೇಶವಂತೂ ತೀರಾ ಗಲಿಜಾಗಿದೆ. ಇತ್ತ ಸಂಗಮದಲ್ಲಿ ಎಂದಿನಂತೆ ಪಿಂಡ ಪ್ರದಾನದ ತ್ಯಾಜ್ಯಗಳು ತೇಲುತ್ತಿವೆ. ವಾಹನ ನಿಲ್ದಾಣ ಜಾಗದಲ್ಲಿ ತ್ಯಾಜ್ಯದ ರಾಶಿ ಕಂಡುಬಂದಿದ್ದು, ಗ್ರಾ.ಪಂ. ಸದಸ್ಯ ಭಾಸ್ಕರ, ಪುರುಷೋತ್ತಮ, ಆಟೋ ಚಾಲಕರ ಸಂಘದ ಅಧ್ಯಕ್ಷ ಭಾಸ್ಕರ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕಾಳನ ರವಿ, ಪಟ್ಟಮಾಡ ಸುಧೀರ್, ಭವನ್ ಕುಮಾರ್ ಅವರುಗಳ ನೇತೃತ್ವದಲ್ಲಿ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಸ್ವಚ್ಛತೆಯ ಗುತ್ತಿಗೆ ಪಡೆದುಕೊಂಡಿರುವ ಗುತ್ತಿಗೆದಾರನನ್ನು ಕರೆಸಿ, ಸ್ವಚ್ಛ ಮಾಡುವಂತೆ ಸೂಚನೆ ನೀಡಲಾಯಿತು.

ಶುಕ್ರವಾರದಿಂದ ಸಿಬ್ಬಂದಿ ನಿಯೋಜಿಸಿ ಶುಚಿತ್ವ ಕಾರ್ಯ ಮುಂದುವರಿಸುವದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ತಿಳಿಸಿದ್ದಾರೆ. -ಸುನಿಲ್