ಸೋಮವಾರಪೇಟೆ, ಸೆ. 14: ಕೊಡಗು ಜಿಲ್ಲೆಯ ಜೆಡಿಎಸ್‍ನಲ್ಲಿ ಸಮಗ್ರ ಬದಲಾವಣೆ ತಂದು ಹೊಸ ಮನ್ವಂತರಕ್ಕೆ ಮುನ್ನುಡಿ ಬರೆಯಲು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ. ಈ ಬಗ್ಗೆ ಮುಂದಿನ ಮೂರು ದಿನಗಳ ಒಳಗೆ ಸ್ಪಷ್ಟ ಚಿತ್ರಣ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ.

ತಾ. 13 ರಂದು ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಕೊಡಗಿನ ಜೆಡಿಎಸ್ ಮುಖಂಡರನ್ನು ಭೇಟಿ ಮಾಡಿ ಮೂರು ಗಂಟೆಗಳಿಗೂ ಅಧಿಕ ಕಾಲ ಗಂಭೀರ ಚರ್ಚೆ ನಡೆಸಿರುವ ಕುಮಾರಸ್ವಾಮಿ ಅವರು, ಕೊಡಗು ಜೆಡಿಎಸ್‍ನಲ್ಲಿನ ಗೊಂದಲ, ಸಂಘಟನೆಯ ಮಾಹಿತಿಯನ್ನು ಪಡೆದುಕೊಂಡರು.

ಶಾಸಕ ಜಿ.ಟಿ. ದೇವೇಗೌಡ ಅವರೊಂದಿಗೆ ಜಿಲ್ಲಾ ಮುಖಂಡರ ಸಮಕ್ಷಮ ಸುದೀರ್ಘ ಮಾತುಕತೆ ನಡೆಸಿದ ಸಂದರ್ಭ ಕೊಡಗು ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ಇನ್ನಷ್ಟು ಆಕಾಂಕ್ಷಿಗಳಿರುವ ಅಭಿಪ್ರಾಯ ವ್ಯಕ್ತವಾಗಿದೆ.

ಹಾಲಿ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಜಿಲ್ಲಾ ಉಸ್ತುವಾರಿ ವಿ.ಎಂ. ವಿಜಯ, ಸೋಮವಾರಪೇಟೆ ಸಮಿತಿ ಅಧ್ಯಕ್ಷ ಸುರೇಶ್, ವೀರಾಜಪೇಟೆ ಅಧ್ಯಕ್ಷ ಮತೀನ್, ಮಡಿಕೇರಿಯ ಮನೋಜ್ ಬೋಪಯ್ಯ, ಮಾಜಿ ಜಿಲ್ಲಾಧ್ಯಕ್ಷ ಎಸ್.ಬಿ. ಭರತ್ ಕುಮಾರ್ ಸೇರಿದಂತೆ ಇತರರು ಭಾಗಿಯಾಗಿದ್ದ ಸಭೆಯಲ್ಲಿ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಇತರರೂ ಆಕಾಂಕ್ಷಿಗಳಿರುವ ಬಗ್ಗೆ ಪ್ರಸ್ತಾಪವಾಗಿದೆ.

ಈ ಸಂದರ್ಭ ಎದ್ದುನಿಂತು ಮಾತನಾಡಿದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಬೇಕು. ಅದರಂತೆ ಮಡಿಕೇರಿ ಕ್ಷೇತ್ರದಲ್ಲಿ ಬಿ.ಎ. ಜೀವಿಜಯ ಅವರು ಗೆಲ್ಲಬೇಕು. ಇಂದಿಗೂ ಕೊಡಗಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಯಾರೇ ಸ್ಪರ್ಧಿಸಿದರೂ ವೈಯುಕ್ತಿಕವಾಗಿ 30 ಸಾವಿರಕ್ಕೂ ಅಧಿಕ ಮತ ಪಡೆಯುವ ಸಾಮಥ್ರ್ಯ ಇರುವದು ಮಾಜಿ ಸಚಿವ ಜೀವಿಜಯ ಅವರಿಗೆ ಮಾತ್ರ. ವೀರಾಜಪೇಟೆ ಕ್ಷೇತ್ರದಲ್ಲೂ ತ್ರಿಕೋನ ಸ್ಪರ್ಧೆಗೆ ವೇದಿಕೆ ಸಿದ್ಧಗೊಳಿಸಬೇಕು. ಪಕ್ಷ ಸಂಘಟನೆ ದೃಷ್ಟಿಯಿಂದ ರಾಜ್ಯ ಮುಖಂಡರು ಯಾವದೇ ತೀರ್ಮಾನ ಕೈಗೊಂಡರೂ ತಾನು ಸ್ವೀಕರಿಸುವದಾಗಿ ಸ್ಪಷ್ಟಪಡಿಸಿದ್ದಾರೆ.

ಜೆಡಿಎಸ್ ಜಿಲ್ಲಾಧ್ಯಕ್ಷರ ಬದಲಾವಣೆ ಬಗ್ಗೆ ಇತರ ಮುಖಂಡರು ಗಮನ ಸೆಳೆದ ಸಂದರ್ಭ, ಮುಂದಿನ ಮೂರು ದಿನಗಳ ಒಳಗೆ ಈ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸುತ್ತೇವೆ. ಕೊಡಗಿನಲ್ಲಿ ಪಕ್ಷದ ಸಂಘಟನೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ಕುಮಾರಸ್ವಾಮಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ತಾನು ಕೇವಲ ಜಿಲ್ಲಾಧ್ಯಕ್ಷರು ಮತ್ತು ಕ್ಷೇತ್ರ ಸಮಿತಿ ಅಧ್ಯಕ್ಷರುಗಳ ಸಭೆ ಕರೆದಿದ್ದರೂ ಕಾರ್ಯಕರ್ತರನ್ನು ಕರೆತಂದಿರುವದು ಯಾಕೆ? ಎಂದು ಕೆಲ ಮುಖಂಡರನ್ನು ಪ್ರಶ್ನಿಸಿದ ಕುಮಾರಸ್ವಾಮಿ, ಸಭೆಯ ನಂತರ ಹೊರಬಂದು ಸೋಮವಾರಪೇಟೆ ಭಾಗದಿಂದ ಬಸ್‍ನಲ್ಲಿ ತೆರಳಿದ್ದ 50ಕ್ಕೂ ಅಧಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಜಿ ಅಧ್ಯಕ್ಷ ಭರತ್ ಕುಮಾರ್ ಅವರನ್ನೇ ನೇಮಿಸಬೇಕು ಎಂದು ಕಾರ್ಯಕರ್ತರು ಮನವಿ ಮಾಡಿದರು. ಈ ಮಧ್ಯೆ ಮನೋಜ್ ಬೋಪಯ್ಯ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೂರಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಒಟ್ಟಾರೆ ವಿಧಾನ ಸಭಾ ಚುನಾವಣೆಗೆ ಇನ್ನೇನು ಕೆಲ ತಿಂಗಳುಗಳಷ್ಟೇ ಬಾಕಿಯಿರುವಂತೆ ಕೊಡಗಿನ ಜೆಡಿಎಸ್‍ನಲ್ಲೂ ಬದಲಾವಣೆಯ ಗಾಳಿ ಬೀಸುತ್ತಿದೆ.

- ವಿಜಯ್ ಹಾನಗಲ್