ಶ್ರೀಮಂಗಲ, ಸೆ. 15: ಭಾರತಕ್ಕೆ ವಿಯೆಟ್ನಾಮ್ ಹಾಗೂ ಇತರ ದೇಶಗಳಿಂದ ಕರಿಮೆಣಸು ಆಮದು ಮಾಡಿಕೊಳ್ಳುವದನ್ನು ಸ್ಥಗಿತ ಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಈಗಾಗಲೇ ಕೇಂದ್ರ ವಾಣಿಜ್ಯ ಸಚಿವ ಸುರೇಶ್ ಪ್ರಭು ಅವರ ಗಮನ ಸೆಳೆಯಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕೆಲವು ವ್ಯಾಪಾರಿಗಳು ವಿಯೆಟ್ನಾಮ್‍ನಿಂದ ಕರಿಮೆಣಸನ್ನು ತಂದು ಕೊಡಗಿನ ಕರಿಮೆಣಸಿ ನೊಂದಿಗೆ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ಬಗ್ಗೆ ಕೊಡಗು ಬೆಳೆಗಾರರ ಒಕ್ಕೂಟದಿಂದ ಸಂಸದರ ಗಮನ ಸೆಳೆದಾಗ ಈ ಪ್ರತಿಕ್ರಿಯೆ ನೀಡಿದರು.

ಈಗಾಗಲೇ ಸೌತ್ ಏಷಿಯಾ ಫೆಸಿಫಿಕ್ ರಾಷ್ಟ್ರಗಳ ಒಕ್ಕೂಟ ಹಾಗೂ ಸಾರ್ಕ್ ಒಪ್ಪಂದದಿಂದ ಕರಿಮೆಣಸು ಭಾರತಕ್ಕೆ ಆಮದಾಗುತ್ತಿದ್ದು, ನೆರೆಯ ಶ್ರೀಲಂಕಾ ಮತ್ತು ನೇಪಾಳ ದೇಶಗಳಿಗೆ ಈ ಒಪ್ಪಂದದಿಂದ ಮುಕ್ತ ತೆರಿಗೆ ವ್ಯಾಪಾರಕ್ಕೆ ಅವಕಾಶವಿದ್ದು, ಈ ದೇಶದ ಮೂಲಕ ವಿಯೆಟ್ನಾಮ್‍ನ ಕರಿಮೆಣಸು ಭಾರತಕ್ಕೆ ಬರುತ್ತಿದೆ. ಇದನ್ನು ತಡೆಗಟ್ಟಿ ದೇಶಿಯ ಕರಿಮೆಣಸು ಬೆಳೆಗಾರರ ಹಿತ ಕಾಪಾಡಲು ಅಗತ್ಯ ಕ್ರಮಕೈಗೊಳ್ಳಲಾಗುವದು ಎಂದು ಹೇಳಿದರು.

ವಿಯೆಟ್ನಾಮ್ ಕರಿಮೆಣಸಿನಲ್ಲಿ ಕ್ರಿಮಿಕೀಟ ನಾಶಕ ಹಾಗೂ ಬ್ಲಿಚಿಂಗ್ ಪದಾರ್ಥಗಳು ಹೆಚ್ಚಿನ ಮಟ್ಟದಲ್ಲಿದ್ದು, ಆಹಾರ ಸುರಕ್ಷಿತ ಮಾನದಂಡ ಮೀರಿ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಈಗಾಗಲೇ ಇಂತಹ ಕರಿಮೆಣಸನ್ನು ವಿಯೆಟ್ನಾಮ್ ತೈವಾನ್‍ಗೆ ರಫ್ತು ಮಾಡಿದ್ದು, ಆ ದೇಶ ತಿರಸ್ಕರಿಸಿದೆ ಎಂಬ ದಾಖಲೆಯನ್ನು ಬೆಳೆಗಾರ ಒಕ್ಕೂಟದ ಪದಾಧಿಕಾರಿಗಳು ಸಂಸದರ ಗಮನ ಸೆಳೆದರು.

ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುಣಮಟ್ಟದಲ್ಲಿ ಕಳಪೆ ಹಾಗೂ ರಾಸಾಯನಿಕ ಬೆರಕೆಯಿಂದ ತಿರಸ್ಕøತವಾಗಿರುವ ಕರಿಮೆಣಸನ್ನು ಭಾರತಕ್ಕೆ ತರಲಾಗುತ್ತಿದೆ ಎಂದು ಬೆಳೆಗಾರ ಒಕ್ಕೂಟದ ಪ್ರಮುಖರು ಗಮನ ಸೆಳೆದರು.

ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ವಿಯೆಟ್ನಾಮ್ ಕರಿಮೆಣಸನ್ನು ಕೊಡಗಿನ ಕರಿಮೆಣಸಿನೊಂದಿಗೆ ಮಿಶ್ರಣ ಮಾಡುವದು ಸರಿಯಲ್ಲ ಎಂದು ಹೇಳಿದರು. ಬೆಳೆಗಾರ ಒಕ್ಕೂಟದ ಉಪಾಧ್ಯಕ್ಷ ಕೇಚಂಡ ಕುಶಾಲಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಮಾಜಿ ಕಾರ್ಯದರ್ಶಿ ಜಮ್ಮಡ ಮೋಹನ್ ಮಾದಪ್ಪ ಹಾಜರಿದ್ದರು.

ಎಸಿಬಿಗೆ ದೂರು: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆಗೆ ವಿಯೆಟ್ನಾಮ್‍ನಿಂದ ಆಮದು ಮಾಡಿಕೊಂಡ ಕರಿಮೆಣಸನ್ನು ತಂದು ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವದು, ವ್ಯಾಪಾರಿಗಳಿಂದ ಸೆಸ್ ವಂಚನೆ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಮಡಿಕೇರಿಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ಕೊಡಗು ಬೆಳೆಗಾರ ಒಕ್ಕೂಟದಿಂದ ದೂರು ಸಲ್ಲಿಸಲಾಗಿದೆ.

33 ಪುಟಗಳ ದೂರು ಹಾಗೂ ದಾಖಲೆಗಳನ್ನು ಎಸಿಬಿ ಉಪ ಅಧಿಕ್ಷಕ ಶಾಂತಮಲ್ಲಪ್ಪ ಅವರಿಗೆ ಬೆಳೆಗಾರರ ಒಕ್ಕೂಟ ಸಲ್ಲಿಸಿದೆ.