ಮಡಿಕೇರಿ, ಸೆ.15: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪರಿಶಿಷ್ಟರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಸರ್ಕಾರದ ಪ್ರತಿ ಇಲಾಖೆಯಲ್ಲಿ ಶೇ.24 ರಷ್ಟು ಅನುದಾನ ಮೀಸಲಿಟ್ಟು ಕಡ್ಡಾಯವಾಗಿ ಕಾಲಮಿತಿಯೊಳಗೆ ಬಳಕೆ ಮಾಡಬೇಕು ಎಂದು ಕಾನೂನು ರೂಪಿಸಿದೆ.

ಆ ದಿಸೆಯಲ್ಲಿ ದ್ವಿತೀಯ ಪಿ.ಯು.ಸಿ.ಯಲ್ಲಿ ಅಧಿಕ ಅಂಕ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ‘ಲ್ಯಾಪ್‍ಟಾಪ್ ಭಾಗ್ಯ’ ಕಾರ್ಯಕ್ರಮವು ಪ್ರಸಕ್ತ ವರ್ಷದಿಂದ ಜಾರಿಗೆ ಬಂದಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವಿವಿದ್ದೋದ್ದೇಶ ಸಭಾಂಗಣದಲ್ಲಿ ಲ್ಯಾಪ್‍ಟಾಪ್ ವಿತರಿಸುವ ಕಾರ್ಯಕ್ರಮವು ಶುಕ್ರವಾರ ನಡೆಯಿತು.

ಲ್ಯಾಪ್‍ಟಾಪ್ ಪಡೆದು ತಮ್ಮ ಅನಿಸಿಕೆ ಹಂಚಿಕೊಂಡ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 493 ಅಂಕ ಪಡೆದಿರುವ ಕೆ.ಎಸ್. ನಯನ ಅವರು ಸರ್ಕಾರ ಲ್ಯಾಪ್‍ಟಾಪ್ ಭಾಗ್ಯ ಕಲ್ಪಿಸಿರುವದರಿಂದ ಸೈಬರ್ ಕೇಂದ್ರಗಳಿಗೆ ಹೋಗುವದು ತಪ್ಪಿದಂತಾಗಿದೆ. ಇದರಿಂದ ಸಮಯ ಉಳಿತಾಯವಾಗಲಿದೆ. ಜೊತೆಗೆ ಮನೆಯಲ್ಲಿಯೇ ಮಾಹಿತಿ ಪಡೆಯಲು ಸಹಕಾರಿಯಾಗಿದೆ ಎಂದರು.

‘ಆಲೂರು ಸಿದ್ದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ 522 ಅಂಕ ಪಡೆದಿರುವ ಜಿ.ಪಿ.ಮಂಜುನಾಥ್ ಅವರು ಸರ್ಕಾರ ಲ್ಯಾಪ್‍ಟಾಪ್ ನೀಡುತ್ತಿರುವದು ಬರಡು ಭೂಮಿಯಲ್ಲಿ ಬೆಳೆಯುತ್ತಿರುವ ಗಿಡಕ್ಕೆ ನೀರು ಸಿಕ್ಕಿದಂತಾಗಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು.’

ಕುಶಾಲನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ 547 ಅಂಕ ಪಡೆದಿರುವ ಎಲ್.ಎಸ್.ರಮ್ಯ ಅವರು ಮಾತನಾಡಿ ಶಿಕ್ಷಕರು, ಮೇಲ್ವಿಚಾರಕರು, ಅಡುಗೆಯವರು ಹೀಗೆ ಎಲ್ಲರ ಸಹಕಾರದಿಂದ ಓದಿನ ಕಡೆ ಗಮನಹರಿಸಲು ಸಾಧ್ಯವಾಯಿತು ಎಂದರು.

ಇದೇ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 538 ಅಂಕ ಪಡೆದಿರುವ ಎಚ್.ಎನ್.ಚೇತನ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದಲು ಉತ್ತಮ ವಾತಾವರಣವಿದ್ದು, ಸರ್ಕಾರ ಲ್ಯಾಪ್‍ಟಾಪ್ ವಿತರಿಸುತ್ತಿರುವದು ತುಂಬಾ ಉಪಯುಕ್ತವಾಗಿದೆ ಎಂದರು.

ವೀರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 524 ಅಂಕ ಪಡೆದಿರುವ ವೈ.ಬಿ.ಐಶ್ವರ್ಯ ಅವರು ಮಾತನಾಡಿ ತಂದೆ ತಾಯಂದಿರು ಕೂಲಿ ಕೆಲಸ ಮಾಡುತ್ತಿದ್ದಾರೆ. ಲ್ಯಾಪ್‍ಟಾಪ್ ಹೆಚ್ಚಿನ ವಿದ್ಯಾರ್ಜನೆಗೆ ಪ್ರಯೋಜನಕಾರಿ ಯಾಗಿದೆ ಎಂದು ಅವರು ಹೇಳಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ 505 ಅಂಕ ಪಡೆದಿರುವ ಎಂ.ಕೆ. ಪ್ರಿಯ ಸರ್ಕಾರ ಪರಿಶಿಷ್ಟರಿಗಾಗಿ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ವಿವಿಧ ಸೌಲಭ್ಯ ನೀಡುತ್ತಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.

ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಪ್ರಾಂಶುಪಾಲರ ಸಂಘದ ಅಧ್ಯಕೆÀ್ಷ ಭವಾನಿ ಅವರು ಮಾತನಾಡಿದರು. ಸರ್ಕಾರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಟಿ.ಸ್ವಾಮಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಾಯಾದೇವಿ ಗಲಗಲಿ, ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಮಹಲಿಂಗಯ್ಯ, ಖಜಾಂಜಿ ಪುರುಷೋತ್ತಮ, ಉಪನ್ಯಾಸಕರ ಸಂಘದ ಫಿಲಿಪ್ ವಾಸು, ಪ್ರಾಂಶುಪಾಲರ ಸಂಘದ ಮಾಜಿ ಅಧ್ಯಕ್ಷ ಕೆಂಚಪ್ಪ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಇತರರು ಇದ್ದರು. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಯಪ್ಪ ಸ್ವಾಗತಿಸಿದರು. ಉಪನ್ಯಾಸಕ ಹಂಡ್ರಲ್ಲಿ ನಾಗರಾಜು ನಿರೂಪಿಸಿ, ವಂದಿಸಿದರು.